HOME » NEWS » Entertainment » VIVEK DEATH RIP VIVEK RAJINIKANTH PUNEETH RAJKUMAR DULQUER SALMAN AND OTHERS REMEMBERS TAMIL ACTOR VIVEK SCT

Actor Vivek Death: ತಮಿಳು ಹಾಸ್ಯ ನಟ ವಿವೇಕ್ ನಿಧನ; ಪುನೀತ್ ರಾಜ್​ಕುಮಾರ್, ರಜನಿಕಾಂತ್ ಸೇರಿ ಸೆಲೆಬ್ರಿಟಿಗಳ ಸಂತಾಪ

RIP Vivek: ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ನಿಧನಕ್ಕೆ ಪುನೀತ್ ರಾಜ್​ಕುಮಾರ್, ರಮೇಶ್ ಅರವಿಂದ್, ರಜನಿಕಾಂತ್, ಪ್ರಕಾಶ್ ರೈ, ಅರ್ಜುನ್ ಸರ್ಜಾ, ಮಾಧವನ್, ತಮನ್ನಾ, ಪೃಥ್ವಿರಾಜ್, ದುಲ್ಖರ್ ಸಲ್ಮಾನ್, ಸುಹಾಸಿನಿ, ಜೆನಿಲಿಯಾ ಡಿಸೋಜ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

Sushma Chakre | news18-kannada
Updated:April 17, 2021, 12:09 PM IST
Actor Vivek Death: ತಮಿಳು ಹಾಸ್ಯ ನಟ ವಿವೇಕ್ ನಿಧನ; ಪುನೀತ್ ರಾಜ್​ಕುಮಾರ್, ರಜನಿಕಾಂತ್ ಸೇರಿ ಸೆಲೆಬ್ರಿಟಿಗಳ ಸಂತಾಪ
ಹಾಸ್ಯ ನಟ ವಿವೇಕ್
  • Share this:
ಚೆನ್ನೈ (ಏ. 17): ತೀವ್ರ ಹೃದಯಾಘಾತದಿಂದ ನಿನ್ನೆ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. 59 ವರ್ಷದ ವಿವೇಕ್ ಕೇವಲ ನಟನಾಗಿ ಮಾತ್ರವಲ್ಲದೆ ಅವರ ಸರಳ ವ್ಯಕ್ತಿತ್ವದಿಂದಲೂ ಚಿತ್ರರಂಗದಲ್ಲಿ ಭಾರೀ ಅಭಿಮಾನಿಗಳನ್ನು ಸಂಪಾದಿಸಿದ್ದರು. ವಿವೇಕ್ ಅವರ ನಿಧನಕ್ಕೆ ತಮಿಳು, ಕನ್ನಡ, ಮಲೆಯಾಳಂ, ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಪುನೀತ್ ರಾಜ್​ಕುಮಾರ್, ರಮೇಶ್ ಅರವಿಂದ್, ರಜನಿಕಾಂತ್, ಪ್ರಕಾಶ್ ರೈ, ಅರ್ಜುನ್ ಸರ್ಜಾ, ಮಾಧವನ್, ತಮನ್ನಾ ಭಾಟಿಯಾ, ಪೃಥ್ವಿರಾಜ್, ಸಂಜನಾ ಗಲ್ರಾನಿ, ದುಲ್ಖರ್ ಸಲ್ಮಾನ್, ಸುಹಾಸಿನಿ, ಜೆನಿಲಿಯಾ ಡಿಸೋಜ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ವಿವೇಕ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.




ವಿವೇಕ್ ನಿಧನದ ಕುರಿತು ಟ್ವೀಟ್ ಮಾಡಿರುವ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ವಿವೇಕ್ ಅವರ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರು ಇಡೀ ಚಿತ್ರರಂಗದ ಅತ್ಯಂತ ಪ್ರೀತಿಯ ಮತ್ತು ಸರಳ ನಟರಾಗಿದ್ದರು. ನಮ್ಮ ಕಾಲದ ಅತ್ಯುತ್ತಮ ಹಾಸ್ಯನಟರಲ್ಲಿ ವಿವೇಕ್ ಕೂಡ ಒಬ್ಬರಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.


ಕನ್ನಡ ಮಾತ್ರವಲ್ಲದೆ ಅನೇಕ ತಮಿಳು ಸಿನಿಮಾಗಳಲ್ಲಿಯೂ ನಟಿಸಿರುವ ರಮೇಶ್ ಅರವಿಂದ್ ಕೂಡ ವಿವೇಕ್ ಜೊತೆಗಿನ ತಮ್ಮ ಫೋಟೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಯ ಪ್ರವೃತ್ತಿ ಮಾತ್ರವಲ್ಲದೆ ಅತ್ಯಂತ ಪ್ರತಿಭಾನ್ವಿತ, ಬುದ್ಧಿವಂತ ನಟರಾಗಿದ್ದ ವಿವೇಕ್ ರೀತಿಯ ವ್ಯಕ್ತಿಗಳು ಸಿಗುವುದು ಅಪರೂಪ. ಮನದಿಲ್ ಉರುಡಿ ವೆಂಡುಂ ಸಿನಿಮಾದಲ್ಲಿ ನಾನು ಮತ್ತು ವಿವೇಕ್ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿದ್ದೆವು. ಅಲ್ಲಿಂದ ನಮ್ಮ ಗೆಳೆತನ ಶುರುವಾಗಿತ್ತು ಎಂದು ರಮೇಶ್ ತಮ್ಮ ಗೆಳೆಯನ ಬಗ್ಗೆ ನೆನಪಿಸಿಕೊಂಡಿದ್ದಾರೆ.



ತಮಿಳು ನಟ ಮಾಧವನ್ ಕೂಡ ವಿವೇಕ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಈ ಸುದ್ದಿಯನ್ನು ಕೇಳಿ ಬಹಳ ಆಘಾತವಾಯಿತು. ನೀವು ಇಷ್ಟ ಬೇಗ ನಮ್ಮಿಂದ ದೂರ ಆಗಬಾರದಿತ್ತು. ಪ್ರತಿಯೊಬ್ಬರನ್ನೂ ಕಾಳಜಿಯಿಂದ, ಪ್ರೀತಿಯಿಂದ ಕಾಣುತ್ತಿದ್ದ ಓರ್ವ ಅತ್ಯುತ್ತಮ ವ್ಯಕ್ತಿಯನ್ನು ಈ ಜಗತ್ತು ಕಳೆದುಕೊಂಡಿದೆ. ನಾನು ನಿಮ್ಮ ನಗುವನ್ನು, ಕಾಳಜಿಯನ್ನು, ಪ್ರೀತಿಯನ್ನು ಸದಾ ಮಿಸ್ ಮಾಡಿಕೊಳ್ಳುತ್ತೇನೆ. ನಮ್ಮನ್ನು ಅಗಲಿ ನೀವು ತೆರಳಿರುವ ಸ್ವರ್ಗ ನಿಜಕ್ಕೂ ಅದೃಷ್ಟಶಾಲಿ! ಎಂದು ಟ್ವೀಟ್ ಮಾಡಿದ್ದಾರೆ.



ನಾನು ತಮಿಳು ಚಿತ್ರರಂಗದಲ್ಲಿ ನನ್ನ ಮೊದಲ ಸಿನಿಮಾ ಮಾಡಿದಾಗ ನಾನು ಕಂಡ ಅತ್ಯಂತ ಸರಳ ಮತ್ತು ಆಪ್ತ ವ್ಯಕ್ತಿಯೆಂದರೆ ಅದು ನೀವೇ. ಹೊಸಬರಿರಲಿ, ಹಳಬರಿರಲಿ ನೀವು ಎಲ್ಲರನ್ನೂ ಒಂದೇ ರೀತಿ ಗೌರವದಿಂದ ಕಾಣುತ್ತಿದ್ದಿರಿ. ನನ್ನಂತಹ ಅನೇಕ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದಕ್ಕೆ ಥ್ಯಾಂಕ್ಯೂ. ನಿಮ್ಮ ಜೊತೆಗಿನ ಒಡನಾಟ ಸದಾ ಹಸಿರಾಗಿರುತ್ತದೆ ಎಂದು ನಟಿ ಜೆನಿಲಿಯಾ ನೆನಪಿಸಿಕೊಂಡಿದ್ದಾರೆ.







59 ವರ್ಷದ ವಿವೇಕ್​ಗೆ ನಿನ್ನೆ ಹೃದಯನಾಳದಲ್ಲಿ ತೊಂದರೆ ಉಂಟಾಗಿದ್ದರಿಂದ ಐಸಿಯುಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 4.45ಕ್ಕೆ ವಿವೇಕ್ ಸಾವನ್ನಪ್ಪಿದ್ದಾರೆ. ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತಮಿಳು ನಟ ವಿವೇಕ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಲಾಗಿತ್ತು.




ವಿವೇಕ್ ಅವರ ಜೊತೆ ಸಿನಿಮಾಗಳಲ್ಲಿ ನಟಿಸಿದ್ದ ಪ್ರಕಾಶ್ ರೈ ಕೂಡ ಸಂತಾಪ ಸೂಚಿಸಿದ್ದು, ನನ್ನ ಪ್ರೀತಿಯ ಗೆಳೆಯ ನೀನಿಷ್ಟು ಬೇಗ ನಮ್ಮಿಂದ ದೂರವಾಗುತ್ತಿ ಎಂದುಕೊಂಡಿರಲಿಲ್ಲ. ಯೋಚನೆಗಳನ್ನು ಮತ್ತು ಗಿಡದ ಬೀಜಗಳನ್ನು ಬಿತ್ತಿ ಹೋಗಿದ್ದಕ್ಕೆ ಥ್ಯಾಂಕ್ಯೂ. ನಿನ್ನ ಪರಿಸರ ಕಾಳಜಿ ಎಂದಿಗೂ ಮರೆಯಲಾಗದು. ಇಷ್ಟು ವರ್ಷಗಳ ಕಾಲ ನಮ್ಮೆಲ್ಲರನ್ನೂ ನಿನ್ನ ಅದ್ಭುತ ಅಭಿನಯದ ಮೂಲಕ ರಂಜಿಸಿದ್ದಕ್ಕೆ ಥ್ಯಾಂಕ್ಯೂ.. ಸದಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.





ತಮಿಳು ಚಿತ್ರರಂಗದಲ್ಲಿ 'ಚಿನ್ನ ಕಲೈವಾನರ್' ಎಂದೇ ಖ್ಯಾತಿ ಗಳಿಸಿರುವ ವಿವೇಕ್ ಬಹುತೇಕ ಎಲ್ಲ ಖ್ಯಾತ ನಟರ ಜೊತೆ ನಟಿಸಿದ್ದಾರೆ. ತಮ್ಮ ನೇರ ನುಡಿಯಿಂದ ಪ್ರಸಿದ್ಧರಾಗಿದ್ದ ವಿವೇಕ್ ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಅವರ ಚಿಂತನೆಗಳು ಮತ್ತು ಜೀವನಶೈಲಿಯಿಂದ ನಟ ವಿವೇಕ್ ಬಹಳ ಪ್ರಭಾವಿತರಾಗಿದ್ದರು.

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರೇ ವಿವೇಕ್​ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. 1980ರಲ್ಲಿ ಬಾಲಚಂದರ್ ಅವರ ಸಿನಿಮಾ ಮೂಲಕ ವಿವೇಕ್ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ವಿವೇಕ್ ಅವರಿಗೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ವಿವೇಕ್ ಅವರು ಕೊನೆಯ ಬಾರಿ ಧರಳ ಪ್ರಭು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ನಟ ವಿವೇಕ್ ಹಾಸ್ಯ ನಟ, ನಿರೂಪಕ, ಹಿನ್ನೆಲೆ ಗಾಯಕನಾಗಿಯೂ ಗುರುತಿಸಿಕೊಂಡಿದ್ದರು. 2015ರಲ್ಲಿ ನಟ ವಿವೇಕ್ ಅವರ 13 ವರ್ಷದ ಮಗ ಬ್ರೈನ್ ಫೀವರ್​ನಿಂದ ಸಾವನ್ನಪ್ಪಿದ್ದರು. ಈ ಆಘಾತದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿದಿತ್ತು. ವಿವೇಕ್ ಅವರು ಹೆಂಡತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Published by: Sushma Chakre
First published: April 17, 2021, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories