KSRTC: ಇನ್ನುಮುಂದೆ ಕೆಎಸ್​ಆರ್​ಟಿಸಿ ಬಸ್​ನ ಎಲ್ಲ ಸೀಟುಗಳ ಬುಕಿಂಗ್​ಗೂ ಅವಕಾಶ?; ಸರ್ಕಾರಕ್ಕೆ ಮನವಿ

KSRTC Booking: ಕೊರೋನಾ ಹಿನ್ನೆಲೆ ಇದೀಗ ನಾನ್​ ಎಸಿ ಬಸ್​ಗಳಲ್ಲಿರುವ 54 ಸೀಟುಗಳಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಎಸಿ ಬಸ್​ಗಳಲ್ಲಿರುವ 40 ಸೀಟುಗಳಲ್ಲಿ 20 ಪ್ರಯಾಣಿಕರನ್ನು ಕರೆದುಕೊಂಡು ಮಾತ್ರ ಅನುಮತಿ ಇದೆ.

Sushma Chakre | news18-kannada
Updated:August 26, 2020, 9:46 AM IST
KSRTC: ಇನ್ನುಮುಂದೆ ಕೆಎಸ್​ಆರ್​ಟಿಸಿ ಬಸ್​ನ ಎಲ್ಲ ಸೀಟುಗಳ ಬುಕಿಂಗ್​ಗೂ ಅವಕಾಶ?; ಸರ್ಕಾರಕ್ಕೆ ಮನವಿ
ಕೆಎಸ್​ಆರ್​ಟಿಸಿ ಬಸ್
  • Share this:
ಬೆಂಗಳೂರು (ಆ. 26): ಕೊರೋನಾದಿಂದಾಗಿ ಬಸ್​ಗಳಲ್ಲಿ ಓಡಾಡುವವರೇ ಕಡಿಮೆಯಾಗಿದ್ದಾರೆ. ಇದರಿಂದ ಕೆಎಸ್​ಆರ್​ಟಿಸಿ ಬಸ್​ಗೆ ಭಾರೀ ನಷ್ಟವುಂಟಾಗಿದೆ. ಅನ್​ಲಾಕ್​ ಬಳಿಕ ಕೆಎಸ್​ಆರ್​ಟಿಸಿ ಬಸ್​ ಸಂಚಾರಕ್ಕೆ ಅನುಮತಿ ನೀಡಿದ್ದರೂ ಪ್ರಯಾಣಿಕರ ಮಧ್ಯೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕೆ ಆದೇಶಿಸಿತ್ತು. ಇದರಿಂದ ಬಸ್​ಗಳಿಗೆ ನಷ್ಟವಾಗಿದ್ದರಿಂದ ಬಸ್​ನಲ್ಲಿರುವ ಎಲ್ಲ ಸೀಟುಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಬೇಕೆಂದು ಕೆಎಸ್​ಆರ್​ಟಿಸಿ ಸರ್ಕಾರಕ್ಕೆ ಮನವಿ ಮಾಡಿದೆ.

ಕೊರೋನಾ ಹಿನ್ನೆಲೆ ಇದೀಗ ನಾನ್​ ಎಸಿ ಬಸ್​ಗಳಲ್ಲಿರುವ 54 ಸೀಟುಗಳಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಎಸಿ ಬಸ್​ಗಳಲ್ಲಿರುವ 40 ಸೀಟುಗಳಲ್ಲಿ 20 ಪ್ರಯಾಣಿಕರನ್ನು ಕರೆದುಕೊಂಡು ಮಾತ್ರ ಅನುಮತಿ ಇದೆ. ಕೊರೋನಾದಿಂದಾಗಿ ಪ್ರಯಾಣಿಕರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಕಾರಣಕ್ಕೆ ಇತ್ತೀಚೆಗೆ ಕೆಲವು ಕೆಎಸ್​ಆರ್​ಟಿಸಿ ಸೀಟುಗಳಲ್ಲಿಯೂ ಬದಲಾವಣೆ ಮಾಡಲಾಗಿತ್ತು.

ಹಲವು ರಾಜ್ಯಗಳಲ್ಲಿ ಬಸ್​ಗಳ ಪ್ರಯಾಣಿಕರ ಸಾಮಾಜಿಕ ಅಂತರದ ನಿಯಮವನ್ನು ಸಡಿಲಗೊಳಿಸಲಾಗಿದೆ. ಇದೇರೀತಿ ಕರ್ನಾಟಕದಲ್ಲೂ ಕೆಎಸ್​ಆರ್​ಟಿಸಿಯಲ್ಲಿ ಎಲ್ಲ ಸೀಟುಗಳಲ್ಲೂ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಮತ್ತು ತಜ್ಞರ ಜೊತೆ ಚರ್ಚಿಸಿದ ಬಳಿಕ ಈ ಬಗ್ಗೆ ನಿರ್ಧಾರ ಮಾಡುವುದಾಗಿ ಸರ್ಕಾರ ತಿಳಿಸಿದೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಹಾಡಹಗಲೇ ಮನೆ ಮಾಲೀಕಳ ಕಗ್ಗೊಲೆ; ವೃದ್ಧೆಯ ಕತ್ತು ಸೀಳಿ ಹತ್ಯೆ ಮಾಡಿದ್ದ ದಂಪತಿ ಬಂಧನ

ಕರ್ನಾಟಕದಲ್ಲಿ ಲಾಕ್​ಡೌನ್ ಬಳಿಕ ಮೇ 19ರಿಂದ ಕೆಎಸ್​ಆರ್​ಟಿಸಿ ಬಸ್​ ಸಂಚಾರವನ್ನು ಮರು ಆರಂಭಿಸಲಾಗಿತ್ತು. ಆರಂಭದಲ್ಲಿ ಕೆಲವೇ ಬಸ್​ಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಬಹುತೇಕ ಎಲ್ಲ ಭಾಗಗಳಿಗೆ ಬಸ್​ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬಸ್​ಗಳಲ್ಲಿ ಒಂದು ಸೀಟಿನಲ್ಲಿ ಒಬ್ಬರು ಮಾತ್ರ ಪ್ರಯಾಣಿಸಲು ಅನುಮತಿ ನೀಡಿರುವುದರಿಂದ ಹಲವು ಖಾಸಗಿ ಬಸ್​ಗಳು ಇನ್ನೂ ಸಂಚಾರ ಆರಂಭಿಸಿಲ್ಲ. ಒಂದುವೇಳೆ ಸರ್ಕಾರ ಈ ನಿಯಮವನ್ನು ಸಡಿಲಗೊಳಿಸಿದರೆ ಖಾಸಗಿ ಬಸ್​ಗಳು ಕೂಡ ಸಂಚಾರವನ್ನು ಆರಂಭಿಸಲಿವೆ.

ಜೂನ್​-ಜುಲೈ ತಿಂಗಳಿಗಿಂತ ಆಗಸ್ಟ್​ನಲ್ಲಿ ಕೆಎಸ್​ಆರ್​ಟಿಸಿಯಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸೋಮವಾರ ಕೆಎಸ್​ಆರ್​ಟಿಸಿಗೆ 4 ಕೋಟಿ ರೂ. ಆದಾಯ ಬಂದಿದೆ. ಲಾಕ್​ಡೌನ್​ ಬಳಿಕ ಒಂದು ದಿನದಲ್ಲಿ ಸಂಗ್ರಹವಾದ ಅತಿದೊಡ್ಡ ಮೊತ್ತ ಇದಾಗಿದೆ. ಲಾಕ್​ಡೌನ್​ಗೂ ಮೊದಲು ಒಂದು ದಿನಕ್ಕೆ 8ರಿಂದ 9 ಕೋಟಿ ರೂ. ಆದಾಯ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ಆದಾಯ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್​ಡೌನ್ ಬಳಿಕ ಕೊರೋನಾ ಭಯದಿಂದ ಜನರು ಖಾಸಗಿ ವಾಹನವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಹೀಗಾಗಿ, ಬಸ್​ಗಳಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ರಾಜ್ಯದಲ್ಲಿ 500 ಎಸಿ ಬಸ್​ಗಳಲ್ಲಿ ಕೇವಲ 40 ಕೆಎಸ್​ಆರ್​ಟಿಸಿ ಬಸ್​ಗಳು ಮಾತ್ರ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ಸಂಚರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಒಟ್ಟು 3,500 ಬಿಎಂಟಿಸಿ ಬಸ್​ಗಳು ಪ್ರತಿದಿನ ಸಂಚರಿಸುತ್ತಿವೆ. ದಿನವೊಂದಕ್ಕೆ ಬಿಎಂಟಿಸಿಗೆ ಸುಮಾರು 1.2 ಕೋಟಿ ರೂ. ಆದಾಯ ಬರುತ್ತಿದೆ.
Published by: Sushma Chakre
First published: August 26, 2020, 9:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading