Agumbe Ghat: ತೀರ್ಥಹಳ್ಳಿಯ ಆಗುಂಬೆ ಘಾಟ್​ನಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ

Agumbe Ghat: ಆಗುಂಬೆ ಘಾಟಿಯಲ್ಲಿ ಸದ್ಯಕ್ಕೆ 12 ಟನ್ ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಳೆ ಹೆಚ್ಚಾದ ಸಮಯದಲ್ಲಿ 12 ಟನ್ ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.  

news18-kannada
Updated:September 10, 2020, 11:18 AM IST
Agumbe Ghat: ತೀರ್ಥಹಳ್ಳಿಯ ಆಗುಂಬೆ ಘಾಟ್​ನಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ
ಆಗುಂಬೆ ಘಾಟ್ (ಫೋಟೋ- ಫೇಸ್​ಬುಕ್)
  • Share this:
ಶಿವಮೊಗ್ಗ (ಸೆ. 10): ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಇಳಿಮುಖವಾಗಿದೆ.  ಹೀಗಾಗಿ, ಜಿಲ್ಲಾಡಳಿತ ತೀರ್ಥಹಳ್ಳಿಯ ಆಗುಂಬೆ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಮತ್ತೆ ಅವಕಾಶ ಕಲ್ಪಿಸಿಕೊಟ್ಟಿದೆ. ಆರಂಭದಲ್ಲಿ ಜೋರು ಮಳೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ- ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈಗ ಆ  ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಆಗುಂಬೆ ಘಾಟ್ ರಾಷ್ಟ್ರೀಯ ಹೆದ್ದಾರಿ 169 A ಉಡುಪಿ, ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ನಡುವೆ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ಆಗುಂಭೆ ಘಾಟಿ ಇದ್ದು, ಮಳೆಗಾಲದ ಸಮಯದಲ್ಲಿ 12 ಟನ್​ಗಿಂತಲೂ ಹೆಚ್ಚು ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಈ ಹಿಂದೆ ಸೂಚಿಸಲಾಗಿತ್ತು. ಜೂ.15 ರಿಂದ ಅಕ್ಟೋಬರ್ 15 ರವರೆಗೆ ನಿರ್ಬಂಧ ವಿಧಿಸಲಾಗಿತ್ತು.

ಇದೀಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್ ಅವರು ಹೊಸ ಅಧಿಸೂಚನೆ ಹೊರಡಿಸಿದ್ದಾರೆ. ಆಗುಂಬೆ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ಘಾಟಿಯಲ್ಲಿ ಅನುಮತಿ ನೀಡಲಾಗಿದೆ. ಒಂದು ವೇಳೆ ಆಗುಂಬೆ ಭಾಗದಲ್ಲಿ ಸತತ ಹಾಗೂ ಭಾರೀ ಮಳೆಯಾದರೆ 12 ಟನ್​ಗಿಂತಲೂ ಹೆಚ್ಚು ಭಾರದ ವಾಹನಗಳು ಆಗುಂಬೆ ಘಾಟಿಯಲ್ಲಿ ಮತ್ತೆ ಸಂಚರಿಸಲು ನಿರ್ಬಂಧಿಸಲಾಗುವುದು. ಆಗ ಮತ್ತೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಆಗುಂಬೆ ಘಾಟಿ ರಸ್ತೆ ಕಿರಿದಾಗಿದೆ, ಜೊತೆಗೆ ರಸ್ತೆಯ ಬದಿಗಳಲ್ಲಿ ಭಾರ ತಡೆಯವ ಕ್ಷಮತೆ  ಕ್ಷೀಣಿಸುತ್ತಿದೆ. ಭಾರೀ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ರಸ್ತೆಯ ಬದಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಇದರಿಂದಾಗಿ ರಸ್ತೆ ಸಂಚಾರಕ್ಕೂ ಅಡಚಣೆ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲದ ಸಮಯದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಆದರೆ, ಈಗ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ  ಮಾಡಿದ್ದಾರೆ. ಪೊಲೀಸ್ ಅಧೀಕ್ಷಕರು ಸಹ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಠಿಯಿಂದ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ಅಧಿಸೂಚನೆ ಹೊರಡಿಸಬಹುದು ಎಂಬ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ಈ ಭಾಗದಲ್ಲಿ ಭಾರೀ ಮತ್ತು ಸತತ ಮಳೆಯಾಗುವ  ದಿನಗಳಂದು 12 ಟನ್​ ಗಿಂತ ಅಧಿಕ ಭಾರದ ವಾಹನಗಳು ಸಂಚಾರವನ್ನು ನಿಷೇಧಿಸಿ ಪರ್ಯಾಯ ಮಾರ್ಗ ಕಲ್ಪಿಸುವುದು ಹಾಗೂ ಭಾರೀ ಮಳೆ ಇಲ್ಲದಿರುವ ದಿನಗಳಲ್ಲಿ ಎಲ್ಲಾ ವಾಹನಗಳ ಮುಕ್ತ  ಸಂಚಾರಕ್ಕೆ  ಅವಕಾಶ ಕಲ್ಪಿಸುವುದು ಅವಶ್ಯ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಸದ್ಯಕ್ಕೆ 12 ಟನ್ ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಮಳೆ ಹೆಚ್ಚಾದ ಸಮಯದಲ್ಲಿ 12 ಟನ್ ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಆಗುಂಬೆ ಘಾಟ್​ ಬಂದ್ ಆದರೆ,  ಶಿವಮೊಗ್ಗ -ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಕೆರೆಕಟ್ಟೆ- ಕಾರ್ಕಳ- ಉಡುಪಿ- ಮಂಗಳೂರು ಈ ರಸ್ತೆಯ ಮೂಲಕ ವಾಹನಗಳು ಸಂಚಾರ ಮಾಡಬಹುದಾಗಿದೆ. ಇದಲ್ಲದೆ, ಶಿವಮೊಗ್ಗ- ತೀರ್ಥಹಳ್ಳಿ- ಮಾಸ್ತಿಕಟ್ಟೆ-ಹುಲಿಕಲ್- ಹೊಸಂಗಡಿ- ಸಿದ್ದಾಪುರ- ಉಡುಪಿ ಮಾರ್ಗವಾಗಿ ಸಹ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
Published by: Sushma Chakre
First published: September 10, 2020, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading