HOME » NEWS » State » KARNATAKA CM BS YEDIYURAPPA WARNED MAHARASHTRA CM UDDHAV THACKERAY ON CONTROVERSIAL STATEMENT ON BELAGAVI BORDER SCT

ಬೆಳಗಾವಿ ನಮ್ಮದು ಎಂದ ಉದ್ಧವ್​ ಠಾಕ್ರೆ; ಉದ್ಧಟತನ ಬೇಡ ಎಂದು ಎಚ್ಚರಿಸಿದ ಸಿಎಂ ಯಡಿಯೂರಪ್ಪ

ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಗಡಿ ವಿಚಾರದಲ್ಲಿ ಉದ್ಧಟತನದ ಹೇಳಿಕೆ ನೀಡುವ ಮೊದಲು ಓರ್ವ ಭಾರತೀಯನಾಗಿ ಯೋಚಿಸಿ ಎಂದು ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Sushma Chakre | news18-kannada
Updated:January 18, 2021, 11:33 AM IST
ಬೆಳಗಾವಿ ನಮ್ಮದು ಎಂದ ಉದ್ಧವ್​ ಠಾಕ್ರೆ; ಉದ್ಧಟತನ ಬೇಡ ಎಂದು ಎಚ್ಚರಿಸಿದ ಸಿಎಂ ಯಡಿಯೂರಪ್ಪ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
  • Share this:
ಬೆಂಗಳೂರು (ಜ. 18): ಮರಾಠಿ ಭಾಷೆ ಮಾತನಾಡುವವರು ಬಹುಸಂಖ್ಯೆಯಲ್ಲಿರುವ ಕರ್ನಾಟಕದ ಗಡಿಯ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ನಿನ್ನೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಡಿದ್ದ ಟ್ವೀಟ್​ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಸುರೇಶ್ ಕುಮಾರ್ ಸೇರಿದಂತೆ ಅನೇಕ ನಾಯಕರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಬೆಳಗಾವಿ ನಮ್ಮದು ಎಂದು ಹ್ಯಾಶ್​ಟ್ಯಾಗ್ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು ತಾಳುವ ಮೂಲಕ ಮಹಾರಾಷ್ಟ್ರದ ಸಿಎಂ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಿರುವಾಗ ಪ್ರಾದೇಶಿಕತೆಯ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ. ಅದೇರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ ಮಾಡುತ್ತಿರುವುದು ನೋವಿನ ಸಂಗತಿ. ನೀವು ಓರ್ವ ಭಾರತೀಯನಾಗಿ ಯೋಚಿಸಿ, ಒಕ್ಕೂಟ ತತ್ವವನ್ನು ಗೌರವಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ: ಸಿಎಂ ಉದ್ಧವ್ ಠಾಕ್ರೆ

ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕೂಡ ಮಹಾರಾಷ್ಟ್ರದ ಗಡಿ ತಗಾದೆ ಬಗ್ಗೆ ಕಿಡಿ ಕಾರಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಅತಿರೇಕದ ಪರಮಾವಧಿ. ಉದ್ಧವ್ ಠಾಕ್ರೆ ಅವರು ವಿರಾಮದ ವೇಳೆಯಲ್ಲಿ ಇತಿಹಾಸವನ್ನೊಮ್ಮೆ ಕುಳಿತು ಓದಲಿ. ಅಂದು ಮಹಾಜನ್ ಆಯೋಗದ ರಚನೆಗೆ ಪಟ್ಟು ಹಿಡಿದಿದ್ದೇ ಮಹಾರಾಷ್ಟ್ರ. ತಾನೇ ಬಲವಂತ ಮಾಡಿ ರಚನೆಯಾದ ಆಯೋಗದ ವರದಿಯನ್ನು ಒಪ್ಪುವುದಿಲ್ಲ ಎಂದರೆ ನಾವ್ಯಾರೂ ಕೇಳಲು ಸಿದ್ದರಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಮರಾಠಿ ಭಾಷಿಗರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಾಪಾಸ್ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದು ನಿನ್ನೆ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದರು.
Published by: Sushma Chakre
First published: January 18, 2021, 11:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories