ಕೆಜಿಎಫ್ ಗಣಿಯಲ್ಲಿ ಚಿನ್ನ ಲಭ್ಯತೆ ಪರಿಶೀಲನೆಯ ಕಾರ್ಯಕ್ಕೆ ಚಾಲನೆ

ಕೆಜಿಎಫ್​ನ ಚಿನ್ನದ ಗಣಿ ಪ್ರದೇಶದಲ್ಲಿ ಗಣಿಗಾರಿಕೆ ಆಗದೇ ಉಳಿದಿರುವ 3,200 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಪ್ರಸ್ತಾಪ ಇದೆ. ಆದರೆ, ಅದಕ್ಕೆ ಮುನ್ನ ಈ ಜಾಗದಲ್ಲಿ ಚಿನ್ನದ ನಿಕ್ಷೇಪ ಇದೆಯಾ ಎಂಬುದನ್ನು ಪತ್ತೆಹಚ್ಚುವ ಕಾರ್ಯಕ್ಕೆ ನಿನ್ನೆ ಚಾಲನೆ ಸಿಕ್ಕಿದೆ.

news18-kannada
Updated:September 29, 2020, 9:10 AM IST
ಕೆಜಿಎಫ್ ಗಣಿಯಲ್ಲಿ ಚಿನ್ನ ಲಭ್ಯತೆ ಪರಿಶೀಲನೆಯ ಕಾರ್ಯಕ್ಕೆ ಚಾಲನೆ
ಕೆಜಿಎಫ್​ನಲ್ಲಿ ಚಿನ್ನದ ನಿಕ್ಷೇಪ ಪತ್ತೆ ಹಚ್ಚಲು ಸಿದ್ಧವಾಗಿರುವ ಸಿಬ್ಬಂದಿ
  • Share this:
ಕೋಲಾರ(ಸೆ. 29): ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆಗೆ ನಿರ್ಧರಿಸುವ ಮುನ್ನ ಇಲ್ಲಿನ ಭೂಮಿಯಲ್ಲಿ ಚಿನ್ನದ ಲಭ್ಯತೆ ಇದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಚಿನ್ನ ಲಭ್ಯತೆ ಪತ್ತೆ ಹಚ್ಚಲು ಬೆಮೆಲ್ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ. ಇಂದು ಪೂಜಾ ವಿಧಿವಿಧಾನಗಳ ನಂತರ ಈ ಕಾರ್ಯ ಪ್ರಾರಂಭಗೊಂಡಿದೆ. ಕೈಗಾರಿಕಾ ಪಾರ್ಕ್ ನಿರ್ಮಾಣದ ಪ್ರಸ್ತಾಪ ಇದ್ದ ಹಿನ್ನೆಲೆಯಲ್ಲಿ, ಆಗಸ್ಟ್ ತಿಂಗಳಲ್ಲಿ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಕೆಜಿಎಫ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೆಜಿಎಫ್ ನಗರದ ಬೆಮೆಲ್ ಸಂಸ್ಥೆಗೆ ಭೇಟಿ ನೀಡಿ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡಿದ್ದ ಅವರು, ನಂತರ ಬೆಮೆಲ್ ಕಾರ್ಖಾನೆ ಹಿಂಭಾಗದಲ್ಲೇ ಇರುವ ಮೈನ್ಸ್ ಪ್ರದೇಶದಲ್ಲಿನ ಭೂಮಿಯನ್ನ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದರು.

ಚಿನ್ನದಗಣಿಗೆ ಸೇರಿದ ಸುಮಾರು 12 ಸಾವಿರ ಎಕರೆ ಪ್ರದೇಶವನ್ನ ಕೇಂದ್ರ ಸರ್ಕಾರ ಗುತ್ತಿಗೆ ಪಡೆದುಕೊಂಡಿದ್ದು, ಅದರಲ್ಲಿ ಗಣಿಗಾರಿಕೆ ನಡೆಸದೆ ಉಳಿದಿರುವ 3200 ಎಕರೆ ಭೂಮಿಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ನಡೆಸಿದ್ದ ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗು ಜಗದೀಶ್ ಶೆಟ್ಟರ್ ಮತ್ತು ಸಂಸದ ಎಸ್ ಮುನಿಸ್ವಾಮಿ ಭಾಗಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಸಭೆಯಲ್ಲಿ ತೆಗೆದುಕೊಂಡ ಅಂದಿನ ನಿರ್ಧಾರವೆಂದರೆ, ಚಿನ್ನದಗಣಿಯಲ್ಲಿ ನೈಸರ್ಗಿಕ ಖನಿಜ ಲಭ್ಯವಿದೆಯಾ ಇಲ್ಲವಾ ಎಂಬ ಬಗ್ಗೆ ಮೊದಲು ಪರಿಶೋಧನೆ ನಡೆಸಬೇಕಿದೆ. ಈ ಖನಿಜಗಳು ಲಭ್ಯವಾಗದೇ ಇದ್ದಲ್ಲಿ ಆ ಜಾಗದಲ್ಲಿ ಕೈಗಾರಿಕೆ ಪಾರ್ಕ್ ಸ್ಥಾಪನೆ ಮಾಡುವುದಾಗಿ ಸಚಿವ ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದರು. ಅದರಂತೆ ಕೆಜಿಎಫ್​ನ ಚಿನ್ನದಗಣಿಯಲ್ಲಿ ಇದೀಗ ಚಿನ್ನ ಲಭ್ಯತೆಯ ಕುರಿತು ಪರಿಶೋಧನೆ ಆರಂಭವಾಗಿದೆ. ಖಾಸಗಿ ಕಂಪನಿಯ ಸಿಬ್ಬಂದಿ, ಯಂತ್ರೋಪಕರಣ ಸಹಾಯದಿಂದ ಕೆಲಸವನ್ನ ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: ದತ್ತಪೀಠದ ಗುಹೆಯೊಳಗಿನ ಸಿ.ಟಿ. ರವಿ ಫೋಟೋ ವೈರಲ್; ಸಾರ್ವಜನಿಕರಿಂದ ಆಕ್ರೋಶ

ಇಲ್ಲಿಯ ಸೈನೈಡ್ ಗುಡ್ಡದಲ್ಲಿ ಸಾವಿರಾರು ಕೋಟಿ ಮೌಲ್ಯದ ಚಿನ್ನದ ಅದಿರಿದ್ದು, ಈ ಕುರಿತು ಪುನಃ ಗಣಿಗಾರಿಕೆ ಆರಂಭಿಸಲು ಸರ್ಕಾರಕ್ಕೆ ಕೆಲ ಖಾಸಗಿ ಕಂಪನಿಗಳು ಅನುಮತಿಗೆ ಮನವಿ ಸಲ್ಲಿಸಿವೆ. ಆದರೆ ಇತ್ತೀಚೆಗೆ ಗಣಿಗಾರಿಕೆಯನ್ನು ಪುನರ್ ಆರಂಭಿಸುವ ಸಲುವಾಗಿ ಗಣಿ ಮತ್ತು ಕಲ್ಲಿದ್ದಲು ಇಲಾಖೆಯಿಂದ ಚಿನ್ನದ ಗಣಿಯಲ್ಲಿ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಇನ್ನು ಕೆಜಿಎಫ್ ಚಿನ್ನದ ಗಣಿಯಲ್ಲಿ ಚಿನ್ನಕ್ಕಿಂತ ಹೆಚ್ಚಿಗೆ ಬೆಲೆ ಬಾಳುವ ಪಲ್ಲಾಡಿಯಮ್ (palladium) ಎನ್ನುವ ಅಪರೂಪದ ಲೋಹದ ಅದಿರು ಪತ್ತೆಯಾಗಿದೆ ಎಂದು ಈ ಹಿಂದೆ ಸಂಸದ ಎಸ್ ಮುನಿಸ್ವಾಮಿ ಮಾಹಿತಿ ನೀಡಿದ್ದರು. ಹಾಗಾಗಿ ಕೇಂದ್ರ ಸರ್ಕಾರ ಬಹುತೇಕ ಗಣಿಗಾರಿಕೆಗೆ ಅನುಮತಿ ನೀಡಬಹುದು ಎಂದು ಸಂಸದರು ಭರವಸೆ ನೀಡಿದ್ದರು.

ಇದೀಗ ಗಣಿಗಾರಿಕೆ ನಡೆಸದ ಪ್ರದೇಶದಲ್ಲಿ ಚಿನ್ನದ ಲಭ್ಯತೆ ಕುರಿತು ಪರಿಶೋಧನೆ ಆರಂಭವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಚಿನ್ನದ ಅದಿರು ನಿಕ್ಷೇಪ ಪತ್ತೆಯಾಗದಿದ್ದಲ್ಲಿ, ರಾಜ್ಯ ಸರ್ಕಾರ ನೀಡಿರುವ ಇಂಡಸ್ಟ್ರಿಯಲ್ ಪಾರ್ಕ್ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಲಿದೆ. ಒಂದೊಮ್ಮೆ ಗಣಿ ಪ್ರದೇಶಗಳಲ್ಲಿ ಚಿನ್ನದ ಅದಿರು ಲಭಿಸಿದ್ದಲ್ಲಿ, ಕೇಂದ್ರ ಸರ್ಕಾರ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಅನುಮತಿ ನಿರಾಕರಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಕೆಜಿಎಫ್ ಮತ್ತು ಮುಳಬಾಗಿಲು ತಾಲೂಕಿನಲ್ಲೂ ಕೈಗಾರಿಕಾ ವಲಯ ಸ್ಥಾಪಿಸಲು ಹಲವೆಡೆ ಜಾಗವನ್ನ ಗುರುತಿಸಲು ಮುಂದಾಗಿದೆ.

ಒಟ್ಟಿನಲ್ಲಿ ಚಿನ್ನದನಾಡು ಕೋಲಾರದಲ್ಲಿ ಮತ್ತೆ ಚಿನ್ನದ ಗಣಿ ಆರಂಭವಾಗಲಿದೆಯಾ ಎನ್ನುವ ಮಾತುಗಳು ಕಳೆದ 15  ವರ್ಷದಿಂದ ಕೇವಲ ಪ್ರಶ್ನೆಯಾಗಿಯೇ ಉಳಿದಿದ್ದು ಮುಂದಿನ 6 ತಿಂಗಳ ನಂತರ ಇದಕ್ಕೆಲ್ಲ ಉತ್ತರ ಸಿಗುವ ನಿರೀಕ್ಷೆ ಇದೆ.

ವರದಿ: ರಘುರಾಜ್
Published by: Vijayasarthy SN
First published: September 29, 2020, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading