ಡ್ರಗ್ ಮಾಫಿಯಾದಲ್ಲಿರುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ; ಸಚಿವ ಭೈರತಿ ಬಸವರಾಜ್‌

ಎಸ್ ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಕೊಡುವ ವಿಚಾರ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಪ್ರಸನ್ನಾನಂದಪುರಿ ಸ್ವಾಮೀಜಿಗಳು ಮತ್ತು ವಾಲ್ಮೀಕಿ ಸಮುದಾಯದ ಬಗ್ಗೆ ಗೌರವವಿದೆ. ಸಂಪುಟ ಸಹೋದ್ಯೋಗಿಗಳು ಆ ಸಮುದಾಯ ಸಚಿವರು ಸೇರಿ ಸಾಧಕ ಬಾಧಕ ಚರ್ಚೆ ಮಾಡಿ ನಂತರ ಮೀಸಲಾತಿ ಕೊಡುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಸಚಿವ ಭೈರತಿ ಬಸವರಾಜ್‌ ತಿಳಿಸಿದ್ದಾರೆ.

news18-kannada
Updated:September 7, 2020, 2:29 PM IST
ಡ್ರಗ್ ಮಾಫಿಯಾದಲ್ಲಿರುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ; ಸಚಿವ ಭೈರತಿ ಬಸವರಾಜ್‌
ಸಚಿವ ಭೈರತಿ ಬಸವರಾಜ್​.
  • Share this:
ಬಾಗಲಕೋಟೆ (ಸೆಪ್ಟೆಂಬರ್.07) : ಡ್ರಗ್ ಮಾಫಿಯಾದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಾಗಲಕೋಟೆಯಲ್ಲಿ  ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಡ್ರಗ್ಸ್ ಕೇಸ್ ನಲ್ಲಿ ಸಚಿವರೊಬ್ಬರು ಸಿಸಿಬಿ ಅಧಿಕಾರಿಗಳಿಗೆ ಒತ್ತಡ ಹಾಕಿ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಈಗಾಗಲೇ ಗೃಹ ಸಚಿವರು ಈ ಬಗ್ಗೆ ಎಲ್ಲಾ ಕ್ರಮ ಕೈಗೊಂಡು ಮಾಹಿತಿ ಕೊಟ್ಟಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಸರ್ಕಾರದಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಾಗಿಯೂ ಮಾತನಾಡಿರುವ ಅವರು, "ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಪರಮಾಧಿಕಾರ. ಅವರ ವಿವೇಚನೆಗೆ ಬಿಟ್ಟಿದ್ದು. ಸಿಎಂ ನಿರ್ಧಾರಕ್ಕೆ ನಾವೆಲ್ಲ ಬದ್ಧವಾಗಿದ್ದೇವೆ" ಎಂದಿದ್ದಾರೆ. ಇನ್ನೂ ನಿಮ್ಮ ಜೊತೆ ಬಂದ ಶಾಸಕರಿಗೆ ಸಚಿವ ಸ್ಥಾನ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಭೈರತಿ ಬಸವರಾಜ್‌, "ಸಚಿವ ಸ್ಥಾನ ಕೊಡಬಹುದು, ಕೊಡದೇ ಇರಬಹುದು, ಅದು ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದು. ಅವರು ಏನೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧವಾಗಿದ್ದೇವೆ" ಎಂದಿದ್ದಾರೆ.

"ಎಸ್ ಟಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಕೊಡುವ ವಿಚಾರ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಪ್ರಸನ್ನಾನಂದಪುರಿ ಸ್ವಾಮೀಜಿಗಳು ಮತ್ತು ವಾಲ್ಮೀಕಿ ಸಮುದಾಯದ ಬಗ್ಗೆ ಗೌರವವಿದೆ. ಸಂಪುಟ ಸಹೋದ್ಯೋಗಿಗಳು ಆ ಸಮುದಾಯ ಸಚಿವರು ಸೇರಿ ಸಾಧಕ ಬಾಧಕ ಚರ್ಚೆ ಮಾಡಿ ನಂತರ ಮೀಸಲಾತಿ ಕೊಡುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ" ಎಂದು ಸಚಿವ ಭೈರತಿ ಬಸವರಾಜ್‌ ತಿಳಿಸಿದ್ದಾರೆ.

ಪತ್ರಕರ್ತರಿಗೆ ಸೈಟ್ ಭಾಗ್ಯ!!

"ನಾನು ನಗರಾಭಿವೃದ್ಧಿ ಸಚಿವನಾದ ಮೇಲೆ ನಗರಾಭಿವೃದ್ದಿ ಇಲಾಖೆ ಹಾಗೂ  ರಾಜ್ಯದಲ್ಲಿರುವ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ನಿವೇಶನಗಳಲ್ಲಿ  ಶೇ5ರಷ್ಟು ನಿವೇಶನವನ್ನು ಪತ್ರಕರ್ತರಿಗೆ ಮೀಸಲಿಡಲು ಸಿಎಂ ಜೊತೆ ಚರ್ಚಿಸಿ ನಿರ್ಧರಿಸಿದ್ದೇವೆ. ನಾನು ಬೆಂಗಳೂರಿಗೆ ಹೋದ ತಕ್ಷಣವೇ ಆದೇಶ ಹೊರಡಿಸುತ್ತೇನೆ‌" ಎಂದು ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ.

ಇದನ್ನೂ ಓದಿ : Karnataka Weather: ಮಲೆನಾಡು, ಕರಾವಳಿಯಲ್ಲಿ ಸೆ. 10ರವರೆಗೆ ಭಾರೀ ಮಳೆ

ಇದೇ ಸಂದರ್ಭದಲ್ಲಿ ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ ನಡೆಸಿರುವ ಅವರು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. "ಬಾಗಲಕೋಟೆ ನಗರಕ್ಕೆ ನೀರು ಸರಬರಾಜು ಕಲ್ಪಿಸುವ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಜೈನ್ ಇರಿಗೇಶನ್ ಕಂಪನಿ ಕಪ್ಪು ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಬಾಗಲಕೋಟೆ ನಗರದಲ್ಲಿ 72ಕೋಟಿ ವೆಚ್ಚದಲ್ಲಿ ನೀರು ಸರಬರಾಜು ಕಾಮಗಾರಿ ಜೈನ್ ಇರಿಗೇಶನ್ ಕಂಪನಿಗೆ 2016ರಲ್ಲಿ ಗುತ್ತಿಗೆ ದೊರೆತಿತ್ತು. 2021ಕ್ಕೆ ಕಾಮಗಾರಿ ಪೂರ್ಣ ಗೊಳಿಸಬೇಕಿತ್ತು. ಆದರೆ ಜೈನ್ ಇರಿಗೇಶನ್ ಕಂಪನಿ ಶೇ50ರಷ್ಟು ಪ್ರಗತಿಯಾಗಿದೆ.

ಹೀಗಾಗಿ ಸಭೆಯಲ್ಲಿ ಜೈನ್ ಇರಿಗೇಶನ್ ಕಂಪನಿ ಕಪ್ಪು ಪಟ್ಟಿಗೆ ಸೇರಿಸಿ, ರಾಜ್ಯದ ಯಾವ ಭಾಗದಲ್ಲೂ ಕಾಮಗಾರಿ ಗುತ್ತಿಗೆ ಕೊಡದಂತೆ ಕ್ರಮಕೈಗೊಳ್ಳಲಾಗುವುದು. ಇನ್ನು ಆಲಮಟ್ಟಿ ಅಣೆಕಟ್ಟೆಯಿಂದ ಬಾದಾಮಿ ತಾಲೂಕಿನ ಬಾದಾಮಿ, ಕೆರೂರು, ಗುಳೇದಗುಡ್ಡ ಪಟ್ಟಣ ಸೇರಿ 18ಗ್ರಾಮಗಳಿಗೆ 220ಕೋಟಿ ವೆಚ್ಚದಲ್ಲಿ  ಕುಡಿಯೋ ನೀರಿನ ಯೋಜನೆ ಜಾರಿಯಲ್ಲಿದೆ. 2022ಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿರುವ ಕುಡಿಯುವ ನೀರು ಯೋಜನೆ, ಒಳಚರಂಡಿ ಯೋಜನೆ ನಿಗದಿತ ಕಾಲಾವಧಿಯಲ್ಲಿ ಮುಗಿಸಬೇಕು ಇಲ್ಲವಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಸಚಿವ ಭೈರತಿ ಬಸವರಾಜ್ ಎಚ್ಚರಿಕೆ ನೀಡಿದ್ದಾರೆ.
Published by: MAshok Kumar
First published: September 7, 2020, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading