ಎರಡನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ; ಇಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ಸಾಧ್ಯತೆ

ಸರ್ಕಾರದ ತರುತ್ತಿರುವ ಕೆಲ ಕಾಯ್ದೆಗಳನ್ನ ವಿರೋಧಿಸಿ ನಿನ್ನೆ ಬೆಂಗಳೂರಿನಲ್ಲಿ ರೈತರು ಪ್ರಾರಂಭಿಸಿದ್ದ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಅಹೋರಾತ್ರಿ ಧರಣಿ ನಡೆಸಿದ ರೈತರ ಸಂಘಟನೆಗಳು ಇಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ.

news18-kannada
Updated:September 22, 2020, 8:24 AM IST
ಎರಡನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ; ಇಂದು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ಸಾಧ್ಯತೆ
ಬೆಂಗಳೂರಿನಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾದ ಯೋಗೇಂದ್ರ ಯಾದವ್
  • Share this:
ಬೆಂಗಳೂರು(ಸೆ. 22): ಭೂಸುಧಾರಣಾ ಕಾಯ್ದೆ, ಎಪಿಎಂಎಸಿ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ಮಾಡಿರುವ ತಿದ್ದುಪಡಿಯನ್ನು ವಿರೋಧಿಸಿ ರೈತರು, ಕಾರ್ಮಿಕರು ಮತ್ತು ದಲಿತರ ಸಂಘಟನೆಗಳು ರಾಜಧಾನಿಯಲ್ಲಿ ನಡೆಸಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಫ್ರೀಡಂ ಪಾರ್ಕ್​ನಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದರು. ಮಹಾತ್ಮ ಗಾಂಧಿ ಪ್ರತಿಮೆ ಬಳಿಯೂ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘದ ಸದಸ್ಯರು ಪ್ರತ್ಯೇಕವಾಗಿ ಧರಣಿ ನಡೆಸಿದರು. ಇಂದೂ ಕೂಡ ಪ್ರತಿಭಟನೆ ಮುಂದುವರಿಯಲಿದೆ. ಜೊತೆಗೆ, ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ವಲಯಗಳಲ್ಲಿ ಬಸ್ ತಡೆದು ಸಾಂಕೇತಿಕ ಪ್ರತಿಭಟನೆ ಮಾಡುವ ಚಿಂತನೆ ನಡೆದಿದೆ. ಹಾಗೆಯೇ, ಸೆ. 25ಕ್ಕೆ ಪಂಜಾಬ್, ಹರಿಯಾಣದಲ್ಲಿಯಂತೆ ರಾಜ್ಯದಲ್ಲೂ ಬಂದ್ ನಡೆಸುವ ಬಗ್ಗೆ ಇಂದು ರೈತ ಸಂಘಟನೆಗಳು ನಿರ್ಧಾರ ಕೈಗೊಳ್ಳಲಿವೆ.

ಯೋಗೇಂದ್ರ ಯಾದವ್, ದೊರೆಸ್ವಾಮಿ ಬಲ:

ನಿನ್ನೆ ಸಾವಿರಾರು ರೈತರು, ಕಾರ್ಮಿಕರು ಮತ್ತು ದಲಿತರು ಬೆಂಗಳೂರಿಗೆ ಆಗಮಿಸಿ ಬೃಹತ್ ಮೆರವಣಿಗೆ ನಡೆಸಿದರು. ಸರ್ಕಾರ ಜಾರಿಗೆ ತರುತ್ತಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ವಿದ್ಯುತ್ ಕಾಯ್ದೆಗಳು ರೈತರ ಪಾಲಿಗೆ ಮಾರಕವಾಗಲಿವೆ ಎಂದು ಎಚ್ಚರಿಸಿದ ರೈತ ಮುಖಂಡರು, ಈ ಕಾಯ್ದೆಗಳನ್ನ ಕೈಬಿಡುವವರೆಗೂ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಣತೊಟ್ಟರು.

ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಇಂದಿನಿಂದ 3 ದಿನ ಭಾರೀ ಮಳೆ; ಕರಾವಳಿಯಲ್ಲಿ ರೆಡ್ ಅಲರ್ಟ್​ ಘೋಷಣೆ

ವಿವಿಧ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ನಡೆಸಿದ್ದ ಈ ಧರಣಿಯಲ್ಲಿ ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ, ರೈತ ಹೋರಾಟಗಾರ ಕುರುಬೂರು ಶಾಂತಕುಮಾರ್, ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಮೊದಲಾದರೂ ಕೂಡ ಉಪಸ್ಥಿತರಿದ್ದು ಶಕ್ತಿ ತುಂಬಿದರು.

ಇನ್ನು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಸೆಪ್ಟೆಂಬರ್ 25ಕ್ಕೆ ಪಂಜಾಬ್ ಮತ್ತು ಹರಿಯಾಣದ ರೈತ ಸಂಘಟನೆಗಳು ಬಂದ್​ಗೆ ಕರೆ ಕೊಟ್ಟಿವೆ. ಕರ್ನಾಟಕದಲ್ಲೂ ಅದೇ ದಿನ ಬಂದ್ ಆಚರಿಸಲು ಚಿಂತನೆ ನಡೆದಿದೆ. ಇಂದು ವಿವಿಧ ಸಂಘಟನೆಗಳ ಮುಖಂಡರು ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Published by: Vijayasarthy SN
First published: September 22, 2020, 8:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading