ನನಗೆ ಉಸಿರಾಡಲೂ ಆಗುತ್ತಿಲ್ಲ ಅಪ್ಪಾ; ಆಸ್ಪತ್ರೆಯಿಂದ ಸೆಲ್ಫೀ ವಿಡಿಯೋ ಕಳುಹಿಸಿ ಪ್ರಾಣ ಬಿಟ್ಟ ಮಗ!

ನನಗಿಲ್ಲಿ ಉಸಿರಾಡಲೂ ಕಷ್ಟವಾಗುತ್ತಿದೆ. ನಾನು ಬದುಕುವುದಿಲ್ಲ ಎನಿಸುತ್ತಿದೆ ಎಂದು ಅಪ್ಪನಿಗೆ ವಿಡಿಯೋ ಮೆಸೇಜ್ ಕಳುಹಿಸಿದ ಒಂದು ಗಂಟೆಯಲ್ಲೇ ಯುವಕ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

Sushma Chakre | news18-kannada
Updated:June 29, 2020, 10:45 AM IST
ನನಗೆ ಉಸಿರಾಡಲೂ ಆಗುತ್ತಿಲ್ಲ ಅಪ್ಪಾ; ಆಸ್ಪತ್ರೆಯಿಂದ ಸೆಲ್ಫೀ ವಿಡಿಯೋ ಕಳುಹಿಸಿ ಪ್ರಾಣ ಬಿಟ್ಟ ಮಗ!
ಸಾಂದರ್ಭಿಕ ಚಿತ್ರ
  • Share this:
ಹೈದರಾಬಾದ್​ (ಜೂ. 29): 'ನನಗೆ ಉಸಿರಾಡಲೂ ಸಾಧ್ಯವಾಗುತ್ತಿಲ್ಲ ಅಪ್ಪ...ನಾನು ಇವರೆಲ್ಲರ ಬಳಿ ಬೇಡಿಕೊಂಡರೂ 3 ಗಂಟೆಗಳಿಂದ ನನಗೆ ಆಕ್ಸಿಜನ್ ಸಪ್ಲೈ ಮಾಡುವುದನ್ನು ನಿಲ್ಲಿಸಿದ್ದಾರೆ. ನನ್ನ ಹೃದಯ ಬಡಿದುಕೊಳ್ಳುವುದನ್ನು ನಿಲ್ಲಿಸಿದೆ ಎನಿಸುತ್ತಿದೆ.. ಬೈ ಅಪ್ಪಾ...' ಇದು ಕೊರೋನಾದಿಂದಾಗಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ರೋಗಿಯೊಬ್ಬ ತನ್ನ ಅಪ್ಪನಿಗೆ ಕಳುಹಿಸಿದ ಕೊನೆಯ ವಿಡಿಯೋ ಮೆಸೇಜ್!

ಹೈದರಾಬಾದ್​ನ ಕೊರೋನಾ ಆಸ್ಪತ್ರೆಗೆ ದಾಖಲಾಗಿದ್ದ 34 ವರ್ಷದ ರೋಗಿ ತಾನಿನ್ನು ಬದುಕುವುದಿಲ್ಲ ಎಂದು ಖಾತರಿಯಾಗುತ್ತಿದ್ದಂತೆ ತನ್ನ ಪ್ರೀತಿಯ ಅಪ್ಪನಿಗೆ ಒಂದು ಸೆಲ್ಫೀ ವಿಡಿಯೋ ಕಳುಹಿಸಿದ್ದ. ಆ ಮನಕಲಕುವ ವಿಡಿಯೋ ನೋಡಿದವರು ಬೆಚ್ಚಿಬಿದ್ದಿದ್ದಾರೆ. ಆತನ ಪರಿಸ್ಥಿತಿಗೆ ಕಾರಣರಾದ ಆಸ್ಪತ್ರೆಯ ಸಿಬ್ಬಂದಿಗೆ ತಕ್ಕ ಶಿಕ್ಷೆ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ.

ಇದನ್ನೂ ಓದಿ: Vande Bharat Mission: ಜುಲೈ 3ರಿಂದ ವಂದೇ ಭಾರತ್​ ಮಿಷನ್​ 4ನೇ ಹಂತ ಶುರು; 17 ದೇಶಗಳ ಭಾರತೀಯರ ರಕ್ಷಣೆಗೆ ಸಿದ್ಧತೆ

ಹೈದರಾಬಾದ್​ನ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಆ ರೋಗಿ ಅಲ್ಲಿನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದಾನೆ. ವಿಪರ್ಯಾಸವೆಂದರೆ ಆ ವಿಡಿಯೋ ಮಾಡಿದ ಕೆಲವೇ ಹೊತ್ತಿನಲ್ಲಿ ಆತ ಪ್ರಾಣ ಬಿಟ್ಟಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಮಗನ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆತನ ಅಪ್ಪ ಆರೋಪಿಸಿದ್ದಾರೆ.

ತೀವ್ರವಾದ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 34 ವರ್ಷದ ಯುವಕನನ್ನು ಆತನ ತಂದೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಕೊರೋನಾ ಭೀತಿಯಿಂದ 10 ಖಾಸಗಿ ಆಸ್ಪತ್ರೆಯವರು ಆತನನ್ನು ಅಡ್ಮಿಟ್ ಮಾಡಿಕೊಳ್ಳಲು ಒಪ್ಪಲಿಲ್ಲ. ಹೀಗಾಗಿ, ಕೊನೆಗೆ ಹೈದರಾಬಾದ್​ನ ಸರ್ಕಾರಿ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆತ ಸಾವನ್ನಪ್ಪಿದ ನಂತರ ಬಂದ ವೈದ್ಯಕೀಯ ವರದಿಯಲ್ಲಿ ಆತನಿಗೆ ಕೊರೋನಾ ಇದ್ದುದು ಖಚಿತವಾಗಿತ್ತು. ಆತ ಸಾವನ್ನಪ್ಪಿದ ಸುದ್ದಿ ತಿಳಿದು, ಆತನ ಅಂತ್ಯಕ್ರಿಯೆಯನ್ನು ಮುಗಿಸಿದ ಮನೆಗೆ ಬಂದ ಅಪ್ಪ ತನ್ನ ಮೊಬೈಲ್ ನೋಡಿದಾಗ ಮಗ ವಿಡಿಯೋ ಮೆಸೇಜ್ ಕಳುಹಿಸಿದ್ದು ಗೊತ್ತಾಯಿತು. ಆ ವಿಡಿಯೋ ಮೆಸೇಜ್ ಕಳುಹಿಸಿದ ಒಂದೇ ಗಂಟೆಯಲ್ಲಿ ಆತ ಸಾವನ್ನಪ್ಪಿದ್ದ.

ಇದನ್ನೂ ಓದಿ: Petrol Price: 23 ದಿನಗಳಿಂದ ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು ಬೆಲೆ?

'ನನಗಿಲ್ಲಿ ಉಸಿರಾಡಲೂ ಕಷ್ಟವಾಗುತ್ತಿದೆ. ನನಗೆ ಆಕ್ಸಿಜನ್​ ನೀಡುವಂತೆ 3 ಗಂಟೆಗಳಿಂದ ವೈದ್ಯರು, ನರ್ಸ್​ಗಳ ಬಳಿ ಬೇಡಿಕೊಳ್ಳುತ್ತಿದ್ದೇನೆ. ಆದರೆ, ಅವರು ನನ್ನ ಮಾತನ್ನೇ ಕೇಳಿಸಿಕೊಳ್ಳುತ್ತಿಲ್ಲ. ನನ್ನ ಹೃದಯ ಬಡಿತ ನಿಂತು ಹೋಗುತ್ತಿದೆ ಎಂದೆನಿಸುತ್ತಿದೆ. ಎಲ್ಲರಿಗೂ ಬೈ, ಬೈ ಅಪ್ಪಾ....' ಎಂದು ಆತ ಅಪ್ಪನಿಗೆ ವಿಡಿಯೋ ಮಾಡಿ ಕಳುಹಿಸಿದ್ದ. ಆ ವಿಡಿಯೋ ನೋಡಿದ ಕೂಡಲೆ ಅಪ್ಪನ ಕಂಗಳು ತುಂಬಿ, ಹೃದಯ ಭಾರವಾಗಿತ್ತು. ಆದರೆ, ತನ್ನ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಬೇಕೆಂದು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

ಆದರೆ, ಆಸ್ಪತ್ರೆಯ ಸಿಬ್ಬಂದಿ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಆತನನ್ನು ನಾವು ವೆಂಟಿಲೇಟರ್​ನಲ್ಲೇ ಇರಿಸಿದ್ದೆವು. ಆಕ್ಸಿಜನ್ ಕೊಟ್ಟರೂ ಆತ ಬದುಕಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
First published: June 29, 2020, 10:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading