ಬಿಎಂಟಿಸಿಗೆ ಬಿಸಿ ತುಪ್ಪವಾದ ವೋಲ್ವೋ ಬಸ್​; ಹವಾ ನಿಯಂತ್ರಿತ ಬಸ್​ಗಳ ಓಡಾಟ ಶಾಶ್ವತವಾಗಿ ಸ್ಥಗಿತ?

ವಾಸ್ತವವನ್ನೇ ಗಮನಿಸಿದರೆ ವೋಲ್ವೋ ಬಸ್​​ಗಳು ಹೆಚ್ಚು ದಿನ ನಿಂತಲ್ಲಿ ನಿಂತುಕೊಂಡರೆ ಅವುಗಳ  ಮೆಕಾನಿಸಂ ಹಾಳಾಗಬಹುದು. ಬ್ಯಾಟರಿ ಇಂಜಿನ್​ಗಳ ಮೇಲೆ ಹೊಡೆತ ಬೀಳಬಹುದು. ಚಾಸ್ಸಿ ಭಾರಕ್ಕೆ ಟೈರ್ ಸಿಡಿಯಬಹುದು.

news18-kannada
Updated:May 28, 2020, 12:52 PM IST
ಬಿಎಂಟಿಸಿಗೆ ಬಿಸಿ ತುಪ್ಪವಾದ ವೋಲ್ವೋ ಬಸ್​; ಹವಾ ನಿಯಂತ್ರಿತ ಬಸ್​ಗಳ ಓಡಾಟ ಶಾಶ್ವತವಾಗಿ ಸ್ಥಗಿತ?
ವೋಲ್ವೋ ಬಸ್
  • Share this:
ಬೆಂಗಳೂರು (ಮೇ 28): ಕೊರೋನಾ ಲಾಕ್​​ಡೌನ್ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ  ಬಿಎಂಟಿಸಿಯ " ವೋಲ್ವೋ" ಬಸ್ಸುಗಳು ಸದ್ಯಕ್ಕಂತೂ ರಸ್ತೆಗಿಳಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ .ಇದು ವೋಲ್ವೊ ಬಸ್ ಗಳು ಶಾಶ್ವತವಾಗಿ ಇತಿಹಾಸದ ಪುಟ ಸೇರಲಿವೆ ಎನ್ನುವ ಶಂಕೆ ಮೂಡಿಸಿದೆ.

ಹೌದು, ಇಂಥದ್ದೊಂದು ಅನುಮಾನ ಮೂಡುವುದಕ್ಕೂ ಕೂಡ ಕಾರಣ ಇದೆ. ವೋಲ್ವೋ ಬಸ್​​ಗಳು ಅದರಲ್ಲೂ ಪ್ರಮುಖವಾಗಿ ಎಸಿ ಬಸ್​ಗಳು ಕೊರೋನಾ ಸಂದರ್ಭದಲ್ಲಿ ಕಾರ್ಯಾಚರಣೆ ಮಾಡುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ  ಆಡಳಿತ ಮಂಡಳಿ ಬಂದಿದ್ದರಿಂದ ಅವುಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಆದರೆ, ಅದು ಎಷ್ಟು ದಿನಗಳವರೆಗೆ ಎನ್ನುವುದು ಈವರೆಗೂ ಸ್ಪಷ್ಟವಾಗಿಲ್ಲ. ಆದರೆ, ದೀರ್ಘಕಾಲದವರೆಗೆ ಎಸಿ ಬಸ್​ಗಳು ನಿಂತಲ್ಲೇ ನಿಂತರೆ ಅವುಗಳ ಗುಣಮಟ್ಟ ಹಾಳಾಗಬಹುದು. ಈ ಒಂದು ಕಾರಣದಿಂದ ಅವುಗಳ ಕಾರ್ಯಾಚರಣೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಆಡಳಿತ ಮಂಡಳಿ ಬಂದಿದೆ ಎಂಬುದು ಮೂಲಗಳ ಮಾಹಿತಿ.

ಬಿಎಂಟಿಸಿಯಲ್ಲಿ ಪ್ರಸ್ತುತ 550ಕ್ಕೂ ಹೆಚ್ಚು ವೋಲ್ವೋ ಹವಾನಿಯಂತ್ರಿತ ಬಸ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಕೊರೋನಾ ಸಂದರ್ಭದಲ್ಲಿ ಬಸ್ ಗಳನ್ನ ಓಡಿಸುವುದರಿಂದ ಎಸಿ ಬಸ್ಸುಗಳಲ್ಲಿ ಕೊರೋನಾ ಸೋಂಕು ಹರಡಬಹುದು ಎನ್ನುವ ಕಾರಣಕ್ಕೆ, ಬಸ್ ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕೊರೋನಾ ಸೋಂಕು ದಿನೇದಿನೇ ವ್ಯಾಪಕವಾಗುತ್ತಿರುವುದನ್ನು ನೋಡಿದರೆ ಈ ಬಸ್​ಗಳು ಸದ್ಯಕ್ಕೆ ಡಿಪೋಗಳಿಂದ ಹೊರಗೆ ಬರುವಂಥ ಲಕ್ಷಣಗಳು ಗೋಚರಿಸುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ವೋಲ್ವೋ ಬಸ್ ಗಳ ಭವಿಷ್ಯದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನು ಕೂಡ ಆಡಳಿತ ಮಂಡಳಿ ಮನಗಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಕ್ಯಾಂಟೀನ್​​ಗೆ ಇಂದಿರಾ ಗಾಂಧಿ ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಲಿಲ್ಲವೇ? - ಸಿದ್ದರಾಮಯ್ಯಗೆ ಪ್ರತಾಪ್​ ಸಿಂಹ ಪ್ರಶ್ನೆ

ವಾಸ್ತವವನ್ನೇ ಗಮನಿಸಿದರೆ ವೋಲ್ವೋ ಬಸ್​​ಗಳು ಹೆಚ್ಚು ದಿನ ನಿಂತಲ್ಲಿ ನಿಂತುಕೊಂಡರೆ ಅವುಗಳ  ಮೆಕಾನಿಸಂ ಹಾಳಾಗಬಹುದು. ಬ್ಯಾಟರಿ ಇಂಜಿನ್​ಗಳ ಮೇಲೆ ಹೊಡೆತ ಬೀಳಬಹುದು. ಚಾಸ್ಸಿ ಭಾರಕ್ಕೆ ಟೈರ್ ಸಿಡಿಯಬಹುದು. ಅದೆಲ್ಲಕ್ಕಿಂತ ಹೆಚ್ಚಾಗಿ ಬಸ್ಸುಗಳ  ವೈರ್​​ಗಳನ್ನು ಇಲಿ ಹೆಗ್ಗಣಗಳು ತುಂಡರಿಸಿದರೆ ಅದಕ್ಕೆ ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.

ಸದ್ಯದ ಪರಿಸ್ಥಿತಿ ಗಮನಿಸಿದರೆ ಸಾಕಷ್ಟು ವೋಲ್ವೋ ಬಸ್ ಗಳು ಈಗಾಗಲೇ ತಮ್ಮ  ಕಾರ್ಯಾಚರಣೆಯ ಗುಣಮಟ್ಟವನ್ನು ಕಳೆದುಕೊಂಡಿದೆ ಎನ್ನುತ್ತಾರೆ ಬಿಎಂಟಿಸಿಯ ವೋಲ್ವೋ ಚಾಲಕರು. ಹೋಗಲಿ, ಎಸಿ ಬಸ್ಗಳನ್ನು ನಾನ್ ಎಸಿ ಬಸ್ ಗಳನ್ನಾಗಿ ಪರಿವರ್ತಿಸುವ ಸಾಧ್ಯತೆಗಳಿವೆಯೇ ಎನ್ನುವುದನ್ನು ನೋಡಿದರೆ ಆರ್ಥಿಕ ವೆಚ್ಚಕ್ಕೆ ಕಾರಣವಾಗುವಂಥ ದುಸ್ಸಾಹಸ ಮಾಡುವ ಸಾಧ್ಯತೆಗಳು ಕಡಿಮೆ ಇದೆ.ಎಲ್ಲಕ್ಕಿಂತ ಹೆಚ್ಚಾಗಿ ಅಂತದ್ದೊಂದು ರೀತಿಯ ಪರಿವರ್ತನೆ ಅಷ್ಟು ಸುಲಭವಲ್ಲ ಎನ್ನುತ್ತಾರೆ ತಾಂತ್ರಿಕ ಸಿಬ್ಬಂದಿ.

ಹಾಗಾದರೆ ಬಿಎಂಟಿಸಿ ಸದ್ಯದ ಪರಿಸ್ಥಿತಿಯಲ್ಲಿ ವೋಲ್ವೋ ಎಸಿ ಬಸ್ ಗಳನ್ನು ಹೇಗೆ ನಿಯಂತ್ರಣ ಮಾಡುತ್ತಿದೆ ಎನ್ನುವುದನ್ನು ನೋಡಿದರೆ ದಿನಂಪ್ರತಿ ವೋಲ್ವೋ ಬಸ್ಸುಗಳನ್ನು ಸ್ಟಾರ್ಟ್ ಮಾಡಿ ಒಂದೆರಡು ಸುತ್ತು ಹಾಕಿ ಮತ್ತೆ ಅಲ್ಲಿಯ ನಿಲ್ಲಿಸುವ ಕೆಲಸವನ್ನು ಮಾಡುತ್ತಿದೆ. ಈ ಮೂಲಕ ಬಸ್ ಗಳು ಕಂಡೀಶನ್ ನಲ್ಲಿ ಇರುತ್ತವೆ ಆನಂತರ ಅವನ ಕಾರ್ಯಾಚರಣೆಗೆ ಇಳಿಸಬಹುದು ಎನ್ನುವುದು ಆಡಳಿತ ಮಂಡಳಿಯ ವಾದ.ಆದರೆ ವಾಸ್ತವದಲ್ಲಿ ಈ ರೀತಿಯಾದಂತಹ ವ್ಯವಸ್ಥೆ ದೀರ್ಘಕಾಲದವರೆಗೆ ಮುಂದುವರೆಯುವುದು ಸಾಧ್ಯವಿಲ್ಲ. ಏಕೆಂದರೆ ಈ ರೀತಿ ಮಾಡುವುದರಿಂದ ಡೀಸೆಲ್ ಬಳಕೆಯೂ ಕೂಡ ಹೆಚ್ಚಾಗಲಿದೆ ಇದು ಬಿಎಂಟಿಸಿಗೆ ಮತ್ತೊಂದು ಆರ್ಥಿಕ ಹೊರೆಯಾಗಲಿದೆ.

ಹಾಗಾಗಿ ಈ ವೋಲ್ವೋ ಎಸಿ ಬಸ್ಸುಗಳನ್ನು ಏನು ಮಾಡಬೇಕೆನ್ನುವುದು ಸದ್ಯದ ಮಟ್ಟಿಗೆ ಬಿಎಂಟಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇವುಗಳನ್ನು ಹಾಗೆಯೇ ಉಳಿಸಿಕೊಂಡು ಭವಿಷ್ಯದಲ್ಲಿ ಓಡಿಸುವುದು ಅಥವಾ ಅವುಗಳನ್ನು ಸ್ಕ್ರ್ಯಾಪ್ ಗೆ ಹಾಕುವುದು ಎನ್ನುವ ಗೊಂದಲದಲ್ಲಿದೆ. ಏಕೆಂದರೆ ಕೊರೋನಾ ಹೆಮ್ಮಾರಿಯ ಸಮಸ್ಯೆ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅದು ಮುಗಿಯೋವರೆಗೂ ಎಸಿ‌ ಬಸ್ ಗಳನ್ನು ಕಾರ್ಯಾಚರಣೆ ಮಾಡುವುದು ಸಾಧ್ಯವಿಲ್ಲ. ಮುಂದೇನು ಎನ್ನುವ ಪ್ರಶ್ನಗೆ ಬಿಎಂಟಿಸಿ ಅವರೇ ಉತ್ತರಿಸಬೇಕಿದೆ.
First published: May 28, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading