ಕರ್ನಾಟಕದಿಂದ ಆಯ್ಕೆಯಾದ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ರಾಜ್ಯಕ್ಕೆ ಕೊಡುಗೆ ಏನು : ಆರ್. ಧ್ರುವನಾರಾಯಣ

R Dhruvanarayana : ಕಳೆದ ಬಾರಿ  ಭೀಕರ ಪ್ರವಾಹ ಸಂದರ್ಭದಲ್ಲಿ ಉಂಟಾಗಿದ್ದ ನಷ್ಟಕ್ಕೂ ಪರಿಹಾರ ಸರಿಯಾಗಿ ಬಿಡುಗಡೆ ಮಾಡಿಲ್ಲ, ಕೊರೋನಾ ಪರಿಸ್ಥಿತಿ ಬಗ್ಗೆ ದೇವರ ಇಚ್ಚೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ

news18-kannada
Updated:September 4, 2020, 4:43 PM IST
ಕರ್ನಾಟಕದಿಂದ ಆಯ್ಕೆಯಾದ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ರಾಜ್ಯಕ್ಕೆ ಕೊಡುಗೆ ಏನು : ಆರ್. ಧ್ರುವನಾರಾಯಣ
ಮಾಜಿ ಸಂಸದ ಆರ್. ಧ್ರುವನಾರಾಯಣ
  • Share this:
ಶಿವಮೊಗ್ಗ(ಸೆಪ್ಟೆಂಬರ್​.04): ಹಣಕಾಸು ಸಚಿವರಾಗಿ ಮುಂದುವರೆಯಲು ನಿರ್ಮಲಾ ಸೀತಾರಾಮನ್ ಅವರಿಗೆ ಯಾವ ನೈತಿಕತೆ ಇದೆ. ಕರ್ನಾಟಕ ರಾಜ್ಯದಿಂದ ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯರಾಗಿದ್ದಾರೆ, ಇವರಿಂದ ಕರ್ನಾಟಕ ರಾಜ್ಯಕ್ಕೆ ಕೊಡುಗೆ ಏನು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಪ್ರಶ್ನಿಸಿದ್ದಾರೆ. ಇದುವರೆಗೂ, ರಾಜ್ಯಕ್ಕೆ ಬರಬೇಕಾದ ತೆರಿಗೆಯ 13,672 ಕೋಟಿ ರೂಪಾಯಿ ಹಣ ವಾಪಾಸ್ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ  ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬರು ಬೆವರು ಹರಿಸಿ ಸಂಪಾದಿಸಿದ ಹಣದಿಂದ ತೆರಿಗೆ ಕಟ್ಟಿದ್ದಾರೆ. ನಮ್ಮ ತೆರಿಗೆ ಹಣ ನಮಗೆ ವಾಪಾಸ್ ನೀಡಲು ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ, ಅಗತ್ಯವಿದ್ದರೆ ಸಾಲ ಪಡೆಯಿರಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ಬಿಜೆಪಿಯ 25 ಸಂಸದರಿಗೆ ರಾಜ್ಯದ ಮೇಲೆ ಅಭಿಮಾನವಿದ್ದರೆ, ವಿತ್ತ ಸಚಿವರು ಮತ್ತು ಪ್ರಧಾನಿಯವರ ಬಳಿ ಹೋರಾಟ ಮಾಡಿ ರಾಜ್ಯದ ಪಾಲು ತರಲಿ ಎಂದು ಆಗ್ರಹ ಮಾಡಿದರು.

ಕಳೆದ ಬಾರಿ ಭೀಕರ ಪ್ರವಾಹ ಸಂದರ್ಭದಲ್ಲಿ ಉಂಟಾಗಿದ್ದ ನಷ್ಟಕ್ಕೂ ಪರಿಹಾರ ಸರಿಯಾಗಿ ಬಿಡುಗಡೆ ಮಾಡಿಲ್ಲ, ಕೊರೋನಾ ಪರಿಸ್ಥಿತಿ ಬಗ್ಗೆ ದೇವರ ಇಚ್ಚೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ, ಇಚ್ಛಾಶಕ್ತಿ ಇಲ್ಲದೇ ಇರುವವರು, ಕೈಲಾಗದೇ ಇರುವವರು ಈ ರೀತಿ ಬೇಜವಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ. ಬಿಜೆಪಿಯ 25 ಸಂಸದರಿಗೆ ರಾಜ್ಯಕ್ಕೆ ಬರಬೇಕಾದ ಹಣ ಕೇಳಲು ಧ್ವನಿ ಇಲ್ಲವಾ ಎಂದು ಪ್ರಶ್ನೆಸಿದ್ದಾರೆ. ನ್ಯಾಯಯುತವಾಗಿ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಪಾಲು ಇದೆ ಅದನ್ನು ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.

ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ :

ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ವಿಫಲವಾಗಿವೆ. ಕೊರೋನಾ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ವಹಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಒಂದೇ ಆರೋಗ್ಯ ಅಭಯ ಹಸ್ತ ಹೆಸರಿನ ಅಡಿಯಲ್ಲಿ‌ ಕೆಲಸ ಮಾಡಿ ಜನರ ಮೆಚ್ಚುಗೆ ಪಡೆದಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರತಿ ನಿತ್ಯ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಯಾರು ಆರೋಗ್ಯ ಸಚಿವರು ಎಂಬುದೇ ಸರ್ಕಾರದ ಮಟ್ಟದಲ್ಲಿ ಗೊಂದಲವಿದೆ ಎಂದಿದ್ದಾರೆ. ರಾಜ್ಯದ 25 ಜನ ಸಂಸದರೂ ಸಹ ಕೇಂದ್ರದಿಂದ ಬರಬೇಕಾದ ಹಣ ತರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ : ವಿಜಯಪುರದಲ್ಲಿದೆ ಶಿಕ್ಷಕನ ದೇವಸ್ಥಾನ : ಕಳೆದ 65 ವರ್ಷಗಳಿಂದ ಪ್ರತಿನಿತ್ಯ ನಡೆಯುತ್ತಿದೆ ಪೂಜೆ

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ರಾಜ್ಯದ ಕೊಬ್ಬರಿ ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಿಸಿದ್ದೇವು, ಪ್ರವಾಹ ಸಂದರ್ಭದಲ್ಲಿ ಪಕ್ಷಾತೀತವಾಗಿ ನಿಯೋಗ ತೆರಳಿ ಪರಿಹಾರದ ಹಣ ತರುವಲ್ಲಿ ಯಶಸ್ವಿಯಾಗಿದ್ದೇವು. ಯಡಿಯೂರಪ್ಪನವರು 2010ರ ಸಂದರ್ಭದಲ್ಲಿ ಸಿಎಂ ಆದಾಗ ಪ್ರವಾಹ ಸಂಭವಿಸಿದಾಗ ಮನಮೋಹನ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕನಾ ಮಾಡಿದ್ದರು. ಆದರೆ ಈಗಿನ ಪ್ರಧಾನಿ ನರೇದ್ರ ಮೋದಿ ಅವರು ಕಳೆದ ವರ್ಷ ರಾಜ್ಯದಲ್ಲಿ ಭೀಕರ ಪ್ರವಾಹ ಬಂದಾಗಲೂ ಬರಲಿಲ್ಲ, ಪ್ರಸಕ್ತ ವರ್ಷ ಪ್ರವಾಹ ಕಾಣಿಸಿಕೊಂಡಾಗಲು ಬರಲಿಲ್ಲ. ಇದು ಎನ್ ಡಿಎ ಸರ್ಕಾರದ ಕಾರ್ಯವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾವನ್ನು ಆರಂಭದಲ್ಲಿಯೇ ತಡೆಗಟ್ಟಬಹುದಾಗಿತ್ತು. ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​  ಟ್ರಂಪ್ ಕಾರ್ಯಕ್ರಮ ನಡೆಸಲಾಯಿತು. ಜನವರಿಯಲ್ಲಿಯೇ ಕೊರೋನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡರೂ ಸಹ ಮಾರ್ಚ್ ವರೆಗೂ ವಿಮಾನ ಹಾರಾಟ ನಿಯಂತ್ರಿಸಲಿಲ್ಲ. ಆ ಮೇಲೆ ಲಾಕ್ ಡೌನ್ ಘೋಷಣೆ ಮಾಡಿದರು.ಕೆಲವೊಂದು ದೇಶಗಳು ಕೊರೋನಾ ಸೋಂಕನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಿವೆ.ಅಲ್ಲಿ ನಿಯಂತ್ರಿಸಲು ಸಾಧ್ಯವಾದರೆ ನಮ್ಮ ದೇಶದಲ್ಲಿ ಇಲ್ಲಿ ಏಕೆ ನಿಯಂತ್ರಿಸಲಾಗದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆರ್. ಧ್ರುವನಾರಾಯಣ ಪ್ರಶ್ನೆ ಮಾಡಿದ್ದಾರೆ.
Published by: G Hareeshkumar
First published: September 4, 2020, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading