Telangana: ತೆಲಂಗಾಣ, ಆಂಧ್ರ ಪ್ರದೇಶದ ಮಳೆಯ ಅಬ್ಬರಕ್ಕೆ 30 ಬಲಿ; ಹೈದರಾಬಾದ್​ನಲ್ಲಿ ನಿಲ್ಲದ ಪ್ರವಾಹ

Telangana Rain Updates: ಹೈದರಾಬಾದ್​ ಒಂದರಲ್ಲೇ ಮಳೆಯಿಂದ 18 ಜನರು ಸಾವನ್ನಪ್ಪಿದ್ದಾರೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದ 80 ಸಾವಿರಕ್ಕೂ ಹೆಚ್ಚು ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಶಿಫ್ಟ್​ ಮಾಡಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 30ಕ್ಕೂ ಹೆಚ್ಚು ಜನರು ಮಳೆಯಿಂದ ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:October 15, 2020, 8:51 AM IST
Telangana: ತೆಲಂಗಾಣ, ಆಂಧ್ರ ಪ್ರದೇಶದ ಮಳೆಯ ಅಬ್ಬರಕ್ಕೆ 30 ಬಲಿ; ಹೈದರಾಬಾದ್​ನಲ್ಲಿ ನಿಲ್ಲದ ಪ್ರವಾಹ
ಹೈದರಾಬಾದ್​ನಲ್ಲಿ ಮಳೆಯಿಂದ ನದಿಯಂತಾಗಿರುವ ರಸ್ತೆ
  • Share this:
ಹೈದರಾಬಾದ್ (ಅ. 15): ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಬುಧವಾರ ಸುರಿದ ಮಳೆಯಿಂದ ಸುಮಾರು 30 ಜನರು ಸಾವನ್ನಪ್ಪಿದ್ದಾರೆ. ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೈದರಾಬಾದ್​ ಸೇರಿದಂತೆ ಬಹುತೇಕ ನಗರಗಳು ಜಲಾವೃತವಾಗಿವೆ. ಹೈದರಾಬಾದ್​ನ ರಸ್ತೆಗಳಲ್ಲಿ ನಿಂತ ಕಾರು, ಲಾರಿಗಳು ಮಳೆಯ ನೀರಿನಲ್ಲಿ ತೇಲಿಕೊಂಡು ಬರುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಭಾರೀ ಮಳೆಯಿಂದಾಗಿ ತೆಲಂಗಾಣದ ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದೆ.

ಹೈದರಾಬಾದ್​ ಒಂದರಲ್ಲೇ ಮಳೆಯಿಂದ 18 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್​ನ ಬಹುತೇಕ ಭಾಗ ಮುಳುಗಿಹೋಗಿದೆ. ರಸ್ತೆ, ಮನೆ, ಕಚೇರಿಗಳು, ದೇವಸ್ಥಾನಗಳು ಎಲ್ಲಾ ಕಡೆಯೂ ಮಳೆನೀರು ನುಗ್ಗಿರುವುದರಿಂದ ಜನರು ಪ್ರಾಣಾಪಾಯದ ಭೀತಿಯಲ್ಲಿದ್ದಾರೆ. ಬುಧವಾರ ಹೈದರಾಬಾದ್​ನ ಬಂದ್ಲಗುಡ ಪ್ರದೇಶದಲ್ಲಿ ಮಗು ಸೇರಿದಂತೆ 9 ಮಂದಿ ಮೃತ ಪಟ್ಟಿದ್ದಾರೆ. ಸತತ ಮಳೆಗೆ ಬಂಡೆಯೊಂದು ನೀರಿನಲ್ಲಿ ಕೊಚ್ಚಿ ಬಂದು ಮನೆಗೆ ಬಿದ್ದ ಪರಿಣಾಮ ಮೂವರು ಗಾಯಗೊಂಡಿದ್ದರು. ಹೈದರಾಬಾದ್​ನಲ್ಲಿ ಮನೆಯ ಗೋಡೆ ಕುಸಿದು ಬಿದ್ದು ಮೂವರು ಮೃತಪಟ್ಟಿದ್ದರು. ತೆಲಂಗಾಣದಲ್ಲಿ ಇಂದು ಮತ್ತೆ ಮಳೆ ಹೆಚ್ಚಾಗುವ ಸಾಧ್ಯತೆಯಿದೆ.


ತೆಲಂಗಾಣದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡಬಾರದು ಎಂದು ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಹೈದರಾಬಾದ್​ನಲ್ಲಿ ಇತ್ತೀಚಿನ ವರ್ಷಗಳಲ್ಲಿ ದಾಖಲಾದ ಅತ್ಯಧಿಕ ಮಳೆ ಇದಾಗಿದೆ. ಮಳೆನೀರಿನಲ್ಲಿ 8 ಮಂದಿ ಕೊಚ್ಚಿಕೊಂಡು ಹೋಗಿದ್ದು, ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಅವರ ಮೃತದೇಹಗಳು ಪತ್ತೆಯಾದರೆ ತೆಲಂಗಾಣದಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ ಹೆಚ್ಚಾಗಲಿದೆ.ಮನೆಯೊಳಗೆ ನೀರು ನುಗ್ಗಿದ್ದರಿಂದ ಮನೆಯ ಹೊರಗೆ ಬಂದವರು ರಸ್ತೆಯಲ್ಲಿ ತುಂಬಿ ಹರಿಯುತ್ತಿದ್ದ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇಡೀ ಹೈದರಾಬಾದ್​ ನಗರವೇ ಜಲಾವೃತವಾಗಿದ್ದು, ಪ್ರವಾಹದಿಂದ ಸಾವಿನ ಆತಂಕ ಹೆಚ್ಚಾಗಿದೆ. ಹೈದರಾಬಾದ್​ನ ರಸ್ತೆಗಳಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗಿ, ರಾಶಿ ಬಿದ್ದಿವೆ. ಪಕ್ಕದ ಆಂಧ್ರ ಪ್ರದೇಶದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ತಗ್ಗು ಪ್ರದೇಶದ ಮನೆಗಳು ನೀರಿನಿಂದ ಆವೃತವಾಗಿವೆ.ತೆಲಂಗಾಣ ಮತ್ತು ಆಂಧ್ರ ಪ್ರದೇಶದ 80 ಸಾವಿರಕ್ಕೂ ಹೆಚ್ಚು ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಶಿಫ್ಟ್​ ಮಾಡಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 30ಕ್ಕೂ ಹೆಚ್ಚು ಜನರು ಮಳೆಯಿಂದ ಸಾವನ್ನಪ್ಪಿದ್ದಾರೆ. ಹೈದರಾಬಾದ್​ನಲ್ಲಿ ಅತಿಹೆಚ್ಚು ಜನರು ಮೃತಪಟ್ಟಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೂಡ ತೆಲಂಗಾಣದಲ್ಲಿ ರಜೆ ಘೋಷಿಸಲಾಗಿದ್ದು, ರೆಡ್ ಅಲರ್ಟ್​ ಜಾರಿಗೊಳಿಸಲಾಗಿದೆ.
Published by: Sushma Chakre
First published: October 15, 2020, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading