Kerala Onam Bumper Lottery: ಕೇರಳದ ಬಂಪರ್ ಲಾಟರಿ; ದೇಗುಲದಲ್ಲಿ ಕೆಲಸ ಮಾಡುವ ಯುವಕ ಈಗ ಕೋಟ್ಯಾಧಿಪತಿ!

Kerala Thiruvonam Lottery Result: ಕೇರಳ ಸರ್ಕಾರದ ಟ್ಯಾಕ್ಸ್​ ಎಲ್ಲ ಕಳೆದು ಅನಂತು ಕೈಗೆ 7.57 ಕೋಟಿ ರೂ. ಸಿಗಲಿದೆ. ಹಾಗೇ, ಲಾಟರಿ ಟಿಕೆಟ್ ಮಾರಿದ ಅಲಗಾರ್ ಸ್ವಾಮಿ ಎಂಬುವವರಿಗೆ ಕಮಿಷನ್ ರೂಪದಲ್ಲಿ 1.20 ಕೋಟಿ ರೂ. ಸಿಗಲಿದೆ.

Sushma Chakre | news18-kannada
Updated:September 21, 2020, 1:19 PM IST
Kerala Onam Bumper Lottery: ಕೇರಳದ ಬಂಪರ್ ಲಾಟರಿ; ದೇಗುಲದಲ್ಲಿ ಕೆಲಸ ಮಾಡುವ ಯುವಕ ಈಗ ಕೋಟ್ಯಾಧಿಪತಿ!
ಕೇರಳದಲ್ಲಿ 12 ಕೋಟಿ ಲಾಟರಿ ಬಹುಮಾನ ಪಡೆದ ಯುವಕ ಅನಂತು
  • Share this:
ತಿರುವನಂತಪುರಂ (ಸೆ. 21): ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಕತೆಯಿದು. ಕೇರಳದ ಕೊಚ್ಚಿಯಲ್ಲಿ ವಾಸವಾಗಿದ್ದ 24 ವರ್ಷದ ಅನಂತು ವಿಜಯನ್ ಎಂಬಾತ ತನ್ನ ಅದೃಷ್ಟ ಹೇಗಿದೆಯೆಂಬುದನ್ನು ಪರೀಕ್ಷಿಸಿಕೊಳ್ಳಲು ಮನೆಯವರಿಗೆ ಹೇಳದೆ ಲಾಟರಿ ಟಿಕೆಟ್ ಖರೀದಿಸಿದ್ದ. ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಆತ ತನ್ನ ಗೆಳೆಯರ ಬಳಿ ತಾನು ಕೋಟ್ಯಾಧಿಪತಿಯಾಗುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ. ಆದರೆ, ಆತನ ಸ್ನೇಹಿತರು ಆತನನ್ನು ಗೇಲಿ ಮಾಡುತ್ತಿದ್ದರು. ಅನಂತು ತನ್ನ ಸ್ನೇಹಿತರಿಗೆ ಹೇಳಿದ ಮಾತು ನಿಜವಾಗುತ್ತದೆ ಎಂದು ಆತನ ಮನೆಯವರಾಗಲಿ, ಸ್ನೇಹಿತರಾಗಲಿ ನಂಬಿರಲಿಲ್ಲ.

ಭಾನುವಾರ ಬೆಳಗ್ಗೆ ತನ್ನ ಲಾಟರಿ ಸಂಖ್ಯೆಗೆ ಬಹುಮಾನ ಬಂದಿದೆಯೇ ಎಂದು ಪೇಪರ್ ಹಿಡಿದು ಕುಳಿತ ಅನಂತು ಎರಡೆರಡು ಬಾರಿ ಕಣ್ಣುಜ್ಜಿಕೊಂಡು ನೋಡಿದ. ಆತನ ಕೈಯಲ್ಲಿದ್ದ ಟಿಕೆಟ್​ಗೆ 12 ಕೋಟಿ ರೂ.ಗಳ ಲಾಟರಿ ಹೊಡೆದಿತ್ತು. ಒಂದೇ ದಿನದಲ್ಲಿ ಅನಂತು ಕೋಟ್ಯಧಿಪತಿಯಾಗಿದ್ದ! ಆತ ಕೇರಳದ ಓಣಂ ಬಂಪರ್ ಲಾಟರಿಯ ವಿಜಯಶಾಲಿಯಾಗಿದ್ದ.

ಅಪ್ಪ-ಅಮ್ಮ, ಅಕ್ಕನಿರುವ ಕುಟುಂಬ ಅನಂತು ವಿಜಯ್ ಒಬ್ಬನ ದುಡಿಮೆಯಿಂದಲೇ ಇಡೀ ಸಂಸಾರ ಜೀವನ ಸಾಗಿಸಬೇಕಾದಂತಹ ಪರಿಸ್ಥಿತಿಯಿದೆ. ಲಾಕ್​ಡೌನ್ ಬಳಿಕ ಅನಂತನಿಗೆ ಸರಿಯಾದ ಸಂಬಳವೂ ಸಿಗುತ್ತಿರಲಿಲ್ಲ. ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ನಿರ್ಧರಿಸಿದ್ದ ಅನಂತು BR 75 TB 173964 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದ. ನಿನ್ನೆ ಸಂಜೆ 5.30ಕ್ಕೆ ಈ ಲಾಟರಿಯ ಫಲಿತಾಂಶ ಪ್ರಕಟವಾಗಿದೆ. ತಾನು ಖರೀದಿಸಿದ ಟಿಕೆಟ್​ಗೆ ಲಾಟರಿ ಬಹುಮಾನ ಬಂದಿದೆ ಎಂಬುದನ್ನು ಅನುಂತುಗೆ ಅರಗಿಸಿಕೊಳ್ಳಲು ಬಹಳ ಸಮಯವೇ ಬೇಕಾಯಿತು.

ಇದನ್ನೂ ಓದಿ: Kerala: ಎರ್ನಾಕುಲಂನ ಕ್ವಾರಿಯಲ್ಲಿ ಸ್ಫೋಟ; ಕರ್ನಾಟಕ, ತಮಿಳುನಾಡಿನ ಇಬ್ಬರು ಕಾರ್ಮಿಕರು ಸಾವು

ಭಾನುವಾರ ಲಾಟರಿಯ ಫಲಿತಾಂಶ ಬರುವುದರಿಂದಅನಂತು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ. ಇಡುಕ್ಕಿ ಮೂಲದ ಅನಂತು ಅವರ ತಂದೆ ವಿಜಯನ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಲಾಕ್​ಡೌನ್ ಬಳಿಕ ಅವರಿಗೆ ಎಲ್ಲೂ ಕೆಲಸವಿರಲಿಲ್ಲ. ಅಕ್ಕ ಅಧಿರಾ ಪ್ರೈವೇಟ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಲಾಕ್​ಡೌನ್ ವೇಳೆ ಅವರ ಕೆಲಸವೂ ಹೋಗಿತ್ತು. ಅಮ್ಮ ಗೃಹಿಣಿ. ಹೀಗಾಗಿ, ಮನೆಯವರೆಲ್ಲರ ಜವಾಬ್ದಾರಿ ಸದ್ಯಕ್ಕೆ ಅನಂತು ಮೇಲಿತ್ತು.

ಮನೆಗೆ ಹಣವನ್ನು ಹೊಂದಿಸಲು ಪರದಾಡುತ್ತಿದ್ದ ಅನಂತು ಇದೇ ಮೊದಲ ಬಾರಿಗೆ ಲಾಟರಿ ಖರೀದಿಸಿದ್ದ. ಆದರೆ, ಆತನ ಅದೃಷ್ಟ ಖುಲಾಯಿಸಿತ್ತು. 'ನಾನು ಖರೀದಿಸಿದ ಲಾಟರಿಗೆ ಬಹುಮಾನ ಬಂದಿದ್ದನ್ನು ತಿಳಿದ ತಕ್ಷಣ ನಾನು ಮೊದಲು ಅಮ್ಮನಿಗೆ ವಿಷಯ ತಿಳಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅಪ್ಪ-ಅಮ್ಮ ಇಬ್ಬರೂ ಶಾಕ್ ಆದರು. ಒಂದು ಹೊತ್ತಿನ ಊಟಕ್ಕೂ ಯೋಚಿಸುತ್ತಿದ್ದ ನಾವು ಕೋಟ್ಯಾಧಿಪತಿಯಾಗಿದ್ದೇವೆ ಎಂಬುದನ್ನು ಅರಗಿಸಿಕೊಳ್ಳಲು ನಮಗೆಲ್ಲರಿಗೂ ಬಹಳ ಸಮಯ ಬೇಕಾಯಿತು. ಈ ಅಚ್ಚರಿ, ಸಂತೋಷದಿಂದ ಹೊರಗೆ ಬರಲು ನನಗೆ ಹಲವು ಗಂಟೆಗಳೇ ಬೇಕಾದವು. ಇದೇ ಆಶ್ಚರ್ಯದಲ್ಲಿ ನಿನ್ನೆ ರಾತ್ರಿ ಕೇವಲ 2 ಗಂಟೆ ನಿದ್ರೆ ಮಾಡಿದ್ದೇನೆ' ಎಂದು ಅನಂತು ನ್ಯೂಸ್​18 ಜೊತೆಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಪಾರ್ಟ್​ ಟೈಂ ಕೆಲಸ ಮಾಡುತ್ತಾ ತನ್ನ ಓದಿಗೆ ತಾನೇ ಹಣ ಹೊಂದಿಸಿಕೊಂಡಿದ್ದ ಅನಂತು ಕಳೆದ 2 ವರ್ಷಗಳಿಂದ ಎರ್ನಾಕುಲಂನ ಪೊನ್ನೆತ್ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ. ಲಾಟರಿಯ ಬಹುಮಾನದ ಹಣ ಕೈಸೇರುವವರೆಗೂ ದೇವಸ್ಥಾನದಲ್ಲಿಯೇ ಕೆಲಸ ಮಾಡಲು ಅನಂತು ನಿರ್ಧರಿಸಿದ್ದಾನೆ. ಸರ್ಕಾರದ ಟ್ಯಾಕ್ಸ್​ ಎಲ್ಲ ಕಳೆದು ಅನಂತು ಕೈಗೆ 7.57 ಕೋಟಿ ರೂ. ಸಿಗಲಿದೆ. ಹಾಗೇ, ಲಾಟರಿ ಟಿಕೆಟ್ ಮಾರಿದ ಅಲಗಾರ್ ಸ್ವಾಮಿ ಎಂಬುವವರಿಗೆ ಕಮಿಷನ್ ರೂಪದಲ್ಲಿ 1.20 ಕೋಟಿ ರೂ. ಸಿಗಲಿದೆ.

(ವರದಿ: ಎಂ.ಎಸ್. ಅನೀಶ್ ಕುಮಾರ್/ ಮೀರಾ ಮನು)
Published by: Sushma Chakre
First published: September 21, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading