news18-kannada Updated:January 18, 2021, 6:03 PM IST
uddhav thackeray
ಬೆಳಗಾವಿ(ಜ. 18): ಗಡಿ, ಭಾಷೆ ವಿಚಾರವಾಗಿ ಶಿವಸೇನೆ ಕನ್ನಡಿಗರ ಜತೆಗೆ ಕ್ಯಾತೆ ತೆಗೆದು ಸಾಮಾನ್ಯವಾಗಿದೆ. ನಿನ್ನೆ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಮಾಡಿರುವ ಟ್ವೀಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮರಾಠಿ ಭಾಷಿಕರು ಇರುವ ಪ್ರದೇಶವನ್ನು ಕರ್ನಾಟಕ ಆಕ್ರಮಿತ ಪ್ರದೇಶ ಎಂದು ಹೇಳುವ ಮೂಲಕ ಉದ್ಧಟನ ಪ್ರದರ್ಶನ ಮಾಡಿದ್ದಾರೆ. ಉದ್ಧವ ಠಾಕ್ರೆ ಹೇಳಿಕೆ ಖಂಡಿಸಿ ಬೆಳಗಾವಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸಿದವು.
ಮಹಾರಾಷ್ಟ್ರ ಸಿಎಂ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಆಗ್ರಹ ಮಾಡಿವೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಕಳೆದ 70 ವರ್ಷಗಳಿಂದ ಜೀವಂತ ಇದೆ. ಇದಕ್ಕೆ ಕಾರಣ ಈ ವಿಚಾರ ಮುಂದೆ ಇಟ್ಟಕೊಂಡು ಮಹಾರಾಷ್ಟ್ರ ಶಿವಸೇನೆ ರಾಜಕೀಯ ಮಾಡುತ್ತದೆ. ಪದೇ ಪದೇ ಗಡಿ ವಿಚಾರ ಕೆದಕುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಆದರೆ ಗಡಿ ವಿಚಾರದಲ್ಲಿ ಅನ್ಯಾಯ ಆಗಿದೆ ಎಂದು ಮಹಾರಾಷ್ಟ್ರ ಸರ್ಕಾರವೇ ಸುಪ್ರೀಂ ಕೋರ್ಟ್ ಕೇಸ್ ದಾಖಲಿಸಿದೆ. ವಿಚಾರಣೆ ನಡೆದು ತೀರ್ಮಾನ ಆಗುವವರೆಗೆ ತಾಳ್ಮೆ ವಹಿಸದೆ, ರಾಜಕೀಯ ಲಾಭಕ್ಕಾಗಿ ಕನ್ನಡಿಗರು, ಮರಾಠಿಗರ ನಡುವೆ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದೆ.
ಮಹಾರಾಷ್ಟ್ರ ಸಿಎಂ ನಿನ್ನೆ ಎಂಇಎಸ್ ಹುತಾತ್ಮ ದಿನ ಹಿನ್ನೆಲೆ ಟ್ವೀಟ್ ಮಾಡಿದ್ದರು. ಇದು ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 'ಕರ್ನಾಟಕ ಆಕ್ರಮಿತ ಮರಾಠಿ ಭಾಷಿಕ ಹಾಗೂ ಸಂಸ್ಕೃತಿಯ ಪ್ರದೇಶವನ್ನು ಮಹಾರಾಷ್ಟ್ರದಲ್ಲಿ ವಿಲೀನಕ್ಕೆ ಬದ್ಧರಾಗಿ ಇದ್ದೇವೆ. ಇದು ಗಡಿ ಹೋರಾಟದಲ್ಲಿ ಪಾಲ್ಗೊಂಡು ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಟ್ವಿಟರ್ ನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಹೇಳಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
Flower Show: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ಇಲ್ಲ..!
ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸಿ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜಿದ್ ಹಿರೆಕೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉದ್ಧವ ಠಾಕ್ರೆ ಅಣಕು ಶವಯಾತ್ರೆ ಮಾಡಿ, ಬೆಂಕಿ ಹಚ್ಚಲಾಯಿತು.
ಕರವೇ ನಾರಾಯಣಗೌಡ ಬಣದಿಂದ ನಡೆದ ಪ್ರತಿಭಟನೆಯಲ್ಲಿ ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಚ್ಚಲಾಯಿತು. ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕನ್ನಡಿಗರು, ಮರಾಠಿಗರ ನಡುವಿನ ಬಾಂಧವ್ಯ ಹಾಳು ಮಾಡೋ ಕೆಲಸ ಶಿವಸೇನೆ ಮಾಡುತ್ತಿದೆ. ಠಾಕ್ರೆ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಶಿವಸೇನೆ ಗಡಿ ಕ್ಯಾತೆ ಆರಂಭಿಸಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದರೆ ಎಂಇಎಸ್ಗೆ ತಕ್ಕ ಪಾಠ ಕಲಿಸಲು ಸಾಧ್ಯ. ರಾಜ್ಯ ಸರ್ಕಾರ ಗಡಿ ವಿಚಾರವಾಗಿ ನಿರ್ಲಕ್ಷ್ಯ ವಹಿಸದೇ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಆಗ್ರಹ ಮಾಡಿದರು.
Published by:
Latha CG
First published:
January 18, 2021, 6:03 PM IST