ಶಿವರಾತ್ರಿಯಂದು ಮಾದಪ್ಪನ ಸೇವೆಗೆ ಕಾಲ್ನಡಿಗೆಯಲ್ಲೇ ಕಾಡುಮೇಡು ಸುತ್ತಿ ಬರುತ್ತಿರುವ ಭಕ್ತರ ದಂಡು

ಎಪ್ಪತ್ತೇಳು ಮಲೆಗಳ ಒಡೆಯ ಮಹದೇಶ್ವರ ಕೋಟ್ಯಂತರ ಮಂದಿ ಭಕ್ತರ ಆರಾಧ್ಯದೈವ. ಮಾದಪ್ಪನ ಸನ್ನಿದಿಯಲ್ಲಿ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಆಚರಣೆ ಮಾಡುವುದೆಂದರೆ ಭಕ್ತರಿಗೆ ಎಲ್ಲಿಲ್ಲದ ಉತ್ಸಾಹ. ಹಾಗಾಗಿಯೇ ಲಕ್ಷಾಂತರ ಮಂದಿ ಭಕ್ತರು ಕಲ್ಲು ಮುಳ್ಳುಗಳ ಹಾದಿಯಲ್ಲಿ ಕಾಡುಮೇಡು ಸುತ್ತಿ ಕಾಲ್ನಡಿಗೆಯಲ್ಲಿ ಬೆಟ್ಟದತ್ತ ಧಾವಿಸುತ್ತಿದ್ದಾರೆ.

news18
Updated:February 19, 2020, 3:00 PM IST
ಶಿವರಾತ್ರಿಯಂದು ಮಾದಪ್ಪನ ಸೇವೆಗೆ ಕಾಲ್ನಡಿಗೆಯಲ್ಲೇ ಕಾಡುಮೇಡು ಸುತ್ತಿ ಬರುತ್ತಿರುವ ಭಕ್ತರ ದಂಡು
ಮಲೆ ಮಹದೇಶ್ವರನ ಬಳಿ ಸಾಗುತ್ತಿರುವ ಭಕ್ತಾದಿಗಳು
  • News18
  • Last Updated: February 19, 2020, 3:00 PM IST
  • Share this:
ಚಾಮರಾಜನಗರ(ಫೆ. 19): ಮಲೆಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ. ಎಪ್ಪತ್ತೇಳು ಬೆಟ್ಟಗಳ ನಡುವೆ ನೆಲೆಸಿರುವ ಮಹದೇಶ್ವರ ಸ್ವಾಮಿ ಕೋಟ್ಯಂತರ ಭಕ್ತರ ಆರಾಧ್ಯದೈವ. ಪ್ರತಿವರ್ಷದಂತೆ ಈ ವರ್ಷವೂ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆಗೆ ಮಹದೇಶ್ವರ ಬೆಟ್ಟ ಸಜ್ಜಾಗಿದೆ. ಮಾದಪ್ಪನ ಸನ್ನಿದಿಯಲ್ಲಿ ಶಿವರಾತ್ರಿ ಆಚರಣೆ ಮಾಡುವುದೆಂದರೆ ಭಕ್ತರಿಗೆ ಎಲ್ಲಿಲ್ಲದ ಉತ್ಸಾಹ. ಹಾಗಾಗಿ ಜನವರಿ 21 ರಂದು ನಡೆಯುವ ಮಹಾಶಿವರಾತ್ರಿಗೆ ಕಳೆದ ಮೂರು ದಿನಗಳಿಂದಲೇ ಮಲೆ ಮಹದೇಶ್ವರ ಬೆಟ್ಟದತ್ತ ಭಕ್ತ ಸಾಗರವೇ ಹರಿದುಬರುತ್ತಿದೆ. ವಯಸ್ಸಿನ ಭೇದವಿಲ್ಲದೆ ಮಹಿಳೆಯರು ಮಕ್ಕಳೆನ್ನದೆ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲೇ ಬರತೊಡಗಿದ್ದಾರೆ.

ಕೋಲಾರ, ಬೆಂಗಳೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಹಲಗೂರು, ಮಳವಳ್ಳಿ, ಮಂಡ್ಯ ಹೀಗೆ ನಾನಾ ಕಡೆಯಿಂದ ಕಡೆಯಿಂದ ಜೀವಭಯ ಲೆಕ್ಕಿಸದೆ ಕಾವೇರಿ ನದಿ ದಾಟಿ ಕಾಡು ಮೇಡು ಸುತ್ತಿ ಭಕ್ತರು ಮಾದಪ್ಪನ ಬೆಟ್ಟದತ್ತ ಧಾವಿಸುತ್ತಿದ್ದಾರೆ.  ದಟ್ಟ ಅರಣ್ಯದ ನಡುವೆ ನಡೆದು ಬಂದರೂ ಮಹದೇಶ್ವರನ ಕೃಪೆಯಿಂದಾಗಿ ತಮಗೆ ಯಾವುದೇ ಪ್ರಾಣಿಗಳಿಂದ ತೊಂದರೆಯಾಗಿಲ್ಲ. ಮಾದಪ್ಪನ ಧ್ಯಾನ ಮಾಡುತ್ತಾ ಬರುವುದರಿಂದ ಎಷ್ಟೇ ದೂರ ನಡೆದರೂ ಯಾವುದೇ ರೀತಿಯ ದಣಿವೂ ಆಗುತ್ತಿಲ್ಲ ಎನ್ನುತ್ತಾರೆ ಭಕ್ತರು.

ಹೀಗೆ ಕಾಲ್ನಡಿಗೆಯಲ್ಲಿ ದಣಿದು ಬರುವ ಭಕ್ತರಿಗೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ನಾನಾ ಕಡೆ ಆಯಾ ಗ್ರಾಮಸ್ಥರು ಊಟ, ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ, ನೆರಳಿನ ಸೌಲಭ್ಯ ಕಲ್ಪಿಸಿದ್ದಾರೆ. ಭಕ್ತರ ಸೇವೆ ಮಾಡಿದರೆ ಮಾದಪ್ಪನ ಸೇವೆ ಮಾಡಿದಂತೆ ಎಂಬ ಭಾವನೆಯಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ದಾರಿಯುದ್ದಕ್ಕೂ ರೈತರು ಊಟ ತಿಂಡಿ ಅಷ್ಟೇ ಅಲ್ಲದೆ ಕುಡಿಯುವ ನೀರು, ಮಜ್ಜಿಗೆ, ಪಾನಕ, ತಂಪು ಪಾನೀಯಗಳನ್ನು ನೀಡಿ ಭಕ್ತರ ದಣಿವಾರಿಸುತ್ತಿದ್ದಾರೆ.

ಇದನ್ನೂ ಓದಿ: ಎಂಬತ್ತರ ದಶಕದಲ್ಲಿ 9 ಬಾರಿ ಅಥ್ಲೆಟಿಕ್ಸ್ ಚಾಂಪಿಯನ್ ಆಗಿದ್ದ ಕಂಬಳ ಆಟಗಾರ ಆನಂದ್ ಶೆಟ್ಟಿ

ಫೆಬ್ರುವರಿ 21ರ ಶಿವರಾತ್ರಿಯಂದು ಮಲೆಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದ್ದು ರಾತ್ರಿಯಿಡಿ ವಿಶೇಷ ಅಭಿಷೇಕ ಪೂಜೆ ಪುನಸ್ಕಾರಗಳು ನಡೆಯಲಿವೆ. ಫೆಬ್ರುವರಿ 22 ಮತ್ತು 23 ರಂದು ವಿಶೇಷ ಸೇವೆ ಹಾಗು ಉತ್ಸವಗಳು ಮತ್ತು ಫೆಬ್ರುವರಿ 24ರಂದು ಮಹಾ ರಥೋತ್ಸವ ಜರುಗಲಿದೆ. ಮಾದಪ್ಪನ ಭಕ್ತ ಸಮೂಹ ಶಿವರಾತ್ರಿ ದಿನವಾದ ಶುಕ್ರವಾರ ಅಥವಾ ಅದರ ಮುನ್ನಾ ದಿನವೇ ಬೆಟ್ಟ ತಲುಪುವ ನಿರೀಕ್ಷೆ ಇದ್ದು ಐದು ಲಕ್ಷಕ್ಕೂ ಅಧಿಕ ಮಂದಿ ಸೇರಬಹುದು ಎಂದು ಅಂದಾಜಿಸಲಾಗಿದೆ.

ಭಕ್ತರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿಯಿಂದ 400 ಬಸ್​ಗಳು ಹಾಗು ತಮಿಳುನಾಡು ಸಾರಿಗೆ ನಿಗಮದಿಂದ 100 ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು, ಅಂತರಗಂಗೆ ಬಳಿ ಸ್ನಾನದ ವ್ಯವಸ್ಥೆ, ವಿವಿದೆಡೆ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ, ಶೌಚಾಲಯ, ದಾಸೋಹ, ಲಗೇಜ್ ಕೌಂಟರ್, ಆರೋಗ್ಯ ಕೇಂದ್ರ ಹೀಗೆ ನಾನಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

(ವರದಿ: ಎಸ್.ಎಂ. ನಂದೀಶ್)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 19, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading