ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಲೆಕ್ಕಪತ್ರ ನಿರ್ವಹಣೆ ಜಿಲ್ಲಾಧಿಕಾರಿಗೆ : ಸಚಿವ ಕೆ ಎಸ್ ಈಶ್ವರಪ್ಪ

ಸಣ್ಣಪುಟ್ಟ ಗೊಂದಲ ಎಲ್ಲಾ ನಿವಾರಣೆ ಮಾಡಿ ಸಂಪೂರ್ಣ ಪಾರದರ್ಶಕವಾದ ಅಕೌಂಟ್ ನಿರ್ವಹಣೆ ಮಾಡಲಾಗುವುದು. ಇಲ್ಲಿ ಯಾವುದೇ ರೀತಿಯ ಲೋಪಗಳು ಆಗಬಾರದು. ಒಂದು  ವೇಳೆ ಮತ್ತೇ ಲೋಪ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು

news18-kannada
Updated:October 30, 2020, 5:39 PM IST
ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಲೆಕ್ಕಪತ್ರ ನಿರ್ವಹಣೆ ಜಿಲ್ಲಾಧಿಕಾರಿಗೆ : ಸಚಿವ ಕೆ ಎಸ್ ಈಶ್ವರಪ್ಪ
ಸಲಹಾ ಸಮಿತಿ ಮೊದಲ ಸಭೆ
  • Share this:
ಶಿವಮೊಗ್ಗ(ಅಕ್ಟೋಬರ್​.30): ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಮೇಲ್ವಿಚಾರಣಾ ಮತ್ತು ಸಲಹಾ ಸಮಿತಿ ರಚನೆಯನ್ನು ಜಿಲ್ಲಾಧಿಕಾರಿ ಮಾಡಿದ್ದು, ಅದರ ಮೊದಲ ಸಭೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪನವರ ಸಮ್ಮುಖದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ, ಪ್ರಧಾನ ಆರ್ಚಕ ಶೇಷಗಿರಿ ಭಟ್ ಭಾಗವಹಿಸಿದ್ದರು. ದೇವಸ್ಥಾನದಲ್ಲಿ ಬರುವಂತ ಹರಕೆ ಹಣ ಸೇರಿದಂತೆ, ವಸ್ತುಗಳು ಆಕೌಂಟ್ ನಿರ್ವಹಣೆಯನ್ನು ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಗೆ ವಹಿಸಲಾಗಿದೆ. ಪ್ರತಿ ತಿಂಗಳು ಸಲಹಾ ಸಮಿತಿ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಮೇಲ್ವಿಚಾರಣಾ ಮತ್ತು ಸಲಹಾ ಸಮಿತಿ ರಚನೆ ಮಾಡಿದ್ದರು. ಅದರಂತೆ ಸಮಿತಿಯ ಮೊದಲ ಸಭೆ  ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪನವರ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್, ಸಂಸದ ಬಿ ವೈ ರಾಘವೇಂದ್ರ, ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸೇರಿದಂತೆ, ಧರ್ಮದರ್ಶಿ ರಾಮಪ್ಪ, ಶೇಷಗಿರಿ ಭಟ್ ಸಹ ಉಪಸ್ಥಿತರಿದ್ದರು. ಸಭೆಯಲ್ಲಿ ದೇವಸ್ಥಾನದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಿತು. ನಂತರ ಸಭೆಯ ಬಗ್ಗೆ ಮಾಹಿತಿ ನೀಡಿ ಈಶ್ವರಪ್ಪ, ಈ ಹಿಂದಿನಂತೆ ರಾಮಪ್ಪ ಮತ್ತು ಶೇಷಗಿರಿ ಭಟ್ ಅವರು ಅವರ ಕೆಲಸ ಕಾರ್ಯಗಳನ್ನು ದೇವಸ್ಥಾನದಲ್ಲಿ ಮಾಡಿಕೊಂಡು ಹೋಗುತ್ತಾರೆ ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನದಲ್ಲಿ ಸಣ್ಣಪುಟ್ಟ ವಿವಾದ ಏರ್ಪಟ್ಟ ಹಿನ್ನೆಲೆಯಲ್ಲಿ  ತತ್ಕಾಲಿಕವಾಗಿ ಒಂದು ಸಲಹಾ ಸಮಿತಿ ರಚನೆ ಮಾಡಲಾಗಿದೆ. ರಾಮಪ್ಪ ಮತ್ತು ಶೇಷಗಿರಿ ಭಟ್ ಅವರ ಬಗ್ಗೆ ನಮಗ್ಯಾರಿಗೂ ಗೊಂದಲವಿಲ್ಲ, ಅವರು ಚೆನ್ನಾಗಿ ದೇವಸ್ಥಾನವನ್ನು ನಡೆಸಿಕೊಂಡು ಬಂದಿದ್ದಾರೆ. ಅದರೆ ಹಣಕಾಸಿನ ವಿಚಾರದಲ್ಲಿ ಕೆಲವೊಂದು ಆಪಾದನೆಗಳು ಬಂದಿವೆ. ಹೀಗಾಗಿ ಇವತ್ತಿನ ಸಭೆಯಲ್ಲಿ ಸರ್ವಾನುಮತದಿಂದ ದೇವಸ್ಥಾನದ  ಅಕೌಂಟ್ ಗಳ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ  ಓದಿ : Kukke Subrahmanya : ರಾಜ್ಯದ ಶ್ರೀಮಂತ ದೇಗುಲ ಆಡಳಿತ‌ ವ್ಯವಸ್ಥೆಯ ಗೊಂದಲಕ್ಕೆ ತೆರೆ: ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ

ಸಮಿತಿ ರಚನೆ ಆದರೂ ಈ ಹಿಂದಿನಂತೆಯೇ ಪೂಜೆ ಪುನಸ್ಕಾರ ನಡೆಯಲಿದೆ. ದೇವಾಲಯದಲ್ಲಿ ಲೆಕ್ಕಪತ್ರ ನಿರ್ವಹಣೆ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅಕೌಂಟ್ ನಿರ್ವಹಣೆಗೆ ಜಿಲ್ಲಾಧಿಕಾರಿಗೆ ಜವಾಬ್ದಾರಿ ವಹಿಸಿದ್ದೇವೆ. ದೇವಿಗೆ ಭಕ್ತರಿಂದ ಬರುವ ಹರಕೆ ವಸ್ತುಗಳು, ಹಣ, ಪೂಜೆಗಳ ಬಗ್ಗೆ ಜಿಲ್ಲಾಧಿಕಾರಿ  ಭಕ್ತರಿಗೆ ರಶೀದಿ ನೀಡುತ್ತಾರೆ. ತಿಂಗಳಿಗೊಮ್ಮೆ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿ ಸಭೆ ನಡೆಸಲಿದೆ. ಭಕ್ತರ ಮನಸ್ಸಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಣ್ಣಪುಟ್ಟ ಗೊಂದಲ ಎಲ್ಲಾ ನಿವಾರಣೆ ಮಾಡಿ ಸಂಪೂರ್ಣ ಪಾರದರ್ಶಕವಾದ ಅಕೌಂಟ್ ನಿರ್ವಹಣೆ ಮಾಡಲಾಗುವುದು. ಇಲ್ಲಿ ಯಾವುದೇ ರೀತಿಯ ಲೋಪಗಳು ಆಗಬಾರದು. ಒಂದು  ವೇಳೆ ಮತ್ತೇ ಲೋಪ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಮಿತಿ ರಚನೆ ಯಾಕೆ ಬಂದಿದೆ ಎಂಬ ಬಗ್ಗೆ ಧರ್ಮದರ್ಶಿ ಮತ್ತು ಆರ್ಚಕರ ಗಮನಕ್ಕೆ ತರಲಾಗಿದೆ. ಒಟ್ಟಾರೆ ಭಕ್ತರಿಗೆ ಅಲ್ಲಿ ಯಾವುದೇ ತೊಂದರೆಯಾಗದಂತೆ, ಭಕ್ತರ ಹಣ ಸೂಕ್ತ ರೀತಿಯಲ್ಲಿ ವಿನಿಯೋಗ ಆಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಈಶ್ವರಪ್ಪ  ಸ್ಪಷ್ಟಪಡಿಸಿದರು.
Published by: G Hareeshkumar
First published: October 30, 2020, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading