Shocking News: ಹುಟ್ಟುವ ಮಗುವಿನ ಲಿಂಗ ತಿಳಿಯಲು ಹೆಂಡತಿಯ ಹೊಟ್ಟೆಯನ್ನೇ ಸೀಳಿದ ಗಂಡ!

Uttar Pradesh: ಗರ್ಭಿಣಿಯಾಗಿದ್ದ ಹೆಂಡತಿಯ ಹೊಟ್ಟೆಯಲ್ಲಿರುವುದು ಗಂಡೋ, ಹೆಣ್ಣೋ ಎಂದು ತಿಳಿದುಕೊಳ್ಳಲು ಗಂಡ ಸಾಕಷ್ಟು ಪ್ರಯತ್ನಪಟ್ಟಿದ್ದ. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಆಕೆ ಶನಿವಾರ ರಾತ್ರಿ ಮಲಗಿದ್ದಾಗ ಚಾಕುವಿನಿಂದ ಆಕೆಯ ಹೊಟ್ಟೆಯನ್ನು ಸೀಳಿದ್ದ.

Sushma Chakre | news18-kannada
Updated:September 21, 2020, 3:55 PM IST
Shocking News: ಹುಟ್ಟುವ ಮಗುವಿನ ಲಿಂಗ ತಿಳಿಯಲು ಹೆಂಡತಿಯ ಹೊಟ್ಟೆಯನ್ನೇ ಸೀಳಿದ ಗಂಡ!
ಸಾಂದರ್ಭಿಕ ಚಿತ್ರ
  • Share this:
ಬರೇಲಿ (ಸೆ. 21): ಪ್ರತಿ ದಂಪತಿಗೂ ತಮಗೆ ಹುಟ್ಟುವ ಮಗು ಯಾವ ರೀತಿಯಲ್ಲಿರಬೇಕು, ಹೆಣ್ಣುಮಗು ಬೇಕೋ, ಗಂಡು ಮಗು ಬೇಕೋ ಎಂಬ ಬಗ್ಗೆ ನೂರಾರು ಕನಸುಗಳಿರುತ್ತವೆ. ಆ ಮಗುವನ್ನು ಹೇಗೆ ನೋಡಿಕೊಳ್ಳಬೇಕು, ಏನು ಹೆಸರಿಡಬೇಕು, ನೋಡಲು ಹೇಗಿರಬೇಕು ಎಂದೆಲ್ಲ ಅವರಿಗೆ ನಾನಾ ಕಲ್ಪನೆಗಳಿರುತ್ತವೆ. ಈಗ ಮಗು ಹೊಟ್ಟೆಯಲ್ಲಿರುವಾಗಲೇ ಅದು ಗಂಡೋ, ಹೆಣ್ಣೋ ಎಂದು ತಿಳಿಯುವುದು ಕಾನೂನು ಪ್ರಕಾರವಾಗಿ ಅಪರಾಧವಾದ್ದರಿಂದ ಮಗು ಹುಟ್ಟಿದ ನಂತರವೇ ಆ ಮಗುವಿನ ಲಿಂಗ ಗೊತ್ತಾಗುತ್ತದೆ. ಆದರೆ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬನಿಗೆ ತನ್ನ ಹೆಂಡತಿಯ ಹೊಟ್ಟೆಯಲ್ಲಿರುವ ಮಗು ಗಂಡೋ, ಹೆಣ್ಣೋ ಎಂದು ತಿಳಿಯುವ ಆತುರ ಹೆಚ್ಚಾಯಿತು. ವೈದ್ಯರ ಬಳಿ ಕೇಳಿದರೆ ಅವರು ಹೇಳಲು ಒಪ್ಪದ ಕಾರಣ ತಾನೇ ಚಾಕುವಿನಿಂದ ಗರ್ಭಿಣಿ ಹೆಂಡತಿಯ ಹೊಟ್ಟೆಯಲ್ಲಿ ಕೊಯ್ದಿದ್ದಾನೆ!

ಇಂತಹ ಆಘಾತಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ. 43 ವರ್ಷದ ಪನ್ನಾಲಾಲ್​ಗೆ ಈಗಾಗಲೇ 5 ಹೆಣ್ಣುಮಕ್ಕಳಿದ್ದರು. ಆತನ ಹೆಂಡತಿ ಅನಿತಾ ದೇವಿ ಮತ್ತೊಮ್ಮೆ ಗರ್ಭಿಣಿಯಾಗಿದ್ದರು. ಈ ಬಾರಿಯಾದರೂ ಗಂಡು ಮಗುವಾಗಲೆಂದು ಆತ ನಾನಾ ದೇವರಿಗೆ ಹರಕೆ ಹೊತ್ತಿದ್ದ. ತನಗೆ ಗಂಡು ಮಗು ಹುಟ್ಟುತ್ತದಾ? ಎಂದು ಜ್ಯೋತಿಷ್ಯ ಕೇಳಲು ಹೋಗಿದ್ದಾಗ ಜ್ಯೋತಿಷಿಯೊಬ್ಬರು ಈ ಬಾರಿಯೂ ನಿನಗೆ ಹೆಣ್ಣುಮಗುವೇ ಹುಟ್ಟಲಿದೆ ಎಂದು ಹೇಳಿದ್ದರು.

ಹೀಗಾಗಿ, ಗರ್ಭಿಣಿಯಾಗಿದ್ದ ಹೆಂಡತಿ ಅನಿತಾಳ ಹೊಟ್ಟೆಯಲ್ಲಿರುವುದು ಗಂಡೋ, ಹೆಣ್ಣೋ ಎಂದು ತಿಳಿದುಕೊಳ್ಳಲು ಆತ ಸಾಕಷ್ಟು ಪ್ರಯತ್ನಪಟ್ಟಿದ್ದ. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಆಕೆ ಶನಿವಾರ ರಾತ್ರಿ ಮಲಗಿದ್ದಾಗ ಚಾಕುವಿನಿಂದ ಆಕೆಯ ಹೊಟ್ಟೆಯನ್ನು ಸೀಳಿ ಮಗುವಿನ ಲಿಂಗವನ್ನು ನೋಡಲು ಮುಂದಾಗಿದ್ದ. ಇದರಿಂದ ರಕ್ತದ ಮಡುವಿನಿನಲ್ಲಿ ಬಿದ್ದು ಹೊರಳಾಡುತ್ತಿದ್ದ ಆತನ ಹೆಂಡತಿಯನ್ನು ಆತನ ಮನೆಯವರು ಆಸ್ಪತ್ರೆಗೆ ಸೇರಿಸಿದ್ದರು. ಅನಿತಾಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: Kerala Onam Bumper Lottery: ಕೇರಳದ ಬಂಪರ್ ಲಾಟರಿ; ದೇಗುಲದಲ್ಲಿ ಕೆಲಸ ಮಾಡುವ ಯುವಕ ಈಗ ಕೋಟ್ಯಾಧಿಪತಿ!

ತಮ್ಮ ಮಗಳ ಈ ಸ್ಥಿತಿಗೆ ಅಳಿಯನೇ ಕಾರಣ ಎಂದು ಅನಿತಾಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪನ್ನಾಲಾಲ್​ನನ್ನು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅನಿತಾಳ ತಮ್ಮ ರವಿ ಕುಮಾರ್ ಸಿಂಗ್, ನನ್ನ ಭಾವನಿಗೆ ಗಂಡು ಮಗುವೇ ಆಗಬೇಕೆಂದು ಆಸೆಯಿತ್ತು. ಇದೇ ವಿಷಯಕ್ಕೆ ಅಕ್ಕ-ಭಾವನ ನಡುವೆ ಜಗಳ ಸಹ ನಡೆಯುತ್ತಿತ್ತು. ಇಂದು ಕೂಡ ಅವರಿಬ್ಬರ ನಡುವೆ ಹುಟ್ಟು ಮಗುವಿನ ಬಗ್ಗೆ ಜಗಳ ನಡೆದಿತ್ತು. ಅಕ್ಕ ಮಲಗಿದ್ದಾಗ ಭಾವ ಪನ್ನಾಲಾಲ್ ಆಕೆಯ ಹೊಟ್ಟೆಗೆ ಇರಿದಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಈ ಬಾರಿಯೂ ಹೆಣ್ಣುಮಗುವಾಗಲಿದೆ ಎಂದು ಜ್ಯೋತಿಷಿ ಹೇಳಿದ ಮೇಲೆ ಪನ್ನಾಲಾಲ್ ಬಹಳ ತಲೆಕೆಡಿಸಿಕೊಂಡಿದ್ದ. ಮಗುವನ್ನು ತೆಗೆಸಿಬಿಡೋಣ ಎಂದು ಹೆಂಡತಿಗೆ ಕಾಟ ಕೊಡುತ್ತಿದ್ದ. ಅದಕ್ಕೆ ಅನಿತಾ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಸದಾ ಜಗಳವಾಗುತ್ತಿತ್ತು. ಐದು ಹೆಣ್ಣುಮಕ್ಕಳನ್ನು ಹೆತ್ತಿದ್ದಕ್ಕೆ ಪನ್ನಾಲಾಲ್ ತನ್ನ ಹೆಂಡತಿಗೆ ಹೊಡೆದು, ಹಿಂಸೆ ನೀಡುತ್ತಿದ್ದ ಎಂದು ಅನಿತಾಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
Published by: Sushma Chakre
First published: September 21, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading