HOME » NEWS » State » FARMERS HIGHWAY BANDH STRIKE TODAY WHAT HAPPEN IN CAPITAL BANGALORE MAK

Farmers Protest: ರೈತರ ಹೆದ್ದಾರಿ ತಡೆ ಹೋರಾಟ; ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಏನೇನಾಯ್ತು..?

ಬಿಡದಿ ಬಸ್ ನಿಲ್ದಾಣದ ಮುಂಭಾಗದಲ್ಲೂ ಮೈಸೂರು ಬೆಂಗಳೂರು ಹೆದ್ದಾರಿ ತಡೆ ಹಿಡಿದು ರೈತರು ಪ್ರತಿಭಟನೆ ಮಾಡಿದ್ದರು. ಆರಂಭದಲ್ಲಿ ಅಲ್ಪ ಗೊಂದಲಗಳಾಗಿದ್ದರೂ ನಂತರ ಪೊಲೀಸರೇ 10 ನಿಮಿಷಗಳ ಕಾಲ‌ ಹೆದ್ದಾರಿ ತಡೆಯಲು ಮೌಖಿಕ‌ ಅನುಮತಿ ನೀಡಿದರು.

MAshok Kumar | news18-kannada
Updated:February 6, 2021, 4:34 PM IST
Farmers Protest: ರೈತರ ಹೆದ್ದಾರಿ ತಡೆ ಹೋರಾಟ; ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಏನೇನಾಯ್ತು..?
ರೈತ ಹೋರಾಟಗಾರರು.
  • Share this:
ಬೆಂಗಳೂರು (ಫೆಬ್ರವರಿ 06); ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಇಂದು ನಗರದಲ್ಲಿ ರೈತ ಕಹಳೆ ಮೊಳಗಿತ್ತು. ದೆಹಲಿಯ ರೈತರ ಹೋರಾಟ ಬೆಂಬಲಿಸಿ ಇಂದು ರಾಜ್ಯಾದ್ಯಂತ ಹೋರಾಟ ನಡೆದವು. ಅದರಲ್ಲೂ ಮುಖ್ಯವಾಗಿ ಬೆಂಗಳೂರಲ್ಲೂ ರೈತರು ರಸ್ತೆ ತಡೆದು ಹೋರಾಟ ಮಾಡಿದರು. ಹೌದು..ಇಂದು ರಾಜ್ಯದ ಹಲವೆಡೆ ದೆಹಲಿ ರೈತರ ಹೋರಾಟ ಬೆಂಬಲಿಸಿ ಹೆದ್ದಾರಿ ತಡೆ ಚಳುವಳಿ ನಡೆದವು. ಮುಖ್ಯವಾಗಿ ಬೆಂಗಳೂರಿನ ಎರಡು ಕಡೆ ರೈತರು ತೀವ್ರವಾಗಿ ರಸ್ತೆ ತಡೆ ಹೋರಾಟ ಕೈಗೊಂಡಿದ್ದವು. ನಗರದ ಯಲಹಂಕ ಪೊಲೀಸ್ ಠಾಣೆ ಮುಂಭಾಗದಲ್ಲಿ ದೊಡ್ಡಬಳ್ಳಾಪುರ ಹಾಗೂ ಹಿಂದೂಪುರ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ರೈತರು ನಿರ್ಧಾರ ಮಾಡಿಕೊಂಡಿದ್ದರು.

ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ರಸ್ತೆ ತಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಯೋಜನೆ ಹಾಕಿಕೊಂಡಿದ್ದರು. ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಯಲಹಂಕದಲ್ಲಿ ರಸ್ತೆ ತಡೆಗೆ ಆಗಮಿಸಿದ್ದ ರೈತರನ್ನು ಈಶಾನ್ಯ ವಿಭಾಗದ ಡಿಸಿಪಿ ಕೆಸಿ ಬಾಬ ಮೊದಲು ಹೋರಾಟ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರಾದರೂ, ರೈತರು ಬಗ್ಗದೆ ರಸ್ತೆ ತಡೆಯುವ ನಿರ್ಧಾರದಲ್ಲೇ ಗಟ್ಟಿನಿಂತರು.

12 ಗಂಟೆ ಆಗುತ್ತಿದ್ದಂತೆ ಮಾನವಸರಪಳಿ ನಿರ್ಮಿಸಿ ರಸ್ತೆ ತಡೆಗೆ ಪ್ರಯತ್ನಿಸಿದರು. ಈ ವೇಳೆ ರೈತರ ಹಾಗೂ ಪೊಲೀಸರ ನಡುವರ ಮಾತಿನ ಚಕಮಕಿ ಉಂಟಾಯ್ತು. ಈತನ್ಮಧ್ಯೆ ಪೊಲೀಸರ ಮಾತಿಗೆ ಬಗ್ಗದ ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ತೆಗೆದುಕೊಂಡರು. ಈ‌ ನಡುವೆ ಟ್ರಾಫಿಕ್ ಸಮಸ್ಯೆ ಉಂಟಾಯಿತಾದರೂ, ನಂತರ ಪರಿಸ್ಥಿತಿ ತಿಳಿಯಾಯ್ತು.

ಅತ್ತ ಬಿಡದಿ ಬಸ್ ನಿಲ್ದಾಣದ ಮುಂಭಾಗದಲ್ಲೂ ಮೈಸೂರು ಬೆಂಗಳೂರು ಹೆದ್ದಾರಿ ತಡೆ ಹಿಡಿದು ರೈತರು ಪ್ರತಿಭಟನೆ ಮಾಡಿದ್ದರು. ಆರಂಭದಲ್ಲಿ ಅಲ್ಪ ಗೊಂದಲಗಳಾಗಿದ್ದರೂ ನಂತರ ಪೊಲೀಸರೇ 10 ನಿಮಿಷಗಳ ಕಾಲ‌ ಹೆದ್ದಾರಿ ತಡೆಯಲು ಮೌಖಿಕ‌ ಅನುಮತಿ ನೀಡಿದರು. ಹೀಗಾಗಿಯೂ ಬೆಂಗಳೂರು ಮೈಸೂರು ರಸ್ತೆ ಕಂಪ್ಲೀಟ್ ಆಗಿ ಟ್ರಾಫಿಕ್‌ ಜಾಮ್ ಹೋಗಿತ್ತು. 10 ನಿಮಿಷಗಳ ಬಳಿಕ ಪೊಲೀಸರಿಗೆ ಕೊಟ್ಟ ಮಾತಿನಂತೆ ರೈತರು ಪ್ರತಿಭಟನೆ ಹಿಂಪಡೆದು ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತವಾಗಿಸಿದರು.

ಈ ಎರಡು ಕಡೆ ರೈತರು ಹೆದ್ದಾರಿ ತಡೆ ಹೋರಾಟ ಮಾಡಿದರೆ ಅತ್ತ ನಗರದೊಳಗಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ರೈತರ ಪರ ಹೋರಾಟ ಮಾಡಿದರು. ಪಿಕಾಸಿ ಹಿಡಿದು ರಸ್ತೆ ಅಗೆಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಕೇಂದ್ರ ಸರ್ಕಾರ ರೈತರ ಬಗ್ಗೆ ಯೋಚಿಸ ಬೇಕು. ರೈತ ವಿರೋಧಿ ಕಾಯ್ದೆಗಳನ್ನು ಕೈ ಬಿಡಬೇಕು. ದೇಶದ ರೈತರಿಗೆ ಮೋದಿ ಸರ್ಕಾರ ಮುಳ್ಳು ತಂತಿಯ ಬೇಲಿ ಹಾಕುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದರು.

ಒಟ್ಟಾರೆಯಾಗಿ ದೆಹಲಿ ರೈತರನ್ನು ಬೆಂಬಲಿಸಿ ಇವತ್ತು ನಗರದಲ್ಲಿ ನಡೆದ ಹೆದ್ದಾರಿ ತಡೆ ಹೋರಾಟ ಅಷ್ಟೊಂದೇನು ಯಶಸ್ವಿಯಾಗಲಿಲ್ಲ. 10 ನಿಮಿಷಗಳ ಕಾಲ ರಸ್ತೆ ತಡೆಯಲಾಯ್ತಾದರೂ, ಬಳಿಕ ಪರಿಸ್ಥಿರಿ ಸಹಜ ಸ್ಥಿತಿಯತ್ತ ಮರಳಿತು. ಆದರೆ ಕೇಂದ್ರ ಸರ್ಕಾರದ ವಿರುದ್ಧ ರೈತರು ಮತ್ತೆ ಬೀದಿಗೆ ಇಳಿಯಲಿದ್ದೇವೆ ಎಂಬ ಸಂದೇಶವನ್ನು ಇವತ್ತೂ ರೈತರು ಸಾರಿದ್ದಾರೆ.

(ವರದಿ - ಆಶಿಕ್ ಮುಲ್ಕಿ)
Published by: MAshok Kumar
First published: February 6, 2021, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories