news18-kannada Updated:January 17, 2021, 8:54 PM IST
uddhav thackeray
ಮುಂಬೈ, (ಜ.17): ಮರಾಠಿ ಮಾತನಾಡುವ ಜನರು ಬಹುಸಂಖ್ಯೆಯಲ್ಲಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿವರ್ಷ ಆಯೋಜಿಸುವ ಜನವರಿ 17 ರ ಹುತಾತ್ಮರ ದಿನ ಕಾರ್ಯಕ್ರಮದ ಪ್ರಮುಕ್ತ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಸಿಎಂ, ಬಹುಸಂಖ್ಯೆಯಲ್ಲಿ ಮರಾಠಿ ಸಂಸ್ಕೃತಿ ಹೊಂದಿರುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಬೆಳಗಾವಿ ಗಡಿ ವಿವಾದವನ್ನು ಕೆದಕಿದ್ದಾರೆ.
ಮಹಾರಾಷ್ಟ್ರ ಏಕೀಕರಣಕ್ಕಾಗಿ ಹೋರಾಡಿದವರ ಗೌರವಾರ್ಥಕವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿವರ್ಷ ಜನವರಿ 17 ರಂದು ಹುತಾತ್ಮರ ದಿನವನ್ನು ಆಚರಿಸುತ್ತಿದೆ. 1956ರಲ್ಲಿ ನಡೆದ ಹೋರಾಟದಲ್ಲಿ ಮಡಿದರವ ಜ್ಞಾಪಕಾರ್ಥವಾಗಿ ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದೆ. ಇದೇ ದಿನ ಮಹಾರಾಷ್ಟ್ರೀ ಸಿಎಂ ಕಚೇರಿ ಮಾಡಿರುವ ಟ್ವೀಟ್ನಲ್ಲಿ ಬಹುಸಂಖ್ಯೆಯಲ್ಲಿರುವ ಮರಾಠಿ ಭಾಷಿಗರ ಮತ್ತು ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಭರವಸೆಯೊಂದಿಗೆ ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ಸಿಎಂಒ ಟ್ವೀಟ್ ಮಾಡಿದೆ.
ಈ ಹಿಂದಿನಿಂದಲೂ ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾದ ಬೆಳಗಾವಿ ಮತ್ತು ಇತರ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರ ತಮ್ಮ ರಾಜ್ಯದ ಪ್ರದೇಶ ಎಂದು ಹೇಳಿಕೊಳ್ಳುತ್ತಾ ಬರುತ್ತಿದೆ. ಕರ್ನಾಟಕದ ಭಾಗವಾಗಿರುವ ಬೆಳಗಾವಿ, ಕಾರವಾರ ಮತ್ತು ನಿಪ್ಪಾನಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಮರಾಠಿಗರಿದ್ದು, ಈ ಪ್ರದೇಶಗಳು ಮಹಾರಾಷ್ಟ್ರ ಸೇರಿಸಿಕೊಳ್ಳಬೇಕು ಎಂದು ವಾದಿಸುತ್ತಿದೆ.
ಇನ್ನು ಗಡಿ ವಿವಾದ ಪ್ರಕರಣವನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವಂತೆ ಕಳೆದ ವರ್ಷ ಸಚಿವರಾದ ಏಕನಾಥ್ ಶಿಂಧೆ ಮತ್ತು ಛಗನ್ ಭುಜಬಲ್ ಅವರನ್ನು ಸಮನ್ವಯಕಾರರನ್ನಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇಮಿಸಿದ್ದರು. ಇದೀಗ ಮತ್ತೊಮ್ಮೆ ಕರ್ನಾಟಕದ ಪ್ರದೇಶಗಳನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇವೆ ಎನ್ನುವ ಮೂಲಕ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಕೆದಕಿದ್ದಾರೆ.
Published by:
zahir
First published:
January 17, 2021, 8:48 PM IST