ತುಕ್ಕು ಹಿಡಿದ ಸ್ವಚ್ಛತಾ ಯಂತ್ರೋಪಕರಣಗಳು: ಚಿಟಗುಪ್ಪಾ ಪುರಸಭೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ

ಲಕ್ಷಾಂತರ ರೂಪಾಯಿ ವ್ಯಯಿಸಿ ತಂದ ಸಾಮಗ್ರಿಗಳು ತುಕ್ಕು ಹಿಡಿದು ಕೊಳೆಯುತ್ತಿರುವುದನ್ನು ಸಾಕಷ್ಟು ಜನ ಸ್ಥಳೀಯರು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ

news18-kannada
Updated:September 29, 2020, 7:21 AM IST
ತುಕ್ಕು ಹಿಡಿದ ಸ್ವಚ್ಛತಾ ಯಂತ್ರೋಪಕರಣಗಳು: ಚಿಟಗುಪ್ಪಾ ಪುರಸಭೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ
ಚಿಟಗುಪ್ಪಾ ಪುರಸಭೆ ಕಾರ್ಯಾಲಯ
  • Share this:
ಬೀದರ್​(ಸೆಪ್ಟೆಂಬರ್​ 29): ಕೆಲವು ಕಡೆ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಅಗತ್ಯ ಅನುದಾನ ಬಿಡುಗಡೆಯಾಗುವುದಿಲ್ಲ. ಆದರೆ, ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಕಥೆ ವಿಭಿನ್ನವಾಗಿದೆ. ಎರಡು ವರ್ಷಗಳ ಹಿಂದೆ ಈ ಪಟ್ಟಣ ತಾಲೂಕು ಎಂದು ಘೋಷಣೆಯಾಗಿತ್ತು. ಹಾಗಾಗಿ ಪಟ್ಟಣದ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯಿಸಿ ಯಂತ್ರಗಳನ್ನು ಖರೀದಿಸಿದ್ದರು. ಆದರೆ, ಅವುಗಳನ್ನು ಖರೀದಿಸಿದ್ದಷ್ಟೇ ಬಂತು. ಇಲ್ಲಿಯವರೆಗೂ ಆ ಯಂತ್ರಗಳು ಬಳಕೆಯಾಗದೆ ತುಕ್ಕು ಹಿಡಿಯ ತೊಡಗಿವೆ. ಬೀದರ್​ ಜಿಲ್ಲೆಯ ಚಿಟಗುಪ್ಪಾ ಪಟ್ಟಣ ಎರಡು ವರ್ಷಗಳ ಹಿಂದೆ ತಾಲೂಕು ಎಂದು ಘೋಷಿಸಲ್ಪಟ್ಟ ಪಟ್ಟಣ. ಐತಿಹಾಸಿಕವಾಗಿಯೂ ಮಹತ್ವವಾಗಿರುವ ಇಂತಹ ಪಟ್ಟಣದಲ್ಲಿ ಇದೀಗ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಚಿಟಗುಪ್ಪಾ ಪಟ್ಟಣದ ಅಭಿವೃದ್ಧಿಗಾಗಿ ಸರಕಾರದ ಅನುದಾನದಲ್ಲಿ ಖರೀದಿಸಲಾದ ದುಬಾರಿ ಯಂತ್ರಗಳು ಕಳೆದ ಎರಡು ವರ್ಷದಿಂದ ಬಳಸದೆ ನಿಷ್ಪ್ರಯೋಜಕವಾಗಿ ಬಿದ್ದಿವೆ. ಪಟ್ಟಣದ ಅಭಿವೃದ್ಧಿಗೆ ತಂದ ತುಟ್ಟಿ ಸಾಮಗ್ರಿಗಳು ಬಳಕೆಯಾಗದೆ ಉಳಿದಿರುವುದೇಕೆ ? ಎಂದು ಪ್ರಶ್ನಿಸುವ ಸ್ಥಳೀಯರು ಸಾಮಗ್ರಿ ಖರೀದಿಯಲ್ಲಿ ಭ್ರಷ್ಟಾಚಾರವೂ ನಡೆದಿರಬಹುದೆಂಬ ಸಂಶಯ ವ್ಯಕ್ತಪಡಿಸುತ್ತಾರೆ.

ಸದ್ಯ ಹೊಸ ತಾಲೂಕು ಎಂದು ಘೋಷಣೆಯಾಗಿರುವ ಚಿಟಗುಪ್ಪಾ ಪಟ್ಟಣಕ್ಕೆ ತನ್ನದೆ ಆದ ಇತಿಹಾಸವಿದೆ. ಇಂತಹ ಪಟ್ಟಣದ ಪುರಸಭೆ ಆವರಣದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ತರಲಾದ ಕಸ ವಿಲೇವಾರಿ ತಳ್ಳುಗಾಡಿಗಳು, ಕಸ ವಿಂಗಡಣೆಯ ಡಬ್ಬಿಗಳು, ಕಸ ವಿಂಗಡಿಸುವ ಯಂತ್ರ ಕನಿಷ್ಟ ಮಟ್ಟದಲ್ಲೂ ಬಳಕೆಯಾಗದೆ ಕಳೆದ ಎರಡು ವರ್ಷಗಳಿಂದ ತುಕ್ಕು ಹಿಡಿದು ಬಿದ್ದಿವೆ.

ಸ್ವಚ್ಛತಾ ಕಾರ್ಯ ಕೈಗೊಳ್ಳುವುದಿಲ್ಲ ಅಂತಾದರೆ ಸರಕಾರದ ಹಣ ವ್ಯಯಿಸುವ ಆತುರ ಏನಿತ್ತು? ಚಿಟಗುಪ್ಪಾ ನಿಜಾಮರ ಕಾಲದಿಂದಲೂ ದೊಡ್ಡ ಪಟ್ಟಣ. ಇಂತಹ ಪಟ್ಟಣಗಳ ಪರಿಸ್ಥಿತಿಯೇ ಹೀಗಾದರೆ ಹಳ್ಳಿಗಳ ಗತಿಯೇನು? ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.

ಇದನ್ನೂ ಓದಿ : ಪ್ರತಾಪ್ ಗೌಡ ಪಾಟೀಲ್ ಆಯ್ಕೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಅನೂರ್ಜಿತ ; ಮಸ್ಕಿಯಲ್ಲಿ ಗರಿಗೆದರಿದ ರಾಜಕೀಯ

ಪುರಸಭೆ ಆವರಣದಲ್ಲೇ ಇಂತಹ ದುಬಾರಿ ಯಂತ್ರಗಳು ತುಕ್ಕು ಹಿಡಿದು ಬಿದ್ದು ಕೊಳೆಯುತ್ತಿದ್ದರೂ ಸಂಬಂಧಪಟ್ಟವರು ತಲೆ ಕೆಡಿಸಿಕೊಂಡಿಲ್ಲ. ಹೀಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ತಂದ ಸಾಮಗ್ರಿಗಳು ತುಕ್ಕು ಹಿಡಿದು ಕೊಳೆಯುತ್ತಿರುವುದನ್ನು ಸಾಕಷ್ಟು ಜನ ಸ್ಥಳೀಯರು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಕೇಳಿದರೆ ಸಂಬಂಧಪಟ್ಟ ಅಧಿಕಾರಿಗಳು ಏನೋ ಒಂದು ಹೇಳಿ ಜಾರಿಕೊಳ್ಳುತ್ತಾರೆ.

ಇಂದಿನ ಹೊಸ ತಾಲೂಕು, ಅಂದಿನ ನಿಜಾಮರ ಕಾಲದ ದೊಡ್ಡ ಜಿಲ್ಲಾ ಪಟ್ಟಣ. ಹೀಗೆ ಹೆಸರಾಗಿದ್ದ ಚಿಟಗುಪ್ಪ ಇದೀಗ ಕಸದ ಸಮಸ್ಯೆಯಿಂದಲೇ ಗುರುತಿಸುಕೊಳ್ಳುವಂತಾಗಿತ್ತು. ಈ ಸಮಸ್ಯೆಗೆ ಉತ್ತರವಾಗಿ ಸರಕಾರ ಅನುದಾನ ನೀಡಿ, ಕಸ ವಿಲೇವಾರಿ ಯಂತ್ರಗಳನ್ನು ನೀಡಿದರೂ ಅವು ಪ್ರಯೋಜನಕ್ಕೆ ಬಾರದಂತಾಗಿರುವುದು ಮಾತ್ರ ದುರಂತ. ಒಟ್ಟಿನಲ್ಲಿ ಮೈಗಳ್ಳ ಅಧಿಕಾರಿಗಳ ಕಾರಣಕ್ಕೆ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಚಿಟಗುಪ್ಪಾ ಪಟ್ಟಣ ನಿವಾಸಿಗಳ ಪರಿಸ್ಥಿತಿಯಾಗಿದೆ.
Published by: G Hareeshkumar
First published: September 29, 2020, 7:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading