news18-kannada Updated:January 19, 2021, 1:40 PM IST
ಬಿ.ಸಿ. ಪಾಟೀಲ್.
ಮೈಸೂರು (ಜ. 19): ಮರಾಠಿ ಭಾಷೆ ಮಾತನಾಡುವವರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದು ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಈಗಾಗಲೇ ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ ಪಕ್ಷಗಳ ನಾಯಕರೂ ತಿರುಗೇಟು ನೀಡಿದ್ದಾರೆ. ಇಂದು ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೆಂಟಲ್ ಆಗಿರಬಹುದು. ಅವರಿಗೆ ಮಾನಸಿಕ ಸ್ಥಿಮಿತವಿಲ್ಲದಿದ್ದರೆ ಹೋಗಿ ಮೆಂಟಲ್ ಆಸ್ಪತ್ರೆಗೆ ಸೇರಿಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ.
ವಿನಾಕಾರಣ ಮತ್ತೆ ಬೆಳಗಾವಿ ಗಡಿ ಬಗ್ಗೆ ಖ್ಯಾತೆ ತೆಗೆದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೋಗಿ ಮೆಂಟಲ್ ಆಸ್ಪತ್ರೆ ಸೇರಿಕೊಂಡು ಸರಿಕೊಳ್ಳಲಿ. ಅದು ಬಿಟ್ಟು ಸುಮ್ಮನೆ ಕರ್ನಾಟಕದ ಗಡಿ ವಿಚಾರಕ್ಕೆ ಬರುವುದು ಸರಿಯಲ್ಲ. ಕರ್ನಾಟಕದ ಒಂದು ಸೂಜಿಗಾತ್ರದ ಭೂಮಿಯನ್ನು ಕೂಡ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಮಹಾಜನ್ ವರದಿಯೇ ಅಂತಿಮವಾಗಿದ್ದು, ಅದು ಜಾರಿಯಾಗಬೇಕು. ಉದ್ಧವ್ ಠಾಕ್ರೆ ರಾಜಕೀಯ ತೆವಲಿಗೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಬಿ.ಸಿ. ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಲ್ಲಿ ಹುಳಿ ಹಿಂಡುತ್ತಿದ್ದಾರೆ. ಅವರ ನಡೆಯಿಂದ ರಾಜ್ಯದಲ್ಲಿರುವ ಮರಾಠಿಗರಿಗೂ ಅಪಖ್ಯಾತಿ ಬರಲಿದೆ. ಎಲ್ಲೋ ಒಂದಿಬ್ಬರು ಮಹಾರಾಷ್ಟ್ರದ ಪರ ಘೋಷಣೆ ಕೂಗುವ ಕಿಡಿಗೇಡಿಗಳನ್ನು ಬಿಟ್ಟರೆ ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸುಮ್ಮನೆ ಹೇಳಿಕೆ ನೀಡಿ ಇಲ್ಲಿರುವವರ ಬದುಕಿಗೂ ಸಮಸ್ಯೆ ಮಾಡಬೇಡಿ. ಕರ್ನಾಟಕದ ಭೂಮಿಯನ್ನು ಮಹಾರಾಷ್ಟ್ರಕ್ಕೆ ಕೊಡೋದಿಲ್ಲ ಎಂದು ಮೈಸೂರಿನಲ್ಲಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮರಾಠಿ ಭಾಷಿಗರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಾಪಾಸ್ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದು ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕದ ಗಡಿ ವಿಚಾರದಲ್ಲಿ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ; ಉದ್ಧವ್ ಠಾಕ್ರೆಗೆ ಸಿದ್ದರಾಮಯ್ಯ ಎಚ್ಚರಿಕೆ
ಇದೇವೇಳೆ, ಕಾಂಗ್ರೆಸ್ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದ ಸಂದರ್ಭವನ್ನು ನೆನಪಿಸಿಕೊಂಡು ಸಚಿವ ಬಿ.ಸಿ. ಪಾಟೀಲ್, ನಮ್ಮನ್ನು ಹಿಡಿಯುತ್ತಾರೆ, ಹೊಡೆಯುತ್ತಾರೆ. ಆಗ ಕರ್ನಾಟಕದಲ್ಲಿ ಭಯಾನಕವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಹೆದರಿಕೆಯಿಂದ ಬಾಂಬೆಗೆ ಹೋಗಿದ್ದೆವು. ನಮ್ಮದು ಬಾಂಬೆ ಟೀಂ ಅಂತ ಯಾವುದೂ ಇರಲಿಲ್ಲ. ಅಲ್ಲಿಗೆ ನಾವು ಹೋಗೋದಕ್ಕೆ ಇಲ್ಲಿನ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು. ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್ಗೆ ಲಿಫ್ಟ್ ಅಲ್ಲಿ ಹಾಕೊಂಡು ಹೊಡೆದಿದ್ದರು. ಆಮೇಲೆ ಮಲ್ಲಿಕಾರ್ಜುನ್ ಖರ್ಗೆ ಅವರ ಆಫೀಸ್ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ದರು. ಹಾಗಾಗಿ, ನಮಗೆ ಏನಾಗುತ್ತೋ ಎಂಬ ಭಯದಲ್ಲಿನಾವು ಮುಂಬೈಗೆ ಹೋದೆವು. ಬಾಂಬೆಗೆ ಹೋಗಿದ್ದ ನಾವೆಲ್ಲ ಸ್ನೇಹಿತರು. ಈಗ ಇನ್ನೂ 104 ಜನ ಸ್ನೇಹಿತರು ಸಿಕ್ಕಿದ್ದಾರೆ. ಈಗ ನಾವೆಲ್ಲ ಒಂದೇ ಎಂದು ಮೈಸೂರಿನಲ್ಲಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ರೈತರು ಕೆಲವು ಸಂದರ್ಭದಲ್ಲಿ ಮನಸಿನ ಮೇಲಿನ ಕಂಟ್ರೋಲ್ ತಪ್ಪಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಯಾವುದೋ ಕಾರಣದಲ್ಲಿ ಯಾವುದೋ ಒಂದು ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರೈತರು ಆತ್ಮಹತ್ಯೆ ಬಗ್ಗೆ ಯೋಚಿಸಬಾರದು ಎಂದೇ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದಿದ್ದಾರೆ.
ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣವಲ್ಲ. ಎಲ್ಲ ರೈತರೂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಇಲ್ಲ ತಾನೆ? ರೈತರಷ್ಟೇ ಅಲ್ಲದೆ ಬೇರೆಯವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಉದ್ಯಮಿಗಳು, ಅಧಿಕಾರಿಗಳು ಹಾಗೂ ಇತರೆ ಕ್ಷೇತ್ರದ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ. ಸರ್ಕಾರಗಳು ತನ್ನ ಕೆಲಸ ಮಾಡುತ್ತಿವೆ. ಹಳ್ಳಿಯಲ್ಲಿರುವವರು ಬಹುತೇಕರು ರೈತರೇ ಆಗಿರುತ್ತಾರೆ. ಹಾಗಂತ ಹಳ್ಳಿಗಳಲ್ಲಿ ಆಗುವ ಎಲ್ಲ ಸಾವುಗಳು ರೈತರ ಆತ್ಮಹತ್ಯೆ ಅಂದುಕೊಳ್ಳೋಕೆ ಆಗುತ್ತಾ? ಸಮಸ್ಯೆಗೆ ಕಾರಣ ಹುಡುಕೋದೆ ತಜ್ಞರ ಸಮಿತಿಗಳ ಕೆಲಸ. ಅವರು ನೀಡುವ ವರದಿಯಂತೆಯೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
Published by:
Sushma Chakre
First published:
January 19, 2021, 1:40 PM IST