ವೆಂಟಿಲೇಟರ್​ಗಳ ರಫ್ತಿಗೆ ಮುಂದಾಗಿರುವ ಹೃದಯಹೀನ ಸರ್ಕಾರ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್​ ದಾಳಿ

ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು ರಾಜ್ಯ ಸರ್ಕಾರ ನಮ್ಮ‌ ಕೆಲಸವನ್ನು ಸುಲಭ‌ ಮಾಡಿದೆ. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಲ್ಲ. ಕೋರ್ಟ್​ನಲ್ಲಿಯಾದರೂ ನಮ್ಮನ್ನು ಎದುರಿಸಲೇ ಬೇಕಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Sushma Chakre | news18-kannada
Updated:August 2, 2020, 4:45 PM IST
ವೆಂಟಿಲೇಟರ್​ಗಳ ರಫ್ತಿಗೆ ಮುಂದಾಗಿರುವ ಹೃದಯಹೀನ ಸರ್ಕಾರ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್​ ದಾಳಿ
ಸಿದ್ದರಾಮಯ್ಯ
  • Share this:
ಬೆಂಗಳೂರು (ಆ. 2): ಬಿಜೆಪಿ ಸರ್ಕಾರದ ವಿರುದ್ಧ ಲೆಕ್ಕ ಕೊಡಿ ಎಂಬ ಅಭಿಯಾನ ಶುರುಮಾಡಿದ್ದ ಕಾಂಗ್ರೆಸ್​ ಟ್ವಿಟ್ಟರ್​ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಎದುರು ಸಾಲುಸಾಲು ಪ್ರಶ್ನೆಗಳನ್ನಿಟ್ಟಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಈ ಬಗ್ಗೆ ಸರಣಿ ಟ್ವೀಟ್​ ಮೂಲಕ ಟೀಕಾಪ್ರಹಾರ ನಡೆಸಿದ್ದಾರೆ.

ಕರ್ನಾಟಕದಲ್ಲಿ ಪ್ರತಿದಿನ 5,000ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 80-90 ಮಂದಿ ಸಾಯುತ್ತಿದ್ದಾರೆ.‌ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರ ಪ್ರಕಾರ ಕೊರೊನಾ ಸಾವಿನ ಪ್ರಮಾಣ ಇಳಿಯುತ್ತಿದೆಯಂತೆ. ಅದಕ್ಕಾಗಿ ವೆಂಟಿಲೇಟರ್ ರಫ್ತಿಗೆ ಅವಕಾಶಕ್ಕೆ ಕೊಡ್ತಾರಂತೆ. ಇದೊಂದು ಹೃದಯಹೀನ‌ ಸರ್ಕಾರ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.




ರಾಜ್ಯದಲ್ಲಿ ಕೊರೊನಾ ಸಾವು ಹೆಚ್ಚಳಕ್ಕೆ ವೆಂಟಿಲೇಟರ್ ಕೊರತೆಯೂ ಒಂದು ಕಾರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು 57,396. ಲಭ್ಯ ಇರುವ ವೆಂಟಿಲೇಟರ್​‌ಗಳು ಕೇವಲ 801. ಒಟ್ಟು ರಾಜ್ಯದ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ರಫ್ತು ಹೆಚ್ಚಿಸುವ ಚಿಂತೆ ಶುರುವಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.



ರಾಜ್ಯದಲ್ಲಿ ಕೊರೊನಾ ಅನಿಯಂತ್ರಿತವಾಗಿ ಹರಡುವುದಕ್ಕೂ, ಸರ್ಕಾರದ ಭ್ರಷ್ಟಾಚಾರಕ್ಕೂ ನೇರವಾದ ಸಂಪರ್ಕ ಇದೆ. ಈ ಕಾರಣಕ್ಕಾಗಿ ನಾವು ಅಭಿಯಾನದ ಮೂಲಕ ಜನರ ಬಳಿ ನೇರವಾಗಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜನರ ಕಷ್ಟದ ಕಾಲದಲ್ಲಿ ವಿರೋಧಪಕ್ಷಗಳು ಸಹಕಾರ ನೀಡಬೇಕು, ಆರೋಪ ಮಾಡುವುದು ಸರಿಯೇ? ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಳುತ್ತಿದ್ದಾರೆ. ಇಂತಹ ಸಾವು-ನೋವಿನ ಕಷ್ಟ ಕಾಲದಲ್ಲಿ ಜನರ ಜೀವ ಉಳಿಸಬೇಕೇ ಹೊರತು ಭ್ರಷ್ಟಾಚಾರ ಮಾಡುವುದು ಸರಿಯೇ? ಎಂದು ನಾವು ಕೇಳುತ್ತಿದ್ದೇವೆ. ನಿಮ್ಮ ಆತ್ಮಸಾಕ್ಷಿಯನ್ನು ಕೇಳಿ ಇದಕ್ಕೆ ಉತ್ತರ ನೀಡಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.



ಇದನ್ನೂ ಓದಿ: ಕುವೈತ್​ಗೆ ಹೋದ ರಾಜ್ಯದ 200 ಯುವಕರು ಅತಂತ್ರ; ಹೈದರಾಬಾದ್ ಕಂಪನಿ ವಿರುದ್ಧ ಈಶ್ವರ್ ಖಂಡ್ರೆ ಆಕ್ರೋಶ

ನಮ್ಮಿಂದ ಸಹಕಾರ ನಿರೀಕ್ಷಿಸುವ ಬಿಜೆಪಿ ಸರ್ಕಾರ ಕೊರೊನಾ ಕಾಲದಲ್ಲಿ ಮಧ್ಯಪ್ರದೇಶದ ನಮ್ಮ ಸರ್ಕಾರಕ್ಕೆ ಯಾಕೆ‌ ಸಹಕಾರ ಕೊಡಲಿಲ್ಲ? ರಾಜಸ್ಥಾನದ‌ ನಮ್ಮ ಸರ್ಕಾರವನ್ನು ಉರುಳಿಸಲು ಹೊರಟದ್ದು ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.



ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕೆ ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಕೊರೊನಾ ಸಾವು-ನೋವುಗಳಲ್ಲಿ ಮಹಾರಾಷ್ಟ್ರ-ತಮಿಳುನಾಡುಗಳನ್ನು ಮೀರಿಸಿ ಕರ್ನಾಟಕ ನಂಬರ್ ಒನ್ ಆಗಲು ಹೊರಟಿದೆ. ಈಗಲೂ ಸುಮ್ಮನಿದ್ದರೆ ಜನದ್ರೋಹ‌ ಆಗಲಾರದೇ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.



ಬೆಡ್ ಇಲ್ಲ, ಔಷಧಿ, ಊಟ ಕೊಡುತ್ತಿಲ್ಲ. ಆ್ಯಂಬುಲೆನ್ಸ್ ಇಲ್ಲ, ವೆಂಟಿಲೇಟರ್ ಇಲ್ಲ. ಬೀದಿಯಲ್ಲಿಯೇ ಹೆಣವಾದರು, ಸತ್ತಮೇಲೆಯೂ ದಪನ ಮಾಡುವವರಿಲ್ಲ ಎನ್ನುವುದೇ ಮಾಧ್ಯಮಗಳಲ್ಲಿ ನಿತ್ಯ ಸುದ್ದಿ. ರಾಜ್ಯದಲ್ಲಿ ಸೋಂಕಿನ ಸಂಖ್ಯೆ,1,29,287ಕ್ಕೆ, ಸಾವಿನ ಸಂಖ್ಯೆ 2412ಕ್ಕೆ ಏರಿದೆ. ಇನ್ನೂ ನಾವು ಸುಮ್ಮನಿರಬೇಕಾ? ರಾಜ್ಯದ ಜನ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಪೂರೈಕೆ ಯಂತ್ರಗಳಿಲ್ಲ, ಊಟ-ತಿಂಡಿ ಇಲ್ಲ, ಉದ್ಯೋಗ ಇಲ್ಲ ಎಂದು ಗೋಳಾಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರಕ್ಕೆ ಜನರ ಕಷ್ಟ ಕಾಣಲಿಲ್ಲ. ಬದಲಾಗಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಗಳಿಸಬಹುದಾದ ದುಡ್ಡು‌‌ ಮಾತ್ರ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.



ಅಕ್ರಮದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರಶ್ನಿಸಿದರೆ "ಮಾಹಿತಿ ಕೊಡಿ’’ ಎನ್ನುತ್ತಾರೆ. ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅದು ಸುಳ್ಳು ಎನ್ನುತ್ತಾರೆ. ತನಿಖೆ ಮಾಡಿಸಿ ಎಂದರೆ ಸುಳ್ಳಿನ ಬಗ್ಗೆ ತನಿಖೆ ಯಾಕೆ ಎಂದು ಕೇಳುತ್ತಾರೆ. ಜನರ ಬಳಿ ಹೋಗದೆ ನಮಗೆ ಬೇರೆ ದಾರಿ ಏನಿದೆ? 24 ಗಂಟೆಯೊಳಗೆ ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ಮಾಹಿತಿ ಕಳಿಸಿಕೊಡ್ತೇವೆ ಎಂದು ಯಡಿಯೂರಪ್ಪ ಹೇಳಿ 24 ದಿನ ಕಳೆದು ಹೋಗಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಒಂದು ಹಾಳೆ ಮಾಹಿತಿ ನನಗೆ ಬಂದಿಲ್ಲ. ಸತ್ಯ ಹೇಳಲು ನಿಮಗೆ ಭಯ ಯಾಕೆ? ಎಂದು ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.



ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು ರಾಜ್ಯ ಸರ್ಕಾರ ನಮ್ಮ‌ ಕೆಲಸವನ್ನು ಸುಲಭ‌ ಮಾಡಿದೆ. ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಲ್ಲಾ? ಕೋರ್ಟ್ ನಲ್ಲಿಯಾದರೂ ನಮ್ಮನ್ನು ಎದುರಿಸಲೇ ಬೇಕಲ್ಲಾ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.



ನಾನು ಬಹಿರಂಗವಾಗಿ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ.  ಕೋಟ್ಯಂತರ ರೂಪಾಯಿಯ ಖರೀದಿ ಆದೇಶಗಳನ್ನು ಸರ್ಕಾರ ತಡೆಹಿಡಿದಿದೆ. ಹೊಟ್ಟೆಗೆ ಕಲ್ಲು ಹಾಕಿದನಲ್ಲಾ ಎಂದು ಇವರಿಗೆಲ್ಲ ನನ್ನ ಮೇಲೆ ಕೋಪ. ಅದಕ್ಕಾಗಿ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.



ಸ್ವದೇಶಿ ನಿರ್ಮಿತ ವೆಂಟಿಲೇಟರ್​ಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ವೆಂಟಿಲೇಟರ್​ನಲ್ಲಿರುವ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಬಹಳ ಇಳಿಮುಖವಾಗಿದೆ. ಹೀಗಾಗಿ, ನಮ್ಮ ದೇಶದಲ್ಲಿ ಸಿದ್ಧವಾದ ವೆಂಟಿಲೇಟರ್​ಗಳನ್ನು ರಫ್ತು ಮಾಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿತ್ತು.
Published by: Sushma Chakre
First published: August 2, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading