IPL

  • associate partner

IPL 2020 MI vs CSK: ರಾಯುಡು ಭರ್ಜರಿ ಆಟ, ಧೋನಿ ಪಡೆ ಶುಭಾರಂಭ: ಮುಂಬೈ ವಿರುದ್ಧ ಚೆನ್ನೈಗೆ 5 ವಿಕೆಟ್​ಗಳ ಜಯ

Dream11 IPL 2020: 5 ವಿಕೆಟ್​ಗಳ ಭರ್ಜರಿ ಗೆಲುವಿನಿಂದಿಗೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಐಪಿಎಲ್ 2020 ರಲ್ಲಿ ಉತ್ತಮ ಸ್ಟಾರ್ಟ್​ ಪಡೆದುಕೊಂಡಿದೆ. ಈ ಮೂಲಕ 2 ಅಂಕವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

news18-kannada
Updated:September 19, 2020, 11:22 PM IST
IPL 2020 MI vs CSK: ರಾಯುಡು ಭರ್ಜರಿ ಆಟ, ಧೋನಿ ಪಡೆ ಶುಭಾರಂಭ: ಮುಂಬೈ ವಿರುದ್ಧ ಚೆನ್ನೈಗೆ 5 ವಿಕೆಟ್​ಗಳ ಜಯ
ಅಂಬಟಿ ರಾಯುಡು.
  • Share this:
ಅಬು ಧಾಬಿ (ಸೆ. 19): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಭರ್ಜರಿ ಗೆಲುವು ಸಾಧಿಸಿದೆ. ಅಂಬಟಿ ರಾಯುಡು ಅವರ ಮನಮೋಹಕ ಅರ್ಧಶತಕ ಹಾಗೂ ಫಾಫ್ ಡುಪ್ಲೆಸ್ ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಧೋನಿ ಪಡೆ 5 ವಿಕೆಟ್​ಗಳ ಜಯ ಸಾಧಿಸಿ ಐಪಿಎಲ್ 2020ರಲ್ಲಿ ಶುಭಾರಂಭ ಮಾಡಿದೆ.

ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದುಕೊಂಡಿತು. ನಾಯಕ ರೋಹಿತ್ ಶರ್ಮಾ ಮೊದಲ ಓವರ್​ನ ಮೊದಲ ಎಸೆತದಲ್ಲೇ ತಮ್ಮ ಶೈಲಿಯಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದರು. ಡಿಕಾಕ್ ಕೂಡ ಆಕ್ರಮಣ ಆಟ ಪ್ರದರ್ಶಿಸಿದರು. 4 ಓವರ್​ನಲ್ಲೇ ತಂಡದ ಮೊತ್ತ 40ರ ಗಡಿ ದಾಟಿತು.

ಆದರೆ, ಈ ಸಂದರ್ಭ ಬೌಲಿಂಗ್ ಮಾಡಲು ಬಂದ ಪಿಯೂಷ್ ಚಾವ್ಲಾ ರೋಹಿತ್ ಶರ್ಮಾ(12) ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಇದರ ಮುಂದಿನ ಓವರ್​ನಲ್ಲೇ 20 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಡಿಕಾಕ್ ಕೂಡ ಔಟ್ ಆದರು.

ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಸೌರಭ್ ತಿವಾರಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಈ ಜೋಡಿ 44 ರನ್​ಗಳ ಜೊತೆಯಾಟ ಆಡಿತು. ಆದರೆ, ಸೂರ್ಯಕುಮಾರ್ ಯಾದವ್ 17 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ತಿವಾರಿ ಕೂಡ (31 ಎಸೆತ 42 ರನ್) ಕೂಡ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಬಂದ ಬೆನ್ನಲ್ಲೇ ಎರಡು ಸಿಕ್ಸರ್ ಸಿಡಿಸಿ ಔಟ್ ಆದರೆ. ಕೃನಾಲ್ ಪಾಂಡ್ಯ ಆಟ ಕೇವಲ 3 ರನ್​ಗೆ ಅಂತ್ಯವಾಯಿತು.

IPL 2020 Live Score, MI vs CSK

ಪಂದ್ಯವನ್ನು ಫಿನಿಶ್ ಮಾಡುವ ಜವಾಬ್ದಾರಿ ಹೊತ್ತ ಕೀರೊನ್ ಪೊಲಾರ್ಡ್​ ಕೂಡ 18 ರನ್​ಗೆ ನಿರ್ಗಮಿಸಿ ಶಾಕ್ ನೀಡಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಅಷ್ಟೊಂದು ಪರಾಕ್ರಮ ಮೆರೆಯಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು. ಚೆನ್ನೈ ಪರ ಲುಂಗಿ ಎನ್​ಗಿಡಿ 3 ಹಾಗೂ ರವೀಂದ್ರ ಜಡೇಜಾ 2 ವಿಕೆಟ್ ಕಿತ್ತು ಮಿಂಚಿದರು.

163 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಮೊದಲ ಎರಡು ಓವರ್​​ನಲ್ಲೇ ಶೇನ್ ವಾಟ್ಸನ್(4) ಹಾಗೂ ಮುರಳಿ ವಿಜಯ್(1) ಪ್ರಮುಖ ವಿಕೆಟ್ ಕಳೆದುಕೊಂಡಿತು. ಆದರೆ, ಈ ಸಂಭ್ರಮ ಮುಂಬೈ ಇಂಡಿಯನ್ಸ್​ಗೆ ತುಂಬಾಹೊತ್ತು ಇರಲಿಲ್ಲ. ಎರಡು ವಿಕೆಟ್ ಕಳೆದಕೂಡಲೆ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಅಂಬಟಿ ರಾಯುಡು ಭರ್ಜರಿ ಆಟ ಪ್ರದರ್ಶಿಸಿದರು.ಮುಂಬೈ ಬೌಲರ್​ಗಳನ್ನು ಕಾಡಿದ ಈ ಜೋಡಿ ಬೌಂಡರಿ- ಸಿಕ್ಸರ್​ಗಳ ಮಳೆ ಸುರಿಸಿತು. ಅದರಲ್ಲೂ ಸ್ಫೋಟಕ ಆಟವಾಡಿದ ರಾಯುಡು ತಂಡಕ್ಕೆ ಗೆಲುವು ಹತ್ತಿರ ಮಾಡಿದರು. ಅಲ್ಲದೆ ಐಪಿಎಲ್​ನಲ್ಲಿ 19ನೇ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಮನಬಂದಂತೆ ಆಡಿದ ರಾಯುಡು ಆಟಕ್ಕೆ ಬ್ರೇಕ್ ಹಾಕಿದ್ದು ರಾಹುಲ್ ಚಹಾರ್. 48 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸ್​ ಸಿಡಿಸಿ ರಾಯುಡು 71 ರನ್​​ಗೆ ಔಟ್ ಆದರು.

ಬಂದ ಬೆನ್ನಲ್ಲೆ ರವೀಂದ್ರ ಜಡೇಜಾ(10) ಔಟ್ ಆದರು. ಕೊನೆಯಲ್ಲಿ ಸ್ಯಾಮ್ ಕುರ್ರನ್ (4 ಎಸೆತ, 12 ರನ್) ಸ್ಫೋಟಕ ಆಟವಾಡಿ ಔಟ್ ಆದರೆ, ಡುಪ್ಲೆಸಿಸ್ ವಿನ್ನಿಂಗ್ ಶಾಟ್ ಹೊಡೆದರು. ಡುಪ್ಲೆಸಿಸ್ 44 ಎಸೆತಗಳಲ್ಲಿ ಅಜೇಯ 58 ರನ್ ಕಲೆಹಾಕಿದರು.

ಅಂತಿಮವಾಗಿ ಚೆನ್ನೈ 19.2 ಓವರ್​​ನಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕುವ ಮೂಲಕ ಭರ್ಜರಿ ಗೆಲುವು ಸಾಧಿಸಿತು.

5 ವಿಕೆಟ್​ಗಳ ಭರ್ಜರಿ ಗೆಲುವಿನಿಂದಿಗೆ ಚೆನ್ನೈ ತಂಡ ಐಪಿಎಲ್ 2020 ರಲ್ಲಿ ಉತ್ತಮ ಸ್ಟಾರ್ಟ್​ ಪಡೆದುಕೊಂಡಿದೆ. ಈ ಮೂಲಕ 2 ಅಂಕವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
Published by: Vinay Bhat
First published: September 19, 2020, 11:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading