ಅರಣ್ಯ ಸಂಪತ್ತಿಗೆ ಶಾಪವಾದ ಮಹದೇಶ್ವರ ಭಕ್ತರ ಮೂಢನಂಬಿಕೆ - ತಲೆನೋವಾದ ಚಪ್ಪಲಿ, ಬಾಟಲ್ ವಿಲೇವಾರಿ

ಬರಿಗಾಲಲ್ಲಿ ಬೆಟ್ಟ ಏರಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆಯಿಂದ ಲಕ್ಷಾಂತರ ಮಂದಿ ಭಕ್ತರು ತಮ್ಮ ಚಪ್ಪಲಿಗಳನ್ನು ತಾಳಬೆಟ್ಟದ ಇಕ್ಕೆಲಗಳಲ್ಲಿ ಬಿಟ್ಟು ಹೋಗಿದ್ದಾರೆ. ಇದರಿಂದ ಪಾದರಕ್ಷೆಗಳ ರಾಶಿಯೆ ಇಲ್ಲಿ ನಿರ್ಮಾಣವಾಗಿದೆ.

news18-kannada
Updated:February 27, 2020, 6:54 PM IST
ಅರಣ್ಯ ಸಂಪತ್ತಿಗೆ ಶಾಪವಾದ ಮಹದೇಶ್ವರ ಭಕ್ತರ ಮೂಢನಂಬಿಕೆ - ತಲೆನೋವಾದ ಚಪ್ಪಲಿ, ಬಾಟಲ್ ವಿಲೇವಾರಿ
ಪ್ಲಾಸ್ಟಿಕ್ ಬಾಟಲ್​ಗಳು
  • Share this:
ಚಾಮರಾಜನಗರ(ಫೆ.27) : ಮಲೆಮಹದೇಶ್ವರನ ಭಕ್ತರ ಮೂಢನಂಬಿಕೆ ಅರಣ್ಯ ಪರಿಸರಕ್ಕೆ ಶಾಪವಾಗಿ ಪರಿಣಮಿಸಿದೆ. ಲಕ್ಷಾಂತರ ಭಕ್ತರು ಇಲ್ಲಿನ ಲತಾಳ ಬೆಟ್ಟದ ಕಾಡಿನ ರಸ್ತೆಗಳಲ್ಲಿ ರಾಶಿ ರಾಶಿ ಚಪ್ಪಲಿಗಳನ್ನು ಹಾಗೂ ಖಾಲಿ ಪ್ಲಾಸ್ಟಿಕ್ ಬಾಟಲ್​​ಗಳನ್ನು ಬಿಸಾಡಿ ಹೋಗಿದ್ದಾರೆ. ಭಕ್ತರು ಕಾಲ್ನಡಿಗೆಯಲ್ಲಿ ಬಂದ ಕಾಡಿನ ರಸ್ತೆಗಳ ಇಕ್ಕೆಲೆಗಳು ತಿಪ್ಪೆಗುಂಡಿಗಳಾಗಿ ಮಾರ್ಪಟ್ಟಿವೆ. ಹೇರಳವಾಗಿ ಬಿದ್ದಿರುವ ಚಪ್ಪಲಿ ಹಾಗೂ ಪ್ಲಾಸ್ಟಿಕ್ ಬಾಟಲಿಗಳ ವಿಲೇವಾರಿ ತಲೆನೋವಾಗಿ ಪರಿಣಮಿಸಿದೆ. 

ಶಿವರಾತ್ರಿ ಜಾತ್ರೆಗೆಂದು ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬಂದಿದ್ದ ಲಕ್ಷಾಂತರ ಮಂದಿ ಭಕ್ತರು ಇಲ್ಲಿನ ತಾಳಬೆಟ್ಟದ ಇಕ್ಕೆಲಗಳಲ್ಲಿ ತಮ್ಮ ಚಪ್ಪಲಿಗಳನ್ನು ಬಿಟ್ಟು ನಂತರ ಮಹದೇಶ್ವರ ಬೆಟ್ಟ ಹತ್ತಿದ್ದಾರೆ. ತಾವು ಧರಿಸಿದ್ದ ಚಪ್ಪಲಿಗಳನ್ನು ಬಿಟ್ಟು ಹೋದರೆ ಪಾಪ ಕರ್ಮ ಕಳೆಯಲಿದೆ. ಬರಿಗಾಲಲ್ಲಿ ಬೆಟ್ಟ ಏರಿದರೆ ಪುಣ್ಯ ಬರುತ್ತದೆ ಎಂಬ ನಂಬಿಕೆಯಿಂದ ಲಕ್ಷಾಂತರ ಮಂದಿ ಭಕ್ತರು ತಮ್ಮ ಚಪ್ಪಲಿಗಳನ್ನು ತಾಳಬೆಟ್ಟದ ಇಕ್ಕೆಲಗಳಲ್ಲಿ ಬಿಟ್ಟು ಹೋಗಿದ್ದಾರೆ. ಇದರಿಂದ ಪಾದರಕ್ಷೆಗಳ ರಾಶಿಯೆ ಇಲ್ಲಿ ನಿರ್ಮಾಣವಾಗಿದೆ.

ಇಷ್ಟೆ ಅಲ್ಲದೆ ಕಾಲ್ನಡಿಗೆಯಲ್ಲಿ ಬರುವ ಭಕ್ತರು ಧಣಿವಾದಾಗ ಕುಡಿಯಲೆಂದು ನೀರಿನ ಬಾಟಲ್​​​ಗಳನ್ನು ತಂದಿದ್ದರು. ನೀರು ಖಾಲಿಯಾಗುತ್ತಿದ್ದಂತೆ ನೀರಿನ ಪ್ಲಾಸ್ಟಿಕ್ ಬಾಟಲ್​​ಗಳನ್ನು ಕಾಡಿನ ನಡೆವೆ ಎಸೆದು ಹೋಗಿದ್ದಾರೆ . ಹಾಗಾಗಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡುಬರುತ್ತಿದೆ.

ಮೈಸೂರಿನ ವರಕೋಡು ಗ್ರಾಮದಿಂದ ಚಪ್ಪಲಿ ಹಾಕಿಕೊಂಡೆ ಬಂದೆ. ಚಪ್ಪಲಿ ಹಾಕಿಕೊಂಡು ಬೆಟ್ಟ ಹತ್ತ ಬಾರದು. ಚಪ್ಪಲಿಯನ್ನು ಬೆಟ್ಟದ ಕೆಳಗೆ ಬಿಟ್ಟು ಬಂದರೆ ಪಾಪ ಕರ್ಮ ಕಳೆಯುತ್ತದೆ ಎಂಬ ನಂಬಿಕೆ ಇರುವುದರಿಂದ ನಾನೂ ಸಹ ನನ್ನ ಚಪ್ಪಲಿಯನ್ನು ತಾಳಬೆಟ್ಟದಲ್ಲೆ ಬೀಸಾಡಿ ಬಂದೆ ಎಂದು ಪ್ರಕಾಶ್ ಹೇಳುತ್ತಾರೆ.

ಬೆಟ್ಟಕ್ಕೆ ಬರುವ ಭಕ್ತರು ದಾರಿಯುದ್ದಕ್ಕೂ ಮಾರುವ ನೀರಿನ ಬಾಟಲಿಗಳನ್ನು ಖರೀದಿಸಿ ನೀರು ಖಾಲಿಯಾದೊಡನೆ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇನ್ನು ಮುಂದೆ ಭಕ್ತರು ತಮ್ಮೊಡನೆ ಖಾಲಿ ಬಾಟಲಿ ತಂದು ಬೆಟ್ಟದಲ್ಲಿರುವ ಆರ್.ಓ ಪ್ಲಾಂಟ್ ಗಳಲ್ಲಿ ನೀರು ಹಿಡಿದು ಕುಡಿಯಬಹುದು. ಯಾವುದೇ ಕಾರಣಕ್ಕೂ ಬೀಸಾಡದೆ ಬಾಟಲ್​​ಗಳನ್ನು ವಾಪಸ್ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ವ್ಯಾಪಕ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳುತ್ತಾರೆ.

ಇದನ್ನೂ ಓದಿ : RCB - ಈ ಸಲ ಕಪ್ ನಮ್ದೆ: ಮಹದೇಶ್ವರನ ಮೊರೆಹೋದ ಆರ್​ಸಿಬಿ ಅಭಿಮಾನಿ

ಪ್ಲಾಸ್ಟಿಕ್ ಬಾಟಲಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಘಟಕ ಇದ್ದು ಹೆಚ್ಚುವರಿ ಸಿಬ್ಬಂದಿ ಮೂಲಕ ಪ್ಲಾಸ್ಟಿಕ್ ಬಾಟಲ್​​​ಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ ಮಾಡಿದೆ.ಲಕ್ಷಾಂತರ ಮಂದಿ ಕಾಡಿನ ನಡುವೆ ಬಿಟ್ಟು ಹೋಗಿರುವ ಚಪ್ಪಲಿಗಳು ಹಾಗೂ ಬಿಸಾಡಿರುವ  ತ್ಯಾಜ್ಯಗಳನ್ನು ಸಂಗ್ರಹಿಸುವುದು ಅಷ್ಟು ಸುಲಭ ಸಾಧ್ಯವಲ್ಲ. ಇದಕ್ಕೆ ಸಾಕಷ್ಟು ದಿನಗಳ ಬೇಕಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಾದರು ಕಟ್ಟು ನಿಟ್ಟಾಗಿ ಪ್ಲಾಸ್ಟಿಕ್ ಬಾಟಲ್​​ಗಳನ್ನು ನಿಷೇಧಿಬೇಕು ಹಾಗೂ ಚಪ್ಪಲಿಗಳನ್ನು ಬಿಟ್ಟು ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಇದು ವನ್ಯ ಜೀವಿಗಳಿಗೆ ಕಂಟಕವಾಗಲಿದೆ ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಪರಿಸರ ಹಾಳಾಗಲಿದೆ.

 (ವರದಿ : ಎಸ್. ಎಂ. ನಂದೀಶ್)
First published: February 27, 2020, 8:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading