news18-kannada Updated:January 20, 2021, 7:47 AM IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
ಕೋಲ್ಕತ್ತಾ: "ಬಿಜೆಪಿ ಮಾವೋವಾದಿಗಳಿಗಿಂತಲೂ ಹೆಚ್ಚು ಅಪಾಯಕಾರಿ. ಇದೀಗ ರಾಜ್ಯದಲ್ಲಿ ಚುನಾವಣೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜನರ ಮತಗಳನ್ನು ಸೆಳೆಯಲು ಬಿಜೆಪಿ ಸಾಕಷ್ಟು ಸುಳ್ಳು ಭರವಸೆಗಳನ್ನು ನೀಡುತ್ತದೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಬಂಗಾಳದಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಈಗಾಗಲೇ ಚುನಾವಣಾ ರ್ಯಾಲಿಯನ್ನು ಆರಂಭಿಸಿದೆ. ಅಲ್ಲದೆ, ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನೂ ಸಹ ಪಕ್ಷಾಂತರ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಬಿಜೆಪಿ ನಾಯಕರ ಇಂತಹ ವರ್ತನೆಯನ್ನು ಗೇಲಿ ಮಾಡಿರುವ ಮಮತಾ ಬ್ಯಾನರ್ಜಿ, "ತೃಣಮೂಲ ಕಾಂಗ್ರೆಸ್ ಪಕ್ಷಾಂತರಿಗಳಿಂದ ಎದೆಗುಂದಿಲ್ಲ. ರಾಜಕೀಯವು ಗಂಭೀರ ಸಿದ್ಧಾಂತ ಮತ್ತು ತತ್ವಶಾಸ್ತ್ರವಾಗಿದೆ. ಇದನ್ನು ಪ್ರತಿದಿನ ಬಟ್ಟೆಗಳಂತೆ ಬದಲಾಯಿಸಲು ಸಾಧ್ಯವಿಲ್ಲ" ಎಂದು ಪ್ರತ್ಯುತ್ತರ ನೀಡಿದ್ದಾರೆ.
ಮಂಗಳವಾರ ಪುರುಲಿಯಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, "ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ಬಿಜೆಪಿ ನೀಡುತ್ತಿದೆ. ರಾಜಕೀಯ ಎನ್ನುವುದು ಹೊಣೆಗಾರಿಕೆಯಿಂದ ಕೂಡಿದ ಸಿದ್ಧಾಂತ. ಇದನ್ನು ಬಟ್ಟೆ ಬದಲಾಯಿಸಿದಂತೆ ದಿನವೂ ಬದಲಾಯಿಸಲು ಸಾಧ್ಯವಿಲ್ಲ. ಯಾರು ಬಿಜೆಪಿಯನ್ನು ಸೇರಲು ಬಯಸುತ್ತೀರೊ ಅವರು ತೆರಳಬಹುದು. ಆದರೆ ನಾವು ಆ ಪಕ್ಷದ ಮುಂದೆ ಎಂದಿಗೂ ತಲೆ ತಗ್ಗಿಸುವುದಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಜಂಗಲ್ಮಹಲ್ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿ ಜನರನ್ನು ಬಿಜೆಪಿ ನಾಯಕರು ದಾರಿತಪ್ಪಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ನೀಡಿದ್ದ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಈ ಕಡೆ ತಲೆ ಹಾಕಿಲ್ಲ.
ಇನ್ನೇನು ಕೆಲವೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ಹಲವು ಟಿಎಂಸಿ ನಾಯಕರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ" ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಹಲವು ಪ್ರಮುಖ ಪಕ್ಷಗಳು ಇದುವರೆಗೂ ಘೋಷಿಸಿವೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ಶಿವಸೇನೆ ಮತ್ತು ಅಸದುದ್ದೀನ್ ಓವೈಸಿ ಅವರ ಪಕ್ಷವೂ ಸಹ ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಇನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವೂ ಸಹ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ.
ಇದನ್ನೂ ಓದಿ: Covid-19 Vaccines: ಬುಧವಾರದಿಂದ ನೆರೆಯ ದೇಶಗಳಿಗೆ ಕೋವಿಡ್ ಲಸಿಕೆ ರಫ್ತು ಕಾರ್ಯಾರಂಭ
ಮತ್ತೊಂದು ಕಡೆ ಬಿಜೆಪಿ, ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎಂದು ಹವಣಿಸುತ್ತಿದೆ. ಈ ನಿಟ್ಟಿನಲ್ಲಿ ಹಲವು ಟಿಎಂಸಿ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಇನ್ನು ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಕೊರೋನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಚುನಾವಣೆ ಇದಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್ಗೆ ನೇರಾನೇರಾ ತೀವ್ರ ಪೈಪೋಟಿ ಇರಲಿದೆ. ಹಾಗಾಗಿ ಪಶ್ಚಿಮ ಬಂಗಾಳ ಯಾರ ತೆಕ್ಕೆಗೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.
Published by:
MAshok Kumar
First published:
January 20, 2021, 7:45 AM IST