IPL

  • associate partner

IPL 2020 DC vs KXIP: ಮಯಾಂಕ್ ಹೋರಾಟ ವ್ಯರ್ಥ: ಸೂಪರ್ ಓವರ್​ನಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್

Dream11 IPL 2020 Live Update: ಐಪಿಎಲ್​ನ 13ನೇ ಸೀಸನ್​ನಲ್ಲಿನ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳು ಸಮಬಲದಿಂದ ಕೂಡಿದ್ದು, ಜಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ.

news18-kannada
Updated:September 20, 2020, 11:58 PM IST
IPL 2020 DC vs KXIP: ಮಯಾಂಕ್ ಹೋರಾಟ ವ್ಯರ್ಥ: ಸೂಪರ್ ಓವರ್​ನಲ್ಲಿ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್
dc
  • Share this:
ದುಬೈನಲ್ಲಿ ನಡೆದ ಐಪಿಎಲ್​ನ 2ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್​ ಸೂಪರ್ ಓವರ್​ನಲ್ಲಿ ಗೆದ್ದು ಬೀಗಿತು. ಸೂಪರ್ ಓವರ್​ನಲ್ಲಿ ಪಂಜಾಬ್ ನೀಡಿದ 3 ರನ್​ಗಳ ಗುರಿಯನ್ನು 2 ಎಸೆತಗಳಲ್ಲಿ ಮುಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಜಯ ಸಾಧಿಸಿತು. ಇದಕ್ಕೂ ಮುನ್ನ  ಮಾರ್ಕಸ್ ಸ್ಟೊಯಿನಿಸ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್​ಗೆ 158 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿರುವ ಕಿಂಗ್ಸ್ ಇಲೆವೆನ್​ಗೆ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಆದರೆ ಐದನೇ ಓವರ್​ನಲ್ಲಿ 21 ರನ್​ಗಳಿಸಿದ ರಾಹುಲ್ ಮೋಹಿತ್ ಶರ್ಮಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಾಯಕನ ನಿರ್ಗಮನದ ಬಳಿಕ ಕ್ರೀಸ್​ಗಿಳಿದ ಕರುಣ್ ನಾಯರ್ (1), ಅಶ್ವಿನ್ ಎಸೆತದಲ್ಲಿ ಪೃಥ್ವಿ ಶಾಗೆ ಕ್ಯಾಚ್​ ನೀಡಿ ಹೊರ ನಡೆದರು. ಇದೇ ಓವರ್​ನ 5ನೇ ಎಸೆತದಲ್ಲಿ ನಿಕೊಲಸ್ ಪೂರನ್​ (0) ರನ್ನು ಕ್ಲೀನ್ ಬೌಲ್ಡ್ ಮಾಡಿ ಮತ್ತೊಂದು ಯಶಸ್ಸು ತಂದುಕೊಟ್ಟರು.

7ನೇ ಓವರ್​ನಲ್ಲಿ ಸ್ಪೋಟಕ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ ರಬಾಡ ಎಸೆತದಲ್ಲಿ ಸುಲಭ ಕ್ಯಾ್ಚ್ ನೀಡಿ ನಿರ್ಗಮಿಸಿದರು. ಇತ್ತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಡೆಲ್ಲಿ ಬೌಲರುಗಳು ಪಂಜಾಬ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರಿದರು. ಪರಿಣಾಮ 10ನೇ ಓವರ್​ನಲ್ಲಿ ಸರ್ಫರಾಜ್ ಖಾನ್ (12) ದೊಡ್ಡ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದರು

ಈ ಹಂತದಲ್ಲಿ ಜೊತೆಗೂಡಿದ ಮಯಾಂಕ್ ಹಾಗೂ ಕೃಷ್ಣಪ್ಪ ಗೌತಮ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಒಂದು ಹಂತದವರೆಗೆ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಈ ಜೋಡಿ ಬಳಿಕ ಬಿರುಸಿನ ಆಟಕ್ಕೆ ಕೈ ಹಾಕಿದರು. ಪರಿಣಾಮ 33 ಎಸೆತಗಳಲ್ಲಿ 46 ರನ್​ಗಳ ಜೊತೆಯಾಟ ಮೂಡಿಬಂತು. ಆದರೆ 16ನೇ ಓವರ್​ನಲ್ಲಿ ರಬಾಡ ಎಸೆತವನ್ನು ಗುರುತಿಸುವಲ್ಲಿ ಎಡವಿದ ಗೌತಮ್ (20) ಕೀಪರ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ

ಒಂದೆಡೆ ವಿಕೆಟ್ ಬೀಳುತ್ತಿದ್ರೆ ಮತ್ತೊಂದಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಮಯಾಂಕ್ ಅಗರ್​ವಾಲ್ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರಲ್ಲೂ 18ನೇ ಓವರ್​ನಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಏಕಾಂಗಿ ಹೋರಾಟ ನಡೆಸಿದ ಮಯಾಂಕ್​ 60 ಎಸೆತಗಳಲ್ಲಿ 89 ರನ್​ ಬಾರಿಸಿ ಗೆಲ್ಲಲು 1 ರನ್ ಇರುವಾಗ ಹೊರ ನಡೆದರು. ಇದುವೇ ಪಂಜಾಬ್ ಸೋಲಿಗೆ ಕಾರಣವಾಯಿತು. ಏಕೆಂದರೆ ಕೊನೆಯ ಎಸೆತದಲ್ಲಿ 1 ರನ್ ಅವಶ್ಯಕತೆಯಿದ್ದಾಗ ಜೋರ್ಡನ್ ಕ್ಯಾಚ್ ನೀಡಿ ಪಂದ್ಯವನ್ನು ಟೈಯನ್ನಾಗಿಸಿದರು. ಸೂಪರ್​ ಓವರ್​ ಮೂಲಕ ಪಂದ್ಯವನ್ನು ಗೆಲ್ಲುವ ಅವಕಾಶ ಪಡೆದರೂ ಪಂಜಾಬ್ ಕೇವಲ 2 ರನ್​ಗಳಿಸಿ 2 ವಿಕೆಟ್ ಒಪ್ಪಿಸಿತು. ಪರಿಣಾಮ ಕೇವಲ 3 ರನ್​ ಗುರಿ ಪಡೆದ ಡೆಲ್ಲಿ ಎರಡು ಎಸೆತಗಳಲ್ಲಿ 3 ರನ್ ಕಲೆಹಾಕುವ ಮೂಲಕ ಮೊದಲ ಜಯ ಸಾಧಿಸಿತು.


ಇದಕ್ಕೂ ಮುನ್ನ ಟಾಸ್ ಗೆದ್ದ ಕಿಂಗ್ಸ್​ ಇಲೆವೆನ್ ಪಂಜಾಬ್ ಬೌಲಿಂಗ್ ಆಯ್ದುಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಶಿಖರ್ ಧವನ್ (0) ಎರಡನೇ ಓವರ್​ನಲ್ಲಿ ರನೌಟ್ ಆಗಿ ಮರಳಿದ್ದಾರೆ. ಇದರ ಬೆನ್ನಲ್ಲೇ ಶಮಿ ಅವರ 4ನೇ ಓವರ್​ನಲ್ಲಿ ಪೃಥ್ವಿ ಶಾ (5) ಜೋರ್ಡನ್​ಗೆ ಕ್ಯಾಚ್ ನೀಡಿ ಮರಳಿದರು.

ಆರಂಭಿಕರ ಪೆವಿಲಿಯನ್ ಪರೇಡ್ ಬೆನ್ನಲ್ಲೇ 7 ರನ್ ಗಳಿಸಿ ಹೆಟ್ಮೆಯರ್ ಸಹ ಶಮಿಗೆ ವಿಕೆಟ್ ಒಪ್ಪಿಸಿದರು. 13  ರನ್​ಗೆ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಆಸೆಯಾದರು. ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಉಭಯರು ನಿಧಾನಕ್ಕೆ ರನ್​ ಕದಿಯುತ್ತಾ ತಂಡದ ಸ್ಕೋರ್ ಹೆಚ್ಚಿಸಿದರು. 50 ಎಸೆತಗಳಲ್ಲಿ 50 ರನ್​ಗಳ ಜೊತೆಯಾಟವಾಡಿದ ಅಯ್ಯರ್ ಬಿರುಸಿನ ಆಟದತ್ತ ಮುಖ ಮಾಡಿದರು. ಆದರೆ ಮತ್ತೊಂದು ಬದಿಯಲ್ಲಿದ್ದ ಪಂತ್ (31) ರನ್​ಗಳಿಸಿ ಕ್ಲೀನ್ ಬೌಲ್ಡ್​ ಆದರು.

ಪಂತ್ ವಿಕೆಟ್ ಪಡೆಯುವುದರೊಂದಿಗೆ ರವಿ ಬಿಷ್ಣೋಯ್ ಐಪಿಎಲ್​ನಲ್ಲಿ ವಿಕೆಟ್ ಖಾತೆ ತೆರೆದರು. ಇದರ ಬೆನ್ನಲ್ಲೇ 15ನೇ ಓವರ್​​ನಲ್ಲಿ ಬೌಲಿಂಗ್​ಗೆ ಮರಳಿದ ಮೊಹಮ್ಮದ್ ಶಮಿ ಮೊದಲ ಎಸೆತದಲ್ಲಿ ಶ್ರೇಯಸ್ ಅಯ್ಯರ್ (39) ವಿಕೆಟ್ ಪಡೆಯುವುದರೊಂದಿಗೆ ಪಂಜಾಬ್ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು.

17ನೇ ಓವರ್​ನಲ್ಲಿ ಶೆಲ್ಡನ್ ಕಾರ್ಟೆಲ್ ಎಸೆತದಲ್ಲಿ ಅಕ್ಷರ್ ಪಟೇಲ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 19ನೇ ಓವರ್​ನ ಕೊನೆಯ ಎಸೆತದಲ್ಲಿ ಅಶ್ವಿನ್ ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಸೆಲ್ಯೂಟ್ ಹೊಡೆದು ಶೆಲ್ಡನ್ ಸಂಭ್ರಮಿಸಿದರು.  ಕೊನೆಯ 3 ಓವರ್​ಗಳಲ್ಲಿ ಅಬ್ಬರಿಸಿದ ಸ್ಟೊಯಿನಿಸ್ 53 ರನ್​ ಬಾರಿಸಿ ತಂಡದ ಮೊತ್ತವನ್ನು 157 ರನ್​ಗೆ ತಂದು ನಿಲ್ಲಿಸಿದರು.

ಪಂದ್ಯ ಪುರುಷೋತ್ತಮ: ಮಾರ್ಕಸ್ ಸ್ಟೊಯಿನಿಸ್







ಉಭಯ ತಂಡಗಳು ಇಂತಿವೆ:



ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ಸಿ), ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ನಿಕೋಲಸ್ ಪೂರನ್ , ಕೃಷ್ಣಪ್ಪ ಗೌತಮ್, ಕ್ರಿಸ್ ಜೋರ್ಡಾನ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ

ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ , ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಅನ್ರಿಕ್ ನಾರ್ಟ್ಜೆ, ಮೋಹಿತ್ ಶರ್ಮಾ


Published by: zahir
First published: September 20, 2020, 7:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading