ಪೊಲೀಸ್ ಕಮಿಷನರ್, ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಪತ್ರ; ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ

ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣ ಹಾಗೂ ಡಿ.ಜೆ. ಹಳ್ಳಿ - ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ. ಈ ಪ್ರಕರಣದ ತನಿಖೆ ನಡೆಸಲು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.

news18-kannada
Updated:October 20, 2020, 8:58 AM IST
ಪೊಲೀಸ್ ಕಮಿಷನರ್, ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಪತ್ರ; ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು (ಅ. 20): ಸಿಟಿ ಸಿವಿಲ್ ಕೋರ್ಟ್​ಗೆ ಬಾಂಬ್ ಬೆದರಿಕೆ ಪತ್ರ ಮತ್ತು ಸಿಸಿಬಿ ತನಿಖೆ ನಡೆಸುತ್ತಿರುವ ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣ ಹಾಗೂ ಡಿ.ಜೆ. ಹಳ್ಳಿ - ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ನಡೆಸದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಪ್ರಕರಣದ ತನಿಖೆ ನಡೆಸಲು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಬೆದರಿಕೆ ಪತ್ರದ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು ಮತ್ತು ಕೇಂದ್ರ ವಿಭಾಗದ ಪೊಲೀಸರು ಆರೋಪಿಯ ಬಗ್ಗೆ ‌ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ತುಮಕೂರು ಜಿಲ್ಲೆಯ ಚೇಳೂರಿನಿಂದ ಪತ್ರ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆ ನಿಟ್ಟಿನಲ್ಲಿ ರಾತ್ರಿಯಿಂದಲೇ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರ ತಂಡ ಆದಷ್ಟು ಬೇಗ ಆರೋಪಿಯನ್ನು ಬಂಧಿಸಲು ಪ್ರಯತ್ನ ನಡೆಸುತ್ತಿದೆ. ಪ್ರಕರಣದ ಬಗ್ಗೆ ಕಮೀಷನರ್ ಕಮಲ್ ಪಂಥ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ಗೆ ನಿನ್ನೆ ಸಂಜೆ ಅನಾಮಧೇಯ ಪತ್ರ ಬಂದಿತ್ತು. ಪತ್ರದಲ್ಲಿ ವೈರ್​ಗಳಿರುವುದನ್ನು ಕಂಡು ತೀವ್ರ ಆತಂಕಕ್ಕೊಳಗಾಗಿ ಜಡ್ಜ್ ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ‌ ಕಾರ್ಯಪ್ರವೃತ್ತರಾಗಿ ಪೊಲೀಸರ ಜೊತೆಗೆ ಸ್ಥಳಕ್ಕೆ ಆಗಮಿಸಿದ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಹುಸಿ ಬಾಂಬ್ ಪತ್ರ ಎಂಬುವುದು ಗೊತ್ತಾಗಿದೆ.

ಹುಸಿ ಬಾಂಬ್ ಕರೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಪೊಲೀಸ್ ಕಮೀಷನರ್ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೂ ಇನ್ನೆರಡು ಪತ್ರಗಳನ್ನು ಕಳುಹಿಸಿದ್ದಾರೆ. ಪತ್ರದ ಜೊತೆಗೆ ಡಿಟೋನೆಟರ್ ಮಾದರಿಯ ವಸ್ತು ಹಾಗೂ ವೈರ್ ಗಳು ಸಿಕ್ಕಿದ್ದು, ಸದ್ಯ ಸಿಕ್ಕ ವಸ್ತುಗಳನ್ನು ಎಫ್.ಎಸ್.ಎಲ್ ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯವರೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಕಚೇರಿಯ ಬಳಿ ಭದ್ರತೆ ಒದಗಿಸಲಾಗಿತ್ತು.

ಇದನ್ನೂ  ಓದಿ: ಕೊರೋನಾಗೆ ತತ್ತರಿಸಿದ ಯಕ್ಷಗಾನ ಕಲಾವಿದರು; ಮೇಳದ ಭಾಗವತರಿಂದ ತರಕಾರಿ ಮಾರಾಟ

ಸಿಸಿಬಿ ತನಿಖೆ ನಡೆಸುತ್ತಿರುವ ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣ ಹಾಗೂ ಡಿ.ಜೆ. ಹಳ್ಳಿ - ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಪತ್ರಗಳು ಬಂದಿವೆ. ಈ ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ‌ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಇನ್ನು ಅನಾಮಧೇಯ ಪತ್ರ ಬಂದ ಹಿನ್ನೆಲೆಯಲ್ಲಿ ಕೋರ್ಟ್​ಗೂ ಸಹ ಪೊಲೀಸರನ್ನು‌ ನಿಯೋಜನೆ ಸಹ ಮಾಡಲಾಗಿದೆ.

ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಕೋರ್ಟ್​ನಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಪೊಲೀಸರಿಗೆ ತಪಾಸಣೆಗೆ ಸೂಚನೆ ನೀಡಲಾಗಿತ್ತು. ಇಡೀ ಕೋರ್ಟ್ ಆವರಣವನ್ನು ಬಾಂಬ್ ಮತ್ತು ಡಾಗ್ ಸ್ಕ್ವ್ಯಾಡ್ ನಿಂದ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಲಾಗಿತ್ತು. ನಿನ್ನೆ ತಡರಾತ್ರಿಯವರೆಗೂ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪರಿಶೀಲನೆ ನಡೆಸಲಾಗಿದೆ. ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ನಿಷ್ಕ್ರೀಯ ದಳದಿಂದ ಶೋಧಕಾರ್ಯ ನಡೆಸಲಾಗಿದೆ. ಶೋಧಕಾರ್ಯದ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ನ್ಯಾಯಾಲಯದ ಒಳ ಹಾಗೂ ಹೊರ ಭಾಗ ಸೇರಿದಂತೆ ಕೋರ್ಟ್ ಆವರಣದ ಸುತ್ತ ಎಲ್ಲೆಡೆ ಶೋಧ ನಡೆಸಲಾಗಿದೆ. ಸದ್ಯ ಸಿಟಿ ಸಿವಿಲ್ ಕೋರ್ಟ್ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಚೇರಿಯಲ್ಲೂ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಕೆಎಸ್ಆರ್ ಪಿ ಮತ್ತು ಒಂದು ಕ್ಯೂ ಆರ್ ಟಿ ತುಕಡಿ ನಿಯೋಜನೆ ಮಾಡಲಾಗಿದೆ. ಬಾಂಬ್ ಬೆದರಿಕೆ ಪತ್ರ ಬಂದ ಹಿನ್ನಲೆ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಕಚೇರಿಯ ಹಿಂಬದಿ ಮತ್ತು ಮುಂಭಾಗದ ಗೇಟ್ ನಲ್ಲಿ ಭದ್ರತೆ ಒದಗಿಸಲಾಗಿದೆ. ಸಾರ್ವಜನಿಕರು ಭೇಟಿ ನೀಡುವಾಗ ಪರಿಶೀಲನೆಗೆ ಸೂಚಿಸಲಾಗಿದೆ. ಸಾರ್ವಜನಿಕರ ಭೇಟಿ ಮಾಹಿತಿ, ಯಾರನ್ನು ಭೇಟಿ ಮಾಡುತ್ತಾರೆ, ಭೇಟಿ ಮಾಡುವವರ ಸಂಪೂರ್ಣ ಮಾಹಿತಿಯನ್ನು ರಿಜಿಸ್ಟರ್ ಬುಕ್ ನಲ್ಲಿ ದಾಖಲಿಸುವಂತೆ ಸೂಚನೆ ನೀಡಲಾಗಿದೆ.
Published by: Sushma Chakre
First published: October 20, 2020, 8:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading