ಚಾಮರಾಜನಗರ ವಿದ್ಯಾಗಣಪತಿ ಮಂಡಳಿಯ 58 ವರ್ಷ ಇತಿಹಾಸದಲ್ಲಿ ಮೊದಲ ಬಾರಿಗೆ ಪುಟ್ಟ ಗಣಪತಿ ಪ್ರತಿಷ್ಠಾಪನೆ

1962ರಿಂದಲೂ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದ ಚಾಮರಾಜನಗರ ವಿದ್ಯಾಗಣಪತಿ ಮಂಡಳಿ ಈ ಬಾರಿ ಕೊರೋನಾ ನಿಯಮಾವಳಿಗಳಿರುವ ಹಿನ್ನೆಲೆಯಲ್ಲಿ 2 ಅಡಿ ಎತ್ತರದ ಪುಟ್ಟ ಗಣೇಶನನ್ನು ಕೂರಿಸಿದೆ.

news18-kannada
Updated:August 22, 2020, 5:00 PM IST
ಚಾಮರಾಜನಗರ ವಿದ್ಯಾಗಣಪತಿ ಮಂಡಳಿಯ 58 ವರ್ಷ ಇತಿಹಾಸದಲ್ಲಿ ಮೊದಲ ಬಾರಿಗೆ ಪುಟ್ಟ ಗಣಪತಿ ಪ್ರತಿಷ್ಠಾಪನೆ
ಚಾಮರಾಜನಗರದ ವಿದ್ಯಾಗಣಪತಿ ಮಂಡಳಿ ಕೂರಿಸಿದ ಗಣೇಶ
  • Share this:
ಚಾಮರಾಜನಗರ (ಆಗಸ್ಟ್ 22): ಕೋವಿಡ್-19 ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಈ ಬಾರಿ ಅದ್ದೂರಿ ಗಣೇಶೋತ್ಸವಕ್ಕೆ ಅಡ್ಡಿ ಬಿದ್ದಿದೆ. ಕಳೆದ 58 ವರ್ಷಗಳಿಂದ ವಿಜೃಂಭಣೆಯಿಂದ ಗಣಪತಿ ಪ್ರತಿಷ್ಠಾಪಿಸಿ ಒಂದು ತಿಂಗಳ ಕಾಲ ಗಣೇಶೋತ್ಸವ ಆಚರಿಸುತ್ತಿದ್ದ ವಿದ್ಯಾಗಣಪತಿ ಮಂಡಳಿ ಈ ವರ್ಷ ಸರ್ಕಾರದ ಮಾರ್ಗಸೂಚಿ ಅನ್ವಯ ಸರಳಾತಿ ಸರಳ ಆಚರಣೆಗೆ ಮುಂದಾಗಿದೆ.

ನಗರದ ರಥದ ಬೀದಿಯಲ್ಲಿ ಕೇವಲ ಎರಡು ಅಡಿ ಎತ್ತರದ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗಿದ್ದು ಸೋಮವಾರವೇ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆ 11 ರಿಂದ 12.15 ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ವಿದ್ಯಾಗಣಪತಿ ಮಂಡಳಿಯ ಪದಾಧಿಕಾರಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರದೊಂದಿಗೆ ಪ್ರತಿಷ್ಠಾಪನಾ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಾಳೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ಲೋಕಕಣ್ಯಾರ್ಥವಾಗಿ ಇದೇ ಸ್ಥಳದಲ್ಲಿ ಶ್ರಿ ಗಣಪತಿ ಹೋಮ ನಡೆಸಿ ಸೋಮವಾರ ಸಂಜೆ ಇದೇ ಆವರಣದಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ವಿದ್ಯಾಗಣಪತಿ ಮಂಡಳಿಯ ಅಧ್ಯಕ್ಷ ಚಿಕ್ಕರಾಜು ತಿಳಿಸಿದ್ದಾರೆ.

ನಗರದಲ್ಲಿ ಪ್ರತಿವರ್ಷ ಆಯಾ ಸನ್ನಿವೇಶಕ್ಕೆ ತಕ್ಕಂತೆ ವೈವಿಧ್ಯಮಯವಾದ ಬೃಹತ್ ಗಾತ್ರದ ಗಣಪತಿ ಪ್ರತಿಷ್ಠಾಪನೆ ಮಾಡಿ ಒಂದು ತಿಂಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿತ್ತು. ಈ ಬಾರಿ ಏಳು ಅಡಿ ಉದ್ದದ ಬೃಹತ್ ಗಾತ್ರದ ಭೂರಕ್ಷಾ ಗಣಪತಿಯನ್ನು ಪ್ರತಿಷ್ಠಾಪಿಸಲು ಯೋಜಿಸಲಾಗಿತ್ತು. ಕೊರೋನಾವನ್ನು ಹೆಡಮುರಿ ಕಟ್ಟಿ ಕೈಯಲ್ಲಿ ಹಿಡಿದ ಭೂರಕ್ಷಾ ಗಣಪತಿ ಮೂರ್ತಿಯೂ ಸಿದ್ದಗೊಂಡಿತ್ತು. ಆದರೆ ಸರ್ಕಾರದ ಮಾರ್ಗಸೂಚಿಯನ್ವಯ ಇದನ್ನು ಕೈಬಿಡಲಾಗಿದೆ. ಹಾಗಾಗಿ ಪೂಜೆಯ ಭಾಗ್ಯವಿಲ್ಲದೆ ಈ ಭೂರಕ್ಷ ಗಣಪತಿಯು ತಯಾರಕರ ಶೆಡ್​ನಲ್ಲಿ ಒಂದು ರೀತಿಯಲ್ಲಿ ಅನಾಥ ಸ್ಥಿತಿಯಲ್ಲಿದೆ.

ಇದನ್ನೂ ಓದಿ: ಬೆಂಗಳೂರು ಗಲಭೆ: 40 ಆರೋಪಿಗಳು ವ್ಯವಸ್ಥಿತ ಉಗ್ರ ದಾಳಿ, ಕೋಮುಗಲಭೆಯಲ್ಲಿ ಭಾಗಿಯಾಗಿರುವ ಶಂಕೆ

ವಿದ್ಯಾಗಣಪತಿಯ ಇತಿಹಾಸ:

ಪ್ರತಿವರ್ಷ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಚಾಮರಾಜನಗರದ  ವಿದ್ಯಾ ಗಣಪತಿ ಮಂಡಳಿಗೆ 58 ವರ್ಷಗಳ ಇತಿಹಾಸವಿದೆ. 1962 ರಿಂದಲೂ ನಗರದ ರಥದ ಬೀದಿಯಲ್ಲಿ ಗಣಪತಿಯನ್ನು ಪ್ರತಿ ವರ್ಷ ಪ್ರತಿಷ್ಠಾಪಿಸಿ, ಅದ್ಧೂರಿಯಾಗಿ ಗಣೇಶೋತ್ಸವವನ್ನು ನೆರವೇರಿಸಿಕೊಂಡು ಬರುತ್ತಿದೆ.70ರ ದಶಕದಲ್ಲಿ ಮೆರವಣಿಗೆ ಸಾಗುವ ಮಾರ್ಗದ ಬಗ್ಗೆ ವಿವಾದ ಉಂಟಾಗಿ, ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಅದು ಸುಪ್ರೀಂಕೋರ್ಟ್‌ ತನಕ ತಲುಪಿ, ಕೊನೆಗೆ ತೀರ್ಪು ಮಂಡಳಿ ಪರವಾಗಿಯೇ ಬಂತು. ಬಳಿಕ ನಡೆದ ವಿಸರ್ಜನಾ ಮಹೋತ್ಸವದ ವೇಳೆ ಕೋಮುಘರ್ಷಣೆ ಕೂಡ ಸಂಭವಿಸಿತ್ತು. ಅಲ್ಲದೇ 90ರ ದಶಕದಲ್ಲೂ ಒಂದೆರಡು ಬಾರಿ ಇಂಥ ಘರ್ಷಣೆ ನಡೆದು ಕರ್ಫ್ಯೂ ಜಾರಿಯಾಗಿ ಗಣಪತಿ ಮೆರವಣಿಗೆ ಅರ್ಧದಲ್ಲೆ ನಿಂತು ಹೋಗಿತ್ತು.

ಇದನ್ನೂ ಓದಿ: Bengaluru Crime: ಡಿಜೆ ಹಳ್ಳಿ ಗಲಭೆ ವೇಳೆ ಡಿಸಿಪಿ ಕಾರಿಗೆ ತಲೆಯಿಂದ ಜಜ್ಜಿ ಜಖಂಗೊಳಿಸಿದ್ದ ಕಿಡಿಗೇಡಿ ಅರೆಸ್ಟ್​

ಈ ವಿಷಯ ಲೋಕಸಭೆಯಲ್ಲಿ ಪ್ರತಿಧ್ವನಿಸಿತ್ತು. ಪೊಲೀಸರೇ ಸೇರಿಕೊಂಡು ಗಣಪತಿ ವಿಸರ್ಜನೆ ಮಾಡಿದ್ದರು. ಅಂದಿನಿಂದ ಇದಕ್ಕೆ ಪೊಲೀಸ್ ಗಣಪತಿ ಎಂಬ ಹೆಸರು ಸಹ ಬಂತು. ಅಂದಿನಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಗಣೇಶೋತ್ಸವಕ್ಕೆ ಭಾರಿ ಬಿಗಿ ಬಂದೋಬಸ್ತ್ ಮಾಡಿಕೊಂಡು ಬರಲಾಗುತ್ತಿದೆ. ವಿಸರ್ಜನಾ ಮಹೋತ್ಸವವಂತೂ ಪೊಲೀಸ್ ಸರ್ಪಗಾವಲಿನಲ್ಲೆ ನಡೆದುಕೊಂಡು ಬರುತ್ತಿದೆ.

ಈ ಬಾರಿ ಕೊರೋನಾ ಎಲ್ಲಾ ರೀತಿಯ ಅದ್ದೂರಿತನಕ್ಕೆ ಹಾಗು ವಿಜೃಂಭಣೆಯ ಮೆರವಣಿಗೆಗೆ ಕಡಿವಾಣ ಹಾಕಿದೆ. ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಸರಳವಾಗಿ ಗಣಪತಿ ಪ್ರತಿಷ್ಠಾಪಿಸಿ ಅಷ್ಟೇ ಸರಳವಾಗಿ ಹಬ್ಬ ಆಚರಿಸಲಾಗುತ್ತಿದೆ.

ವರದಿ: ಎಸ್.ಎಂ.ನಂದೀಶ್
Published by: Vijayasarthy SN
First published: August 22, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading