Assembly Session - ಇಂದಿನಿಂದ 8 ದಿನಗಳ ಕಾಲ ಕರ್ನಾಟಕ ವಿಧಾನಮಂಡಲ ಅಧಿವೇಶನ

ಇಂದಿನಿಂದ 8 ದಿನಗಳ ಕಾಲ ನಡೆಯುವು ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಕೊರೋನಾ ವೈರಸ್, ಕೃಷಿ ನೀತಿ ಮೊದಲಾದ ವಿಚಾರಗಳನ್ನಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ಪಕ್ಷವನ್ನು ಕಟ್ಟಿಹಾಕಲು ವಿಪಕ್ಷಗಳು ಯೋಜಿಸಿವೆ.

news18-kannada
Updated:September 21, 2020, 8:24 AM IST
Assembly Session - ಇಂದಿನಿಂದ 8 ದಿನಗಳ ಕಾಲ ಕರ್ನಾಟಕ ವಿಧಾನಮಂಡಲ ಅಧಿವೇಶನ
ವಿಧಾನಸೌಧ
  • Share this:
ಬೆಂಗಳೂರು(ಸೆ. 21): ಕೊರೋನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಇಂದು ರಾಜ್ಯದ ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗುತ್ತಿದೆ. ಎಂಟು ದಿನಗಳ ಕಾಲ ನಡೆಯಲು ನಿಗದಿಯಾಗಿರುವ ಈ ಮುಂಗಾರು ಅಧಿವೇಶನದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಹರಿಹಾಯಲು ವಿಪಕ್ಷಗಳು ಎದುರು ನೋಡುತ್ತಿವೆ. ಕೊರೋನಾ ಹಿನ್ನೆಲೆಯಲ್ಲಿ ವಿಳಂಬವಾಗಿರುವ ಈ ಅಧಿವೇಶನದಲ್ಲಿ ಕೊರೋನಾ ನಿರ್ವಹಣೆಯಲ್ಲಿನ ವೈಫಲ್ಯ, ಕೇಂದ್ರ ಸರ್ಕಾರದ ಕೃಷಿ ಮಸೂದೆ ಇತ್ಯಾದಿ ವಿಚಾರಗಳ ಮೇಲೆ ವಿಪಕ್ಷಗಳು ಹೆಚ್ಚು ಗಮನ ವಹಿಸುವ ಸಾಧ್ಯತೆ ಇದೆ.

ಈ ಎಂಟು ದಿನಗಳ ಅಧಿವೇಶನದಲ್ಲಿ ರಾಜ್ಯ ಸರ್ಕಾರ 30ಕ್ಕೂ ಹೆಚ್ಚು ಮಸೂದೆಗಳನ್ನ ಮಂಡಿಸುವ ನಿರೀಕ್ಷೆ ಇದೆ. ಇದರಲ್ಲಿ ಸುಗ್ರೀವಾಜ್ಞೆಗಳೂ ಒಳಗೊಂಡಿವೆ ಎಪಿಎಂಸಿ ತಿದ್ದುಪಡಿ, ಭೂಸುಧಾರಣೆ ತಿದ್ದುಪಡಿಗೆ ಸುಗ್ರೀವಾಜ್ಞೆಗಳನ್ನ ಸರ್ಕಾರ ಹೊರಡಿಸುವ ಸಾಧ್ಯತೆ ಇದೆ. ಈ ಎರಡು ತಿದ್ದುಪಡಿ ಕಾಯ್ದೆಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ.

ಇದನ್ನೂ ಓದಿ: ಮುಂಗಾರು ಅಧಿವೇಶನ: ಸರ್ಕಾರವನ್ನು ಕಟ್ಟಿ ಹಾಕಲು ಕಾಂಗ್ರೆಸ್​ನಿಂದ ಹೊಸ ಅಸ್ತ್ರ; ಜೆಡಿಎಸ್​ ನಡೆ ನಿಗೂಢ

ಕೋವಿಡ್, ಕೃಷಿ ಜೊತೆಗೆ ಡ್ರಗ್ಸ್ ಪ್ರಕರಣಗಳು, ನೆರೆ  ಪರಿಹಾರ, ಡಿಜೆ ಹಳ್ಳಿ ಹಿಂಸಾಚಾರ ಇತ್ಯಾದಿ ವಿಚಾರಗಳು ಅಧಿವೇಶನದಲ್ಲಿ ಚರ್ಚೆಯಾಗಬಹುದು. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾದ್ದರಿಂದ ಅವರ ನಾಯಕತ್ವದಲ್ಲಿ ಹೊಸ ತೀಕ್ಷ್ಣತೆ ತೋರುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ.

ಇದೇ ವೇಳೆ, ಕೇಂದ್ರ ಸರ್ಕಾರ ಮುಂಗಾರು ಅಧಿವೇಶನಕ್ಕೆ ಕತ್ತರಿ ಹಾಕಿದಂತೆ ರಾಜ್ಯ ಸರ್ಕಾರವೂ ಅಧಿವೇಶನವನ್ನು ಮೊಟಕುಗೊಳಿಸುವ ಚಿಂತನೆಯಲ್ಲಿ ಇದೆ ಎನ್ನಲಾಗುತ್ತಿದೆ. ಎಂಟು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಅಧಿವೇಶನವನ್ನು ಮೂರೇ ದಿನಕ್ಕೆ ಮುಕ್ತಾಯಗೊಳಿಸುವ ಇರಾದೆಯಲ್ಲಿದೆ ಸರ್ಕಾರ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೊಂದು ವೇಳೆ ಅದು ನಿಜವಾದಲ್ಲಿ ರಾಜ್ಯ ಸರ್ಕಾರದ ಮಸೂದೆ ಮತ್ತು ಸುಗ್ರೀವಾಜ್ಞೆಗಳಿಗೇ ಬಹುತೇಕ ಸಮಯ ವ್ಯಯವಾಗುತ್ತದೆ. ಚರ್ಚೆಯಾಗುವ ಸಾಧ್ಯತೆ ತೀರಾ ಕಡಿಮೆಯಾಗಿಬಿಡಬಹುದು. ಆದರೆ, ಅಧಿವೇಶನದ ಅವಧಿಯನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಲು ಬಿಡುವುದಿಲ್ಲ ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ.

ಇದನ್ನೂ ಓದಿ: ಶಿರಾ ವಿಧಾನಸಭಾ ಉಪಚುನಾವಣೆ: ಬಿಜೆಪಿಗೆ ಪವರ್ ಸ್ಟ್ರೋಕ್ ಕೊಟ್ಟ ಕಾಂಗ್ರೆಸ್ ಕಟ್ಟಾಳುಗಳು

ಇನ್ನು, ಕೋವಿಡ್ ಕಾರಣದಿಂದ ಅಧಿವೇಶನದಲ್ಲಿ ಗೈರು ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ. ಸುಮಾರು 20 ಶಾಸಕರು ಸದನಕ್ಕೆ ಗೈರಾಗಬಹುದು. ಇದರಲ್ಲಿ ಆರು ಸಚಿವರೂ ಇದ್ದಾರೆ. ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿವೇಶನದಲ್ಲಿ ಬರುವುದಿಲ್ಲ ಎಂದು ಮೂಲಗಳು ಹೇಳುತ್ತಿವೆ.
Published by: Vijayasarthy SN
First published: September 21, 2020, 8:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading