ಪರಿಹಾರ ಕೊಡದ ಸರ್ಕಾರದ ವಿರುದ್ಧ ಅನ್ನದಾತನ ಆಕ್ರೋಶ; ಭಿಕ್ಷೆ ಬೇಡಿದ ಹಣವನ್ನು ಪಿಎಂ ಪರಿಹಾರ ನಿಧಿಗೆ ಕಳುಹಿಸಿದ ರೈತರು

ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಈರುಳ್ಳಿ, ಶೇಂಗಾ, ಮೆಕ್ಕೆ ಜೋಳ ಮಳೆ ನೀರು ಪಾಲಾಗಿದೆ. ಅದರಲ್ಲೂ ಈರುಳ್ಳಿ ಬೆಳೆದ ರೈತರು ಅವುಗಳನ್ನ ಕೊಯ್ಲು ಮಾಡಿ ಮಾರಲು ಆಗದೆ ಹೊಲದಲ್ಲಿಯೇ ಕೊಳೆತು ಹೋಗಿವೆ. ಇದರಿಂದ ಬೇಸತ್ತ ಈರುಳ್ಳಿ ಬೆಳೆದ ಅನೇಕ ರೈತರು ಈರುಳ್ಳಿ ಬೆಳೆದ ಜಮೀನುಗಳನ್ನ ಬೆಳೆ ಸಮೇತ ಟ್ರಾಕ್ಟರ್ ಮೂಲಕ ವ್ಯವಸಾಯ ಮಾಡಿದ್ದಾರೆ.

news18-kannada
Updated:October 24, 2020, 10:41 AM IST
ಪರಿಹಾರ ಕೊಡದ ಸರ್ಕಾರದ ವಿರುದ್ಧ ಅನ್ನದಾತನ ಆಕ್ರೋಶ; ಭಿಕ್ಷೆ ಬೇಡಿದ ಹಣವನ್ನು ಪಿಎಂ ಪರಿಹಾರ ನಿಧಿಗೆ ಕಳುಹಿಸಿದ ರೈತರು
ಸಾಂದರ್ಭಿಕ ಚಿತ್ರ
  • Share this:
ಚಿತ್ರದುರ್ಗ(ಅ.24): ಅತಿವೃಷ್ಠಿಯಿಂದ ಬೆಳೆ ಹಾನಿಯಾದ ರಾಜ್ಯದ ರೈತರಿಗೆ ಪರಿಹಾರ ನೀಡದೆ ಮೀನಾಮೇಶ ಎಣಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅವಮಾನವಾಗುವಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತ ಸಂಘಟನೆ ನೇತೃತ್ವದಲ್ಲಿ ರೈತರು ಭಿಕ್ಷೆ ಬೇಡಿದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕಳುಹಿಸುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ವರಣ ದೇವ ಮೆರೆದಿರೋ ಅಟ್ಟಹಾಸ  ಅಷ್ಟಿಷ್ಟಲ್ಲ. ಅದರಲ್ಲೂ ಕಳೆದ ಒಂದು ತಿಂಗಳಿಂದ ಸೃಷ್ಠಿಸಿರೋ ಅವಾಂತರಕ್ಕೆ ರಾಜ್ಯದ ಅನ್ನದಾತರು ಅಕ್ಷರಸಹಃ ನಲುಗಿ ಹೋಗಿದ್ದಾರೆ. ಯಾಕಂದ್ರೆ ರೈತರು ಕಷ್ಟಪಟ್ಟು ಬೆವರು ಸುರಿಸಿದ ಲಕ್ಷಾಂತರ ಎಕರೆ ಭೂಮಿಯಲ್ಲಿ ಬೆಳೆದಿದ್ದ ಅನೇಕ ಬೆಳೆಗಳು ಮಳೆ ನೀರಲ್ಲಿ ಮುಳುಗಿ ಕೊಳೆತು ಹೋಗಿವೆ. ರೈತರ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಇಳುವರಿಯಿಂದ ಬೆಳೆದು ನಿಂತಿದ್ದ ಬೆಳೆಗಳು,  ಆ ಬೆಳೆಗಳು ಇನ್ನೇನು ಕೈ ಸೇರುತ್ತವೆ, ನಮ್ಮ ದುಡಿಮೆಗೆ ತಕ್ಕ ಪ್ರತಿಫಲ ಸಿಕ್ಕೇಬಿಟ್ಟಿತು ಅಂದುಕೊಂಡಿದ್ದ ಅನ್ನದಾತರ ಕನಸಿಗೆ ಮಳೆರಾಯ ತಣ್ಣೀರು ಎರಚಿದ್ದು, ಕೈಗೆ ಬಂದ ತುತ್ತು ಬಾಯಿ ಬರಲಿಲ್ಲವಲ್ಲ ಎನ್ನುವ ಸಂಕಟದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ.

ಅಷ್ಟೆ ಅಲ್ಲದೇ ನಮ್ಮ ನೋವಿಗೆ ನಮ್ಮನ್ನ ಆಳುವ ಸರ್ಕಾರಗಳು ಸ್ಪಂದಿಸುತ್ತವೆ, ಬೆಳೆ ಪರಿಹಾರವನ್ನಾದರೂ ಕೊಡುತ್ತವೆಯೇನೋ ಅಂತ ಸರ್ಕಾರಕ್ಕೆ ರೈತರು ಅಲವತ್ತುಕೊಂಡರೂ ಸರ್ಕಾರಗಳು ಮಾತ್ರ ಕಿವಿ ಕೇಳದಂತೆ ನಟಿಸುತ್ತಿವೆ. ಈ ಚಿತ್ರಣಕ್ಕೆ ಚಿತ್ರದುರ್ಗ ಜಿಲ್ಲೆ ಹೊರತಾಗಿಲ್ಲ. ಪ್ರತೀ ವರ್ಷವೂ ಬರದ ಹಣೆ ಪಟ್ಟಿ ಹೊತ್ತುಕೊಂಡಿದ್ದ  ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಬೆಳೆ ಬೆಳೆಯೋ ಆಸೆಯಿಂದ ಹುತ್ತು ಬಿತ್ತಿದ ಬೀಜ ಬೆಳೆದು ಪೈರು ಬಿಡುವ ಮುನ್ನವೇ ಮಳೆ ಇಲ್ಲದೆ ಬಿಸಿಲಿಗೆ ಒಣಗಿ ಜಿಲ್ಲೆಯ ಅನ್ನದಾತರನ್ನ ಸಾಲಗಾರರನ್ನಾಗಿ ಮಾಡುತ್ತಿತ್ತು.

ಅದ್ಯಾವ ಕೇಡಿಗೋ ಏನೋ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಬಿತ್ತಿದ ಬೆಳೆಯಲ್ಲಾ ಉತ್ತಮವಾಗಿ ಬೆಳೆದು ನಿಂತಿತ್ತು. ಅದರಲ್ಲೂ ಈರುಳ್ಳಿ, ಶೇಂಗಾ, ಮಕ್ಕೇಜೋಳಗಳ ಬೆಳೆಯೋ ನೋಡಲು ಬಲು ಸೊಗಸಾಗಿ ಕಾಣುತ್ತಿತ್ತು. ಇದರಿಂದ ಈ ವರ್ಷವಾದ್ರೂ ಬೆಳೆದ ಬೆಳೆಗಳು ಪೂರ್ಣವಾಗಿ ಮನೆ ಸೇರುತ್ತವೆ. ಲಾಭವನ್ನೂ ತಂದುಕೊಡುತ್ತವೆ ಎಂಬ ನೂರಾರು ಆಸೆಯನ್ನ ಜಿಲ್ಲೆಯ ರೈತರು ವ್ಯಕ್ತಪಡಿಸುತ್ತಿದ್ದರು.   ಆದರೆ ಬಾರದೆ ಕೆಡಿಸುತ್ತಿದ್ದ ಮಳೆ ಈ ವರ್ಷ ಬಂದು ಅತಿವೃಷ್ಠಿ ತಂದು ರೈತರ ಬದುಕಿಗೆ ಕಾದ ಬರೆ ಎಳೆದಂತೆ ಮಾಡಿದೆ.

ಈ ಉಪಚುನಾವಣೆಯಲ್ಲೂ ಡಿಕೆಶಿ ಗೂಂಡಾ ರಾಜಕಾರಣ ಮಾಡ್ತಿದಾರೆ; ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಯಾಕಂದ್ರೆ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಈರುಳ್ಳಿ, ಶೇಂಗಾ, ಮೆಕ್ಕೆ ಜೋಳ ಮಳೆ ನೀರು ಪಾಲಾಗಿದೆ. ಅದರಲ್ಲೂ ಈರುಳ್ಳಿ ಬೆಳೆದ ರೈತರು ಅವುಗಳನ್ನ ಕೊಯ್ಲು ಮಾಡಿ ಮಾರಲು ಆಗದೆ ಹೊಲದಲ್ಲಿಯೇ ಕೊಳೆತು ಹೋಗಿವೆ. ಇದರಿಂದ ಬೇಸತ್ತ ಈರುಳ್ಳಿ ಬೆಳೆದ ಅನೇಕ ರೈತರು ಈರುಳ್ಳಿ ಬೆಳೆದ ಜಮೀನುಗಳನ್ನ ಬೆಳೆ ಸಮೇತ ಟ್ರಾಕ್ಟರ್ ಮೂಲಕ ವ್ಯವಸಾಯ ಮಾಡಿದ್ದಾರೆ.

ಇನ್ನು ಚಳ್ಳಕೆರೆ, ಹಿರಿಯೂರೂ, ಚಿತ್ರದುರ್ಗ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಸಾವಿರಾರು ರೂಪಾಯಿ ಕೂಲಿ ಕೊಟ್ಟು ಬೆಳೆ ಕಟಾವು ಮಾಡಿಸಿ ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಹಾಕಿ‌ ಮಾರಾಟ ಮಾಡಲಾಗದೆ, ಮಳೆಯಲ್ಲಿ  ನೆಂದ ಈರುಳ್ಳಿಯನ್ನ ಟ್ರಾಕ್ಟರ್ ಲೋಡ್​​ಗಳಲ್ಲಿ ತಿಪ್ಪೆಗೆ, ಖಾಲಿ ಜಮೀನುಗಳಿಗೆ ಸುರಿದಿದ್ದಾರೆ. ಇಷ್ಟೆಲ್ಲ  ಚಿತ್ರಣಗಳು ವರದಿಯಾದರೂ , ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಪರಿಹಾರ ನೀಡದೇ ಸರ್ಕಾರದಲ್ಲಿ ಹಣವಿಲ್ಲ, ಕೊರೋನಾ ಸಂಕಷ್ಟ ಎಂಬ ನಾನಾ ಕಾರಣಗಳನ್ನ ಹೇಳಿ ಮೀನಾಮೇಶ ಎಣಿಸುತ್ತಿದೆ.

ಇದರಿಂದ ಬೇಸತ್ತು ಅನ್ನದಾತರ ತಾಳ್ಮೆಯ ಕಟ್ಟೆ ಹೊಡೆದಂತಿದೆ. ಅದಕ್ಕೆ ಸಾಕ್ಷಿ ಎಂಬಂತೆ, ರೈತರ ನೆರವಿಗೆ ಧಾವಿಸದೆ ಬೆಳೆ ಪರಿಹಾರ ನೀಡದೆ  ವಿಳಂಬ ಮಾಡುತ್ತಿರುವ ಸರ್ಕಾರಗಳಿಗೆ ಅವಮಾನ ಆಗುವಂತೆ ಚಿತ್ರದುರ್ಗದಲ್ಲಿ ಪ್ರತಿಭಟನೆ ಮಾಡಿದ ರೈತರು ಭಿಕ್ಷೆ ಬೇಡಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಣ ಕಳುಹಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ ರಾಜ್ಯ ರೈತ ಸಂಘದ ಕಾರ್ಯಕರ್ತರು ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಲ್ಲದೇ ಹಾನಿಗೊಳಗಾದ ಶೇಂಗಾ, ಈರುಳ್ಳಿ ಬೆಳೆಗಳನ್ನ ಪ್ರದರ್ಶಿಸಿ,  ಬೀದಿ ಬದಿಯ ವ್ಯಾಪಾರಿಗಳು, ಚಪ್ಪಲಿ ಹೊಲೆಯುವರು, ವಾಹನ ಸವಾರರು ಸೇರಿದಂತೆ ಅಂಗಡಿ, ಹೊಟೆಲ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಣ ಕಳಿಸುತ್ತೇವೆ ಎಂದು ಅವಮಾನವಾಗುವಂತೆ  ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿದರು.

ಇನ್ನು, ಭಿಕ್ಷೆ ಬೇಡಿ ಬಂದ ಹಣವನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಬಳಿ ಲೆಕ್ಕ ಮಾಡಿದ್ರು. ಭಿಕ್ಷೆಯಲ್ಲಿ ಬಂದ 4610ರೂಪಾಯಿ ಹಣವನ್ನ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿದ್ರು .ಈ ಕುರಿತು ಮಾತನಾಡಿದ ರೈತ ಮುಖಂಡ ನುಲೇನೂರು ಶಂಕ್ರಪ್ಪ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ರೈತರ ಬೆಳೆ  ಕೊಚ್ವಿಹೋಗಿದೆ, ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಇಷ್ಟೆಲ್ಲಾ ಕಷ್ಟಗಳಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಬಂದಿಲ್ಲ, ಹೀಗಾಗಿ ನಾವು ಭಿಕ್ಷೆ ಬೇಡಿ ಬಂದಿರುವ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸುತ್ತೇವೆ, ಅವರಿಗೆ ಮರ್ಯಾದೆ ಇದ್ದರೆ ಇನ್ನಾದರೂ ಸಂತ್ರಸ್ತರಿಗೆ ಪರಿಹಾರ ನೀಡಲಿ ಎಂದು ಆಗ್ರಹಿಸಿದ್ದಾರೆ.
Published by: Latha CG
First published: October 24, 2020, 10:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading