Independence Day 2020: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಬಿಗಿ ಭದ್ರತೆ; ಸಾರ್ವಜನಿಕರಿಗಿಲ್ಲ ಪ್ರವೇಶ

Happy Independence Day: ಈ ವರ್ಷ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 16 ತುಕಡಿ, 350 ಮಂದಿಯಿಂದ ಮಾತ್ರ ಗೌರವ ವಂದನೆ ಇರಲಿದೆ. ಕೇವಲ ಪೊಲೀಸರು, ಗಣ್ಯರು, ಕೋವಿಡ್ ವಾರಿಯರ್ಸ್​ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊರೋನಾದಿಂದ ಗುಣಮುಖರಾದ ಎಲ್ಲಾ ವಯೋಮಾನದ 25 ಜನರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

news18-kannada
Updated:August 15, 2020, 8:00 AM IST
Independence Day 2020: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಬಿಗಿ ಭದ್ರತೆ; ಸಾರ್ವಜನಿಕರಿಗಿಲ್ಲ ಪ್ರವೇಶ
ಕಳೆದ ವರ್ಷ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ
  • Share this:
ಬೆಂಗಳೂರು (ಆ. 15): ದೇಶಾದ್ಯಂತ ಇಂದು 74 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ದೂರಿಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೋನಾ ಭೀತಿಯಿಂದಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಭಾರತದಲ್ಲಿ ಕೊರೋನಾ ಸೊಂಕು ಹೆಚ್ಚಳವಾಗಿರುವುದರಿಂದ ಈ ಬಾರಿ ಸರಳ ಸ್ವಾತಂತ್ರ್ಯ ದಿನಾಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಮಾಣಿಕ್ ಷಾ ಪರೇಡ್ ಮೈದಾನದ ಸ್ವಾತಂತ್ರ್ಯೋತ್ಸವಕ್ಕೆ ಈ ಬಾರಿ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಸಾರ್ವಜನಿಕರಿಗೂ ಪ್ರವೇಶ‌ವಿಲ್ಲ. ಕೇವಲ ಪೊಲೀಸರು, ಗಣ್ಯರು, ಕೋವಿಡ್ ವಾರಿಯರ್ಸ್​ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 75 ವಾರಿಯರ್ಸ್​​ಗಳಿಗೆ ಕಾರ್ಯಕ್ರಮಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಕೆಲವು ಪ್ರಮುಖ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಾರಿ ಗೌರವ ವಂದನೆ ನೀಡುವ ತುಕಡಿಗಳು ಕೂಡ ಕಡಿಮೆ ಪ್ರಮಾಣದಲ್ಲಿ ಇರಲಿವೆ.

ಈ ವರ್ಷ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 16 ತುಕಡಿ, 350 ಮಂದಿಯಿಂದ ಮಾತ್ರ ಗೌರವ ವಂದನೆ ಇರಲಿದೆ. ಟ್ರಾಫಿಕ್ ಪೊಲೀಸ್, ಕೆಎಸ್ಆರ್ಪಿ, ಬಿಎಸ್ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಸೇರಿದಂತೆ 16 ತುಕಡಿಗಳಿಗೆ ಅವಕಾಶ ನೀಡಲಾಗಿದೆ. ಪಥ ಸಂಚಲದಲ್ಲಿ ಭಾಗವಹಿಸುವವರು ಒಂದು ದಿನ ಮುಂಚಿತವಾಗಿ ಆಂಟಿಜೆನ್ ಟೆಸ್ಟ್ ಮಾಡಿಸಿರಬೇಕು. ಈ ಬಾರಿ ಪರೇಡ್​ನಲ್ಲಿ ಸ್ಕೌಟ್ ಮತ್ತು ಎನ್​ಸಿಸಿ ತುಕಡಿಗಳು‌‌ ಇರುವುದಿಲ್ಲ. ಜೊತೆಗೆ ಶಾಲಾ ಕಾಲೇಜುಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಪ್ರವೇಶ ನಿರ್ಬಂಧಗೊಳಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು 500 ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Independence Day 2020 Live: ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಈ ಬಾರಿ ಕೊರೋನಾದಿಂದ ಗುಣಮುಖರಾದ ಎಲ್ಲಾ ವಯೋಮಾನದ 25 ಜನರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮಾಸ್ಕ್ ಹಾಗೂ ಸೋಷಿಯಲ್ ಡಿಸ್ಟನ್ಸ್​ ಕಡ್ಡಾಯ. ಪಥ ಸಂಚಲದಲ್ಲಿ ಭಾಗವಹಿಸುವರು ಮಾಸ್ಕ್ ಧರಿಸಬೇಕು. ಜೊತೆಗೆ ಸಾಮಾಜಿಕ ಅಂತರದಲ್ಲಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್​ ವಹಿಸಲಾಗಿದ್ದು, ಒಟ್ಟು 1200 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. 800 ಲಾ ಆ್ಯಂಡ್ ಅರ್ಡರ್ ಪೊಲೀಸರು, 400 ಸಂಚಾರಿ ಪೊಲೀಸರನ್ನು ಭದ್ರತೆಗೆ ನಿಯೋಜನೆಮಾಡಲಾಗಿದೆ. ಮಾಣಿಕ್ ಷಾ ಮೈದಾನದ ಸುತ್ತ ಸಿಸಿಟಿವಿ ಅಳವಡಿಸಲಾಗಿದೆ. ಮೈದಾನದ ಒಳಗೆ ಮತ್ತು ಹೊರಗೆ 62 ಹೈಟೆಕ್ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಸಿಸಿಟಿವಿ ಮಾನಿಟರಿಂಗ್ ಮಾಡಲು ಪ್ರತ್ಯೇಕ ಸೆಂಟರ್ ತೆರೆಯಲಾಗಿದೆ.

ಇದನ್ನೂ ಓದಿ: Indian Independence Day 2020 : ಸ್ವತಂತ್ರ ಭಾರತದೊಂದಿಗೆ ಗುರುತಿಸಿಕೊಳ್ಳದ ಪ್ರದೇಶಗಳ ಪರಿಚಯ

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಈಗಾಗಲೇ ಸ್ವಾತಂತ್ರ್ಯ ಆಚರಣೆಗೆ ಭರದ ಸಿದ್ದತೆ ನಡೆದಿದೆ. ಬಾಂಬ್ ಸ್ಕ್ವಾಡ್​ ಮತ್ತು ಡಾಗ್ ಸ್ಕ್ವಾಡ್​ನಿಂದ ತಪಾಸಣೆ ನಡೆಸಲಾಗಿದೆ. ಡಿಜೆ ಹಳ್ಳಿ ಗಲಭೆ ಪ್ರಕರಣ ಹಿನ್ನಲೆ ಟೈಟ್ ಸೆಕ್ಯುರಿಟಿ ನೀಡಲಾಗಿದೆ. ಕೇವಲ 500 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಯಾರಿಗೂ ಪ್ರವೇಶವಿಲ್ಲ. ಪಾಸ್ ಹೊಂದಿದ ಸೀಮಿತ 500 ಮಂದಿಗೆ ಮಾತ್ರ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
Published by: Sushma Chakre
First published: August 15, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading