news18-kannada Updated:January 18, 2021, 5:22 PM IST
BS Yediyurappa
ಉಡುಪಿ (ಜ. 18): ಕನ್ನಡಿಗರ ಭಾವನೆ ಕೆಣಕುವಂತೆ ಪದೇ ಪದೇ ಹೇಳಿಕೆ ನೀಡುತ್ತಿರುವ ಉದ್ಧವ್ ಠಾಕ್ರೆ ಹೇಳಿಕೆ ಶೋಭೆ ತರುವಂತಹದ್ದಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಕರ್ನಾಟಕದಲ್ಲಿ ಸೌಹಾರ್ದ ವಾತಾವರಣವಿದೆ. ಆದರೆ, ಠಾಕ್ರೆ ಮಾತು ಎಲ್ಲರಿಗೂ ಆಕ್ರೋಶ ತರಿಸಿದೆ. ಇದನ್ನು ನಾನು ಸಂಘಟಿಸುತ್ತೇನೆ. ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿ ಕೊಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಕನ್ನಡ ಪರ ಸಂಘಟನೆಗಳು ತಲೆಕೆಡಿಸಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಪರ್ಯಾಯದ ಪಂಚ ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ಇಲ್ಲಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಪದೇ ಪದೇ ಬೆಳಗಾವಿ ಗಡಿ ಕುರಿತು ಹೇಳಿಕೆ ನೀಡುತ್ತಾ ರಾಜ್ಯದ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ಮಹಾರಾಷ್ಟ್ರ ಸಿಎಂ ವಿರುದ್ಧ ಹರಿಹಾಯ್ದರು.
ನಾವು ಕನ್ನಡಿಗರು ಒಟ್ಟಾಗಿ ಒಂದಾಗಿ ಬಾಳುತ್ತಿದ್ದೇವೆ. ಮಹಾರಾಷ್ಟ್ರ ಸಿಎಂ ಈ ರೀತಿ ಹೇಳಿಕೆ ನೀಡುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.
ಇದನ್ನು ಓದಿ: ಮೊರಾದಾಬಾದ್ ಆರೋಗ್ಯ ಕಾರ್ಯಕರ್ತನ ಸಾವಿಗೆ ಕೊರೋನಾ ಲಸಿಕೆ ಕಾರಣವಲ್ಲ; ಆರೋಗ್ಯ ಸಚಿವಾಲಯ
ಎರಡು ದಿನಗಳ ಕಾಲ ಉಡುಪಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ, ಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಕೃಷ್ಣ ಮಠದ ಪರ್ಯಾಯ 500ನೇ ಶತಮಾನೋತ್ಸ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಬಳಿಕ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ನಾಳೆ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ಯೋಜನೆಯ ಶಂಕುಸ್ಥಾಪನಾ ಮಾಡಲಿದ್ದಾರೆ. ಬಳಿಕ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬೆಳಗಾವಿ ಗಡಿ ಕುರಿತು ಮಾತನಾಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ , ಮರಾಠಿ ಭಾಷಿಗರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಾಪಾಸ್ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದಿದ್ದರು. ಅವರ ಈ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗಿದೆ. ಪಕ್ಷಾತೀತವಾಗಿ ರಾಜಕೀಯ ನಾಯಕರು ಅವರ ಹೇಳಿಕೆ ವಿರುದ್ಧ ಹರಿಹಾಯ್ದಿದ್ದು, ವಿವಿಧ ಕನ್ನಡಪರ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ.
Published by:
Seema R
First published:
January 18, 2021, 5:22 PM IST