ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿ - ಸಿಎಂ ಯಡಿಯೂರಪ್ಪಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ

ರಾಜ್ಯದ ಜನರು 25 ಜನ ಬಿಜೆಪಿ ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಒಬ್ಬರೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟು ಸರ್ಕಾರ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ - ಸಿದ್ದರಾಮಯ್ಯ

news18-kannada
Updated:September 8, 2020, 4:35 PM IST
ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿ - ಸಿಎಂ ಯಡಿಯೂರಪ್ಪಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
  • Share this:
ಬೆಂಗಳೂರು(ಸೆ.08): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಹೆಸರು ಕಾಳಿಗೆ 7,196 ರೂ. ಕನಿಷ್ಠ ಬೆಂಬಲ ಬೆಲೆಯಾಗಿ ನಿಗದಿಪಡಿಸಿದೆ. ಹೀಗಾಗಿ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ವಿಧಾನಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಮುಂಗಾರು ಮಳೆ ಚೆನ್ನಾಗಿ ಆಗಿದೆ. ಆದ್ದರಿಂದಲೇ ಹೆಸರು, ಉದ್ದು ಮುಂತಾದ ದ್ವಿದಳ ಧಾನ್ಯಗಳ ಬೆಳೆ ಉತ್ತಮವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಕೊಯ್ಲು ನಡೆಯುತ್ತಿದೆ. ರೈತರ ಶ್ರಮಕ್ಕೆ ಈ ಬೆಲೆ ಕಡಿಮೆಯೇ. ಆದರೆ ಅಷ್ಟಾದರೂ ಸಿಗಲಿ ಎಂದು ರೈತರು ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹೆಸರು ಮತ್ತು ಉದ್ದು ಬೆಳೆಯನ್ನು ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಪ್ರಸ್ತುತ ವಿವಿಧ ಎಪಿಎಂಸಿಗಳಲ್ಲಿ ಹೆಸರು ಕಾಳು ಕ್ವಿಂಟಾಲ್‍ಗೆ 2,105 ರೂ.ಗೆ ಮಾರಾಟವಾಗುತ್ತಿದೆ. ಎಲ್ಲಾ ಮಾರುಕಟ್ಟೆಗಳ ಇಂದಿನ ಸರಾಸರಿ ಬೆಲೆ 5,000 ರೂ. ಆಸುಪಾಸಿನಲ್ಲಿದೆ. ಹೆಸರನ್ನು ಕೊಯ್ಲು ಮಾಡಿ ಬಹಳ ದಿನಗಳ ಕಾಲ ರೈತರು ಮನೆಗಳಲ್ಲಿ ದಾಸ್ತಾನು ಮಾಡಲಾಗುವುದಿಲ್ಲ. ಹುಳದ ಕಾಟ ಮುಂತಾದ ಸಮಸ್ಯೆಗಳು ಶುರುವಾಗುತ್ತವೆ. ಹಾಗಾಗಿ ರೈತರು ಅಡ್ಡಾದಿಡ್ಡಿ ಬೆಲೆಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಸರ್ಕಾರ ಈವರೆಗೂ ಸಹ ಖರೀದಿ ಕೇಂದ್ರಗಳನ್ನು ತೆರೆಯದೇ ನಿರ್ಲಕ್ಷ್ಯ ಮಾಡುತ್ತಿರುವುದು ರೈತ ವಿರೋಧಿ ನಿಲುವಾಗಿದೆ. ಇಂತಹ ಸಂದರ್ಭದಲ್ಲಿ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಎಪಿಎಂಸಿಗಳನ್ನೇ ಬರ್ಖಾಸ್ತು ಮಾಡಲು ಹೊರಟಿದೆ. ಕಳೆದ ಬಾರಿ ಸಹ ತೊಗರಿ ಖರೀದಿಯಲ್ಲೂ ಸರ್ಕಾರ ರೈತರಿಗೆ ಮೋಸ ಮಾಡಿತು ಎಂದರು.


ಕೇಂದ್ರ ರಾಜ್ಯ ಎರಡೂ ಕಡೆ ಒಂದೇ ಪಕ್ಷದ ಆಡಳಿತವಿದೆ. ರಾಜ್ಯದ ಜನರು 25 ಜನ ಬಿಜೆಪಿ ಪಕ್ಷದ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಒಬ್ಬರೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸದೇ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈ ನಿರ್ಲಕ್ಷ್ಯ ಧೋರಣೆಯನ್ನು ಬಿಟ್ಟು ಸರ್ಕಾರ ಇಂದಿನಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಹೆಸರು ಕಾಳನ್ನು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ ಖರೀದಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಕೃಷಿ ಸಚಿವ ಬಿ.ಸಿ ಪಾಟೀಲ್ ನಿಜವಾದ ಉಸರವಳ್ಳಿ‘ - ಮಾಜಿ ಸಚಿವ ಸಾರಾ ಮಹೇಶ್
Published by: Ganesh Nachikethu
First published: September 8, 2020, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading