HOME » NEWS » National-international » STOP BEATING AROUND THE BUSH COMPLY WITH LAW OF LAND CENTRE TO TWITTER KVD

Twitter: ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಮಾತನಾಡಿದ್ದ ಟ್ವಿಟ್ಟರ್​​​ಗೆ ತಿರುಗೇಟು ನೀಡಿದ ಕೇಂದ್ರ ಸರ್ಕಾರ!

ಟ್ವಿಟ್ಟರ್​ ಒಂದು ಸಾಮಾಜಿಕ ಮಾಧ್ಯಮವಷ್ಟೇ. ಭಾರತದ ಕಾನೂನು ಚೌಕಟ್ಟು ಹೇಗಿರಬೇಕೆಂದು ನಿರ್ಧರಿಸುವಲ್ಲಿ ಮೂಗು ತೂರಿಸುವುದು ಬೇಡ ಎಂದು ಕೇಂದ್ರ ಸರ್ಕಾರ ಚಾಟಿ ಬೀಸಿದೆ.

Kavya V | news18-kannada
Updated:May 27, 2021, 8:33 PM IST
Twitter: ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಮಾತನಾಡಿದ್ದ ಟ್ವಿಟ್ಟರ್​​​ಗೆ ತಿರುಗೇಟು ನೀಡಿದ ಕೇಂದ್ರ ಸರ್ಕಾರ!
ಟ್ವಿಟರ್
  • Share this:
ನವದೆಹಲಿ: ಸಾಮಾಜಿಕ ಜಾಲತಾಣಗಳ ಸಂಬಂಧ ಹೊಸ ನೀತಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳ ಮಧ್ಯೆ ತಿಕ್ಕಾಟ ಶುರುವಾಗಿದೆ. ಕೇಂದ್ರ ಸರ್ಕಾರದ ಹೊಸ ನೀತಿಯಿಂದ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕಿರುವ ಸಂಭಾವ್ಯ ಅಪಾಯ ಮತ್ತು ಪೊಲೀಸರ ಮೂಲಕ ಹೆದರಿಸುವ ತಂತ್ರದ ವಿರುದ್ಧ ಟ್ವಿಟ್ಟರ್​ ನಿನ್ನೆ ಆತಂಕ ವ್ಯಕ್ತಪಡಿಸಿ ಪ್ರಕಟಣೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ತಿರುಗೇಟು ನೀಡಿದ್ದು, ಈ ನೆಲೆದ ಕಾನೂನನ್ನು ಪಾಲಿಸುವಂತೆ ತಾಕೀತು ಮಾಡಿದೆ.

ದೇಶದ ಕಾನೂನನ್ನು ಪಾಲಿಸಲು ಶ್ರಮಿಸುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದ ಟ್ವಿಟ್ಟರ್​​ , ಸರ್ಕಾರದ ನಿಯಮದಲ್ಲಿರುವ ಮುಕ್ತ ಸಂವಹನ ತಡೆಯುವ ಅಂಶಗಳನ್ನು ಬದಲಿಸುವಂತೆ ಕೋರುವುದಾಗಿ ತಿಳಿಸಿತ್ತು. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಟ್ವಿಟ್ಟರ್​ ಈ ನೆಲೆದ ಕಾನೂನನ್ನು ಪಾಲಿಸಬೇಕು. ಕಾನೂನು ಮತ್ತು ನೀತಿ ನಿರೂಪಣೆ ಎಂಬುವುದು ಇಲ್ಲಿನ ಸಾರ್ವಭೌಮತ್ವದ ಪರಮಾಧಿಕಾರ. ಟ್ವಿಟ್ಟರ್​ ಒಂದು ಸಾಮಾಜಿಕ ಮಾಧ್ಯಮವಷ್ಟೇ. ಭಾರತದ ಕಾನೂನು ಚೌಕಟ್ಟು ಹೇಗಿರಬೇಕೆಂದು ನಿರ್ಧರಿಸುವಲ್ಲಿ ಮೂಗು ತೂರಿಸುವುದು ಬೇಡ ಎಂದು ಚಾಟಿ ಬೀಸಿದೆ.

ಇನ್ನು ದೆಹಲಿಯಲ್ಲಿ ಟ್ವಿಟ್ಟರ್​ ಕಚೇರಿ ಮೇಲೆ ಪೊಲೀಸರ ದಾಳಿಯ ಬಗ್ಗೆಯೂ ಸಚಿವಾಲಯ ಸ್ಪಷ್ಟನೆ ನೀಡಿದೆ. ಟ್ವಿಟ್ಟರ್​ ಸೇರಿದಂತೆ ಸಾಮಾಜಿಕ ಮಾಧ್ಯಮ ಕಂಪನಿಗಳ ಪ್ರತಿನಿಧಿಗಳು ಭಾರತದಲ್ಲಿ ಸುರಕ್ಷಿತವಾಗಿರುತ್ತಾರೆ. ಅವರ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲ ಎಂದು ದೃಢ ಭರವಸೆ ನೀಡಲು ಬಯಸುತ್ತೇವೆ ಎಂದು ಸರ್ಕಾರ ತಿಳಿಸಿದೆ. ಕೇಂದ್ರದ ವಿರುದ್ಧ ರೂಪಿಸಿದ್ದರು ಎನ್ನಲಾದ ಟೂಲ್​ಕಿಟ್​ ಸಂಬಂಧ ಇತ್ತೀಚೆಗೆ ದೆಹಲಿಯ ಟ್ವಿಟ್ಟರ್​ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು.

ಇದನ್ನೂ ಓದಿ: ಎರಡು ಬೇರೆ ಬೇರೆ ಲಸಿಕೆ ಪಡೆಯುವುದು ಸೇಫ್.. ವ್ಯಾಕ್ಸಿನ್ ಕಾಕ್​​​ಟೇಲ್​​ಗೆ OK ಎಂದ ಕೋವಿಡ್ ತಜ್ಞ ವೈದ್ಯ!

ಪ್ರಧಾನಿ ಅವರ ವರ್ಚಸ್ಸನ್ನು ಕ್ಷೀಣಿಸಲು ಕಾಂಗ್ರೆಸ್​ ಟೂಲ್​ ಕಿಟ್​ ಪಿತೂರಿ ನಡೆಸಿದೆ ಎಂಬ ಬಿಜೆಪಿ ವಕ್ತಾರ ಸಂಬಿತ್​ ಪಾತ್ರ ಆರೋಪದ ಬೆನ್ನಲ್ಲೇ ಮೇ 24ರಂದು  ದೆಹಲಿ ಪೊಲೀಸರು ಟ್ವಿಟರ್​ ಇಂಡಿಯಾ ಕಚೇರಿ ಮೇಲೆ ದಾಳಿ ನಡೆಸಿದ್ದರು. ದೆಹಲಿಯ ದಕ್ಷಿಣ ಮತ್ತು ಗುರುಗಾವ್​ನ ಟ್ವಿಟರ್​ ಕಚೇರಿಗೆ ಪೊಲೀಸರು ದಾಳಿ ನಡೆಸಿದ್ದರು. ಟೂಲ್​ಕಿಟ್​ ಆರೋಪದ ಹಿನ್ನಲೆ ಟ್ವಿಟರ್ ಇಂಡಿಯಾಗೆ ನೋಟಿಸ್​ ಜಾರಿ ಮಾಡಲಾಗಿತ್ತು. ಆದರೆ, ಕಂಪನಿ ನೀಡಿದ ದಾಖಲೆ ಅಸ್ಪಷ್ಟವಾಗಿದೆ. ಈ ಹಿನ್ನಲೆ ನೋಟಿಸ್​ ಅನ್ನು ಸಂಬಂಧ ಪಟ್ಟ ವ್ಯಕ್ತಿಗೆ ಖುದ್ದು ನೀಡಲು ಬಂದಿರುವುದಾಗಿ ದೆಹಲಿ ಪೊಲೀಸರು  ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ್ದ ಪೊಲೀಸರು, ಟ್ವಿಟರ್​ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ನೀಡಿದ್ದ ಉತ್ತರ ಅಸ್ಪಷ್ಟವಾಗಿದ್ದು, ಈ ಹಿನ್ನಲೆ ನೋಟಿಸ್​ ನೀಡಲು ಸೂಕ್ತ ವ್ಯಕ್ತಿ ಯಾರು ಎಂದು ಕಂಡು ಕೊಳ್ಳಲು ಈ ಭೇಟಿ ಅಗತ್ಯವಾಗಿದೆ ಎಂದು ತಿಳಿಸಿದ್ದರು.

ಕೋವಿಡ್​ ಬಿಕ್ಕಟ್ಟಿನ ಹಿನ್ನಲೆ ಕಂಪನಿಯ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆ ಅವರಿಗೆ ಸಿಬ್ಬಂದಿಗಳು ಸಿಗದೇ, ನೋಟಿಸ್​ ನೀಡಲು ಯಾರು ಸರಿಯಾದ ವ್ಯಕ್ತಿ ಎಂದು ಪೊಲೀಸರು ವಿಚಾರಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿದ್ದವು.

ಏನಿದು ಟೂಲ್​ ಕಿಟ್​ ಪ್ರಕರಣ? ಕೋವಿಡ್​ ಸಂಕಷ್ಟದ ಈ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಷಸ್ಸನ್ನು ಕಾಂಗ್ರೆಸ್​ ಕೆಡಿಸಲು ಮುಂದಾಗಿದೆ. ಇದಕ್ಕಾಗಿ ಟೂಲ್​ ಕಿಟ್​ ಪಿತೂರಿ ನಡೆಸುತ್ತಿದೆ ಎಂದ ಮೇ 18 ರಂದು ಬಿಜೆಪಿ ವಕ್ತಾರ ಸಂಬಿತ್​ ಪಾತ್ರ ಆರೋಪ ಮಾಡಿದ್ದರು. ಈ ಆರೋಪವನ್ನು ಟ್ವಿಟರ್​ ಕೂಡ ನಿರಾಕರಿಸಿತ್ತು. ಅಲ್ಲದೇ ತಿರುಚಿದ ದಾಖಲೆ ಟ್ಯಾಗ್​ಗೆ ಆಕ್ಷೇಪ ವ್ಯಕ್ತಪಡಿಸಿ, ಈ ತಿರುಚಿದ ಮಾಧ್ಯಮಗಳ ಟ್ಯಾಗ್​ಗಳನ್ನು ತೆಗೆಯುವಂತೆ ಸೂಚಿಸಿತು. ಈ ಸಂಬಂಧ ದೆಹಲಿ ಪೊಲೀಸರು ಕೂಡ ಟ್ವಿಟರ್​ ಇಂಡಿಯಾಗೆ ನೋಟಿಸ್​ ನೀಡಿದ್ದರು.
Published by: Kavya V
First published: May 27, 2021, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories