ಕೊರೋನಾ ಸಂಹಾರಕ್ಕಾಗಿ ಹೊರನಾಡು ಕ್ಷೇತ್ರದಲ್ಲಿ ನಡೆಯಿತು ಚಂಡಿಕಯಾಗ

ಮಹಾಚಂಡಿಕಾ ಹೋಮವನ್ನು ನಡಿಸುವುದರಿಂದ ಜಗತ್ತಿನೆಲ್ಲೆಡೆ ಸಮೃದ್ದಿ, ಸಂರಕ್ಷಣೆ ನೆಲೆಸಲಿದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

news18-kannada
Updated:October 29, 2020, 7:42 AM IST
ಕೊರೋನಾ ಸಂಹಾರಕ್ಕಾಗಿ ಹೊರನಾಡು ಕ್ಷೇತ್ರದಲ್ಲಿ ನಡೆಯಿತು ಚಂಡಿಕಯಾಗ
ಮಹಾಚಂಡಿಕಾ ಹೋಮ
  • Share this:
ಚಿಕ್ಕಮಗಳೂರು : ಇಡೀ ಲೋಕವನ್ನೇ ಅಲುಗಾಡಿಸುತ್ತಿರುವ ಮಹಾಮಾರಿ ಕೊರೋನಾ. ಅದೆಷ್ಟೇ ಸಾವು ನೋವುಗಳು ಸಂಭವಿಸಿದರೂ ಕೂಡ ಇಲ್ಲಿವರೆಗೂ ಈ ರೋಗಕ್ಕೆ ವ್ಯಾಕ್ಸಿನ್ ಕಂಡುಹಿಡಿಯಲು ಸಾಧ್ಯವೇ ಆಗಿಲ್ಲ. ವೈದ್ಯ ಲೋಕವೇ ಕೊರೊನಾಕ್ಕೆ ಮದ್ದು ಕಂಡು ಹಿಡಿಯಲು ಅವಿರತ ಪ್ರಯತ್ನ ಮಾಡುತ್ತಿದೆ. ಇನ್ನೊಂದೆಡೆ ಕೊರೋನಾ ನಿರ್ಮೂಲನೆಗಾಗಿ ವಿಶೇಷ ಪೂಜೆ, ಹೋಮ ಹವನವೂ ಕೂಡ ನಡೆಸಲಾಗುತ್ತಿದೆ. ಅದೇ ರೀತಿ ನವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಕೊರೋನಾ ಸಂಹಾರಕ್ಕೆ ವಿಶೇಷ ಚಂಡಿಕಾಹೋಮ ನಡೆಸಲಾಯಿತು. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ  ಜಿಲ್ಲೆಯ ಹೊರನಾಡಿನಲ್ಲಿ 11 ದಿನಗಳ ಕಾಲ ನವರಾತ್ರಿಯನ್ನು ಅದ್ದೂರಿಯಾಗಿ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

ನಿತ್ಯವೂ ಅನ್ನಪೂರ್ಣೇಶ್ವರಿಯನ್ನು ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಕೊನೆಯ ದಿನವಾದ ಇಂದು ದ್ವಾದಶಿಯಾಗಿದ್ದು ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಮಹಾಚಂಡಿಕಾ ಹೋಮವನ್ನು ನಡೆಸಲಾಯಿತು. ಋತ್ವಿಜರು ಸಾಮೂಹಿಕವಾಗಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಚಂಡಿಕಾ ಹೋಮವನ್ನು ನೆರವೇರಿಸಿದರು. ಮಹಾಚಂಡಿಕಾ ಹೋಮವನ್ನು ನಡಿಸೋದ್ರಿಂದ ಜಗತ್ತಿನೆಲ್ಲೆಡೆ ಸಮೃದ್ದಿ, ಸಂರಕ್ಷಣೆ ನೆಲೆಸಲಿದೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಸದ್ಯ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡ್ತಿರುವ ಕೊರೊನಾ ವಿರುದ್ಧ ಮಹಾಚಂಡಿಕಾ ಹೋಮವನ್ನು ನಡೆಸಲಾಯಿತು. ಹೆಮ್ಮಾರಿ ಕೊರೊನಾ ಬೇಗ ಈ ಜಗತ್ತಿನಿಂದ ತೊಲಗಿ ಎಲ್ಲರಿಗೂ ಆರೋಗ್ಯ ಭಾಗ್ಯ ಕರುಣಿಸಲಿ ಅಂತಾ ವಿಶೇಷ ಪ್ರಾರ್ಥನೆಯನ್ನ ಅನ್ನಪೂರ್ಣೇಶ್ವರಿ ದೇವಿಗೆ ಸಲ್ಲಿಸಲಾಯಿತು.

ಇದನ್ನು ಓದಿ: ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಯವರ ಅಮೋಘ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ

ಮಹಾಚಂಡಿಕಾ ಹೋಮದ ಪ್ರಯುಕ್ತ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿಯನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ಅನ್ನದಾತೆಗೆ ಹೋಮದ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಅರ್ಚನೆಯನ್ನು ನೆರವೇರಿಸಲಾಯಿತು. ದೇಗುಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಈ ಮಹಾಚಂಡಿಕಾ ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು. ಮಾತ್ರವಲ್ಲ ದ್ವಾದಶಿಯಂದು ನಡೆಯೋ ಈ ವಿಶೇಷ ಚಂಡಿಕಾ ಹೋಮವನ್ನು ಕಣ್ತುಂಬಿಕೊಳ್ಳೋ ಭಕ್ತರಿಗೆ ಒಳಿತಾಗುತ್ತೆ ಅನ್ನೋ ನಂಬಿಕೆಯಿಂದಲೇ ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಹೊರನಾಡಿಗೆ ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದರು.

ಈ ಬಾರಿಯ 11 ದಿನಗಳ ಕಾಲ ನಡೆದ ನವರಾತ್ರಿ ಸಂಭ್ರಮ ಇಂದಿನ ಚಂಡಿಕಾ ಹೋಮದೊಂದಿಗೆ ಸಂಪನ್ನವಾಯ್ತು. ಈ ಬಾರಿ ಕೊರೊನಾ ಸಂಹಾರ ಹಾಗೂ ಜಲಪ್ರಳಯದ ನೊಂದ ಜನರಿಗೆ ಉತ್ತಮ ಭವಿಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಹೊರನಾಡಿನಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರದ್ದಾಭಕ್ತಿಯೊಂದಿಗೆ ಮಹಾ ಚಂಡಿಕಾಯಾಗ ನಡೆಯುವುದರೊಂದಿಗೆ 11 ದಿನಗಳ ಕಾಲ ನಡೆದ ನವರಾತ್ರಿ ಉತ್ಸವಕ್ಕೆ ಸಂಭ್ರಮದ  ತೆರೆಬಿದ್ದಂತಾಗಿದೆ.
Published by: Seema R
First published: October 29, 2020, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading