ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ; ಹೋರಾಟಗಾರರನ್ನು ಭಯೋತ್ಪಾದಕರೆಂದ ನಟಿ ಕಂಗನಾ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಇತ್ತ ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ನಟಿ ಕಂಗನಾ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವವರು ಭಯೋತ್ಪಾದರು ಎಂದು ಜರಿದಿದ್ದಾರೆ.

MAshok Kumar | news18-kannada
Updated:September 21, 2020, 6:51 PM IST
ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ; ಹೋರಾಟಗಾರರನ್ನು ಭಯೋತ್ಪಾದಕರೆಂದ ನಟಿ ಕಂಗನಾ
ನಟಿ ಕಂಗನಾ.
  • Share this:
ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುವ ನಟಿ ಕಂಗನಾ ರಣಾವತ್​ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ "ಬಾಲಿವುಡ್​ನಲ್ಲಿ ಶೇ.90 ರಷ್ಟು ನಟ-ನಟಿಯರು ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ, ಮುಂಬೈ ಮಹಾನಗರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ನನಗೆ ಭಾಸವಾಗುತ್ತಿದೆ, ಮುಂಬೈ ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ, ಅವರು ನಟ ಸುಶಾಂತ್ ಸಿಂಗ್ ಪ್ರಕರಣದ ತನಿಖೆ ಸರಿಯಾಗಿ ಮಾಡುತ್ತಿಲ್ಲ. ನಟಿ ಊರ್ಮಿಳಾ ಮಾಂತೋಡ್ಕರ್​ ಸಾಫ್ಟ್​ ಪಾರ್ನ್​ ನಟಿ" ಹೀಗೆ ಸಾಲು ಸಾಲು ವಿವಾದಾತ್ಮಕ ಹೇಳಿಕೆ ನೀಡುತ್ತಾ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಏಕ ವಚನದಲ್ಲಿ ದಾಳಿ ನಡೆಸುವ ಮೂಲಕ ಯಾವಾಗಲೂ ಸುದ್ದಿ ಕೇಂದ್ರದಲ್ಲೇ ಇರುವ ನಟಿ ಕಂಗನಾ ರಣಾವತ್​ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ರೈತರ ವಿಚಾರಕ್ಕೆ ಏಕೆಂದರೆ, ಇದೀಗ ರೈತರನ್ನೇ ಅವರು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಹೌದು  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದಾದ್ಯಂತ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಇತ್ತ ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ನಟಿ ಕಂಗನಾ, "ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವವರು ಭಯೋತ್ಪಾದರು" ಎಂದು ಜರಿದಿದ್ದಾರೆ.ಕೇಂದ್ರ ಕೃಷಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ರೈತ ಹೋರಾಟದ ವಿರುದ್ಧ ಸರಣಿ ಟ್ವೀಟ್​ ಮೂಲಕ ಟೀಕಾಸ್ತ್ರ ಪ್ರಯೋಗಿಸಿರುವ ನಟಿ ಕಂಗನಾ,  “ಪ್ರಧಾನಿ ಮೋದಿಜೀ, ನಿದ್ರಿಸುತ್ತಿರುವವರನ್ನು ಎಚ್ಚರಗೊಳಿಸಬಹುದು. ತಪ್ಪು ತಿಳವಳಿಕೆ ಇದ್ದರೇ ಅದನ್ನು ಪರಿಹರಿಸಬಹುದು. ಆದರೆ ನಿದ್ದೆ ಮಾಡುವಂತೆ ನಟಿಸುವವರ, ಅರ್ಥ ಮಾಡಿಕೊಳ್ಳದಂತೆ ನಟಿಸುವವರರಿಗೆ ನೀವು ತಿಳಿಸಲು ಪ್ರಯತ್ನಸಿದರೆ ಏನು ಪ್ರಯೋಜನ..? ಇವರು ಅದೇ ಭಯೋತ್ಪಾದಕರು. ಸಿಎಎಯಿಂದ ಯಾರು ಪೌರತ್ವ ಕಳೆದುಕೊಳ್ಳದಿದ್ದರೂ ರಕ್ತದ ಕೋಡಿ ಹರಿಸಿದವರೇ ಇಂದು ಈ ಕೃಷಿ ಮಸೂದೆಯ ವಿರುದ್ಧವೂ ಹೋರಾಡುತ್ತಿದ್ದಾರೆ” ಎಂದಿದ್ದಾರೆ.ಆದರೆ, ಇದೇ ಕೃಷಿ ಮಸೂದೆ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಮಿತ್ರ ಪಕ್ಷವಾದ ಅಕಾಲಿ ದಳದ ಸಚಿವೆ ಹರ್ಸಿಮ್ರತ್​ ಕೌರ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅತ್ತ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಬಿಲ್ ಪಾಸ್ ಆಗುತ್ತಲೇ ಇತ್ತ ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆಯ ಕಾವು ದುಪ್ಪಟ್ಟಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರತಿಭಟನೆ ತಾರಕಕ್ಕೇರಿದೆ. ಪ್ರತಿಭಟನೆ ವೇಳೆ ಓರ್ವ ರೈತ ಸಹ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ : ವಿವಾದಾತ್ಮಕ ಕೃಷಿ ಮಸೂದೆ; ರೈತರ ಆಕ್ರೋಶ ಪ್ರತಿಭಟನೆ ಬೆನ್ನಿಗೆ ಅನೇಕ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ

ಇನ್ನೂ ಹಲವಾರು ಕೃಷಿ ಮತ್ತು ಅರ್ಥಶಾಸ್ತ್ರಜ್ಞರು ಈ ಮಸೂದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, "ಈ ಮಸೂದೆಗಳು ರೈತವಿರೋಧಿ ಕಾಯ್ದೆಗಳಾಗಿದ್ದು ಕಾರ್ಪೋರೇಟ್ ಕಂಪನಿಗಳ ಪರವಾಗಿವೆ. ಈ ಮಸೂದೆಗಳು ಆಹಾರ ಭದ್ರತೆಯನ್ನು ಹಾಳುಮಾಡುತ್ತವೆ. ಈ ಹಿಂದೆ ಇದ್ದ ಕನಿಷ್ಟ ಬೆಂಬಲ ಬೆಲೆಯನ್ನು ನಾಶಗೊಳಿಸಿ ದೊಡ್ಡ ವ್ಯಾಪಾರಿಗಳಿಗೆ ಲಾಭವನ್ನು ನೀಡುತ್ತವೆಯೇ ಹೊರತು ರೈತರಿಗಲ್ಲ. ಇನ್ನೂ ಚಿಲ್ಲರೆ ವ್ಯಾಪಾರಿಗಳು ಬೀದಿಪಾಲಾಗಲಿದ್ದಾರೆ. ಇದರಿಂದ ರೈತರ ಶೋಷಣೆಯಾಗಲಿದೆ, ಜೊತೆಗೆ ಬೆಲೆ ನಿಗದಿಗಾಗಿ ಯಾವುದೇ ಕಾರ್ಯವಿಧಾನವೂ ಈ ಮಸೂದೆಯಲ್ಲಿ ಇಲ್ಲ" ಎಂದು ಆಕ್ಷೇಪಿಸಿದ್ದಾರೆ.

ಈ ನಡುವೆ ಬಾಲಿವುಡ್​ ನಟಿ ಕಂಗನಾ ರಣಾವತ್​ ರೈತ ಹೋರಾಟಗಾರರನ್ನು ಭಯೋತ್ಪಾದಕರು ಎಂದು ಕರೆದಿರುವುದು ಇದೀಗ ವ್ಯಾಪಕ ಖಂಡನೆಗೆ ಒಳಗಾಗಿದೆ. ರೈತರ ಆಕ್ರೋಶವನ್ನು ಹೆಚ್ಚಿಸಿದೆ. ಹೀಗಾಗಿ ನಟಿಯ ವರ್ತನೆಯ ವಿರುದ್ಧ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Published by: MAshok Kumar
First published: September 21, 2020, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading