Bangalore Rain: ಬೆಂಗಳೂರಿನಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ; ಹಲವೆಡೆ ಮನೆಯೊಳಗೆ ನುಗ್ಗಿದ ನೀರು

Bangalore Rain Updates: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಕಾರಣ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಮಲ್ಲತ್ತಹಳ್ಳಿ ಬಳಿ ಇಂದು ಬೆಳಗಿನ ಜಾವ ಅಪಾರ್ಟ್​ಮೆಂಟ್ ಮತ್ತು ನಾಲ್ಕೈದು ಮನೆಗಳಿಗೆ ಮಳೆ ನೀರು ನುಗ್ಗಿದೆ. ಬೆಳಗ್ಗೆಯೇ ಶುರುವಾದ ಮಳೆಗೆ ಹಿಡಿಶಾಪ ಹಾಕಿಕೊಂಡೇ ಬೆಂಗಳೂರಿನ ಜನರು ಓಡಾಡುತ್ತಿದ್ದಾರೆ.

news18-kannada
Updated:October 19, 2020, 9:09 AM IST
Bangalore Rain: ಬೆಂಗಳೂರಿನಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ; ಹಲವೆಡೆ ಮನೆಯೊಳಗೆ ನುಗ್ಗಿದ ನೀರು
ಬೆಂಗಳೂರಿನಲ್ಲಿ ಮಳೆಯಿಂದ ಮುಳುಗಿದ ಕಾರು
  • Share this:
ಬೆಂಗಳೂರು (ಅ. 19): ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು. ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದ್ದು, ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಆಫೀಸು, ಅಂಗಡಿಗಳಿಗೆ ಹೊರಟ ಬೈಕ್ ಸವಾರರು ಪರದಾಡುತ್ತಿದ್ದಾರೆ. ಬೆಳಗ್ಗೆಯಿಂದ ಮೂರನೇ ಬಾರಿ ಸುರಿಯುತ್ತಿರುವ ಮಳೆಯಿಂದ ನಗರದ ರಸ್ತೆ, ಸಿಗ್ನಲ್​ಗಳಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಕಾರಣ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಮೈಸೂರು ರಸ್ತೆ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿಜಯನಗರ, ನಾಯಂಡಹಳ್ಳಿ, ಶ್ರೀನಗರ, ಚಂದ್ರಾ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್, ಜಯನಗರ, ಕೆಆರ್​ ಮಾರ್ಕೆಟ್ ಸೇರಿ ಹಲವೆಡೆ ಜೋರು ಮಳೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆಯೇ ಶುರುವಾದ ಮಳೆಗೆ ಹಿಡಿಶಾಪ ಹಾಕಿಕೊಂಡೇ ಬೆಂಗಳೂರಿನ ಜನರು ಓಡಾಡುತ್ತಿದ್ದಾರೆ. ಮಳೆಯಿಂದಾಗಿ ಜನ ಮತ್ತು ವಾಹನಗಳ ಓಡಾಟ ಕಡಿಮೆಯಾಗಿದೆ. ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ್ಟ್​ಮೆಂಟ್ ಮತ್ತು ಮನೆಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ: ಕೊರೋನಾಗೆ ತತ್ತರಿಸಿದ ಯಕ್ಷಗಾನ ಕಲಾವಿದರು; ಮೇಳದ ಭಾಗವತರಿಂದ ತರಕಾರಿ ಮಾರಾಟ

ಇಂದು ಈ ವಾರದ ಮೊದಲ ದಿನ. ವೀಕೆಂಡ್ ಕಳೆದು ಕಚೇರಿಗಳಿಗೆ ಹೊರಟ ಬೆಂಗಳೂರಿಗರಿಗೆ ಮಳೆ ಅಡ್ಡಿಯಾಗಿದೆ. ವಾರದ ಮೊದಲ ದಿನವಾದ್ದರಿಂದ ಮಳೆಯ ನಡುವೆಯೂ ಜನರು ಕಚೇರಿ, ಕೆಲಸಗಳಿಗೆ ಹೊರಡುತ್ತಿದ್ದಾರೆ. ಮೈಸೂರು ರಸ್ತೆಯ ಸ್ಯಾಟಲೈಟ್ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಬೆಂಗಳೂರಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತಿದ್ದು, ಮುಂಜಾನೆಯೇ ಶುರುವಾದ ಮಳೆಗೆ ಜನ ಪರದಾಡುತ್ತಿದ್ದಾರೆ.

ಬೆಂಗಳೂರಿನ ಮಲ್ಲತ್ತಹಳ್ಳಿ ಬಳಿ ಇಂದು ಬೆಳಗಿನ ಜಾವ ಅಪಾರ್ಟ್​ಮೆಂಟ್ ಮತ್ತು ನಾಲ್ಕೈದು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನೀರು ಮನೆಯೊಳಗೆ ತುಂಬಿದ್ದರಿಂದ ಮನೆಯೆಲ್ಲ ಕೆಸರಾಗಿದೆ. ಸದ್ಯ ನೀರು ತೆರವುಗೊಳಿಸಿ ಮನೆ ಸ್ವಚ್ಛಗೊಳಿಸುತ್ತಿರುವ ನಿವಾಸಿಗಳ ಜೊತೆ ಬಿಬಿಎಂಪಿ ಸಿಬ್ಬಂದಿಯೂ ನೀರು ತೆರವುಗೊಳಿಸುತ್ತಿದ್ದಾರೆ.

ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಎದುರಾಗುತ್ತದೆ. ಈಗಾಗಲೇ ಮೂರ್ನಾಲ್ಕು ಬಾರಿ ಮಳೆ ಬಂದು, ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ಮನೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತದೆ. ನೀರು ತುಂಬಿದಾಗ ಬಿಬಿಎಂಪಿಗೆ ದೂರು ನೀಡಿದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ನಿಲ್ಲದಂತೆ ಶಾಶ್ವತವಾಗಿ ಏನಾದರೂ ಮಾಡಿ ಎಂದರೂ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಳೆಗಾಲದಲ್ಲಿ ನಾಲ್ಕು ಬಾರಿ ನೀರು ತುಂಬಿದೆ. ಇಂದು ಬೆಳಗಿನ ಜಾವ ಸುರಿದ ಮಳೆಗೆ ಮತ್ತೆ ಮನೆಗಳಿಗೆ ನೀರು ತುಂಬಿದೆ. ಕೆಸರು ನೀರು ತುಂಬಿ ಮನೆಗಳು ಗಲೀಜಾಗುತ್ತಿವೆ ಎಂದು ನ್ಯೂಸ್ 18 ಗೆ ಮಲ್ಲತ್ತಹಳ್ಳಿಯ ನಿವಾಸಿ ಚೇತನಾ ಹೇಳಿದ್ದಾರೆ.
Published by: Sushma Chakre
First published: October 19, 2020, 8:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading