ಚಾಮರಾಜನಗರ : ಕೊರೋನಾ ಆತಂಕದ ನಡುವೆ ಸರ್ಕಾರದ ಆದೇಶ ಉಲ್ಲಂಘಿಸಿ ತರಗತಿ ಆರಂಭಿಸಿದ ಖಾಸಗಿ ಶಾಲೆ

ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದಲ್ಲಿರುವ ಸಂತ ತೆರೇಸಾ ಖಾಸಗಿ ಶಾಲೆ ಇಂದಿನಿಂದ ತರಗತಿಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಇಲಾಖೆಯ ಆದೇಶ ಉಲ್ಲಂಘಿಸಿದೆ.

news18-kannada
Updated:September 21, 2020, 6:22 PM IST
ಚಾಮರಾಜನಗರ : ಕೊರೋನಾ ಆತಂಕದ ನಡುವೆ ಸರ್ಕಾರದ ಆದೇಶ ಉಲ್ಲಂಘಿಸಿ ತರಗತಿ ಆರಂಭಿಸಿದ ಖಾಸಗಿ ಶಾಲೆ
ತರಗತಿ ಆರಂಭಿಸಿದ ಖಾಸಗಿ ಶಾಲೆ
  • Share this:
ಚಾಮರಾಜನಗರ(ಸೆಪ್ಟೆಂಬರ್​. 21) : ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಶಾಲೆಗಳನ್ನು ಹೇಗೆ ಆರಂಭಿಸಬೇಕು ಎಂಬ ಚಿಂತನೆಯಲ್ಲಿ ಸರ್ಕಾರವಿದ್ದರೆ ಸರ್ಕಾರದ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಚಾಮರಾಜನಗರದಲ್ಲಿ ಖಾಸಗಿ ಶಾಲೆಯೊಂದು ಶಾಲೆ ತೆರೆದು ತರಗತಿಗಳನ್ನು ಆರಂಭಿಸಿಯೇ ಬಿಟ್ಟಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಶಾಲೆಗಳು ಮುಚ್ಚಲ್ಪಟ್ಟಿವೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲೆಗಳನ್ನು ತೆರೆದು ಹೇಗೆ ತರಗತಿಗಳನ್ನು ನಡೆಸುವುದು ಎಂಬ ಗೊಂದಲ ಮುಂದುವರಿದಿದೆ. ಈ ನಡುವೆ  ಸೆಪ್ಟೆಂಬರ್ 21ಕ್ಕೆ ಶಾಲೆಗಳು ತೆರೆಯುತ್ತವೆ. ಆದರೆ, ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೆಪ್ಟೆಂಬರ್​ 18 ರಂದು ಸ್ಪಷ್ಟಪಡಿಸಿದ್ದರು. ಆದರೆ, ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದಲ್ಲಿರುವ ಸಂತ ತೆರೇಸಾ ಖಾಸಗಿ ಶಾಲೆ ಇಂದಿನಿಂದ ತರಗತಿಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಇಲಾಖೆಯ ಆದೇಶ ಉಲ್ಲಂಘಿಸಿದೆ.

ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಇಲಾಖೆಯ ಮಾರ್ಗಸೂಚಿಯನ್ನು ದಿಕ್ಕರಿಸಿ ತರಗತಿಗಳನ್ನು ಆರಂಭಿಸಲಾಗಿದೆ. ಈ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಪಾಠ ಪ್ರವಚನವನ್ನು ಶಿಕ್ಷಕರು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದಾಗ, ಮಕ್ಕಳು ತಾವು ಓದಿರುವ ವಿಷಯಗಳ ಬಗ್ಗೆ ಶಿಕ್ಷಕರ ಬಳಿ ಸ್ಪಷ್ಟನೆ ಪಡೆಯಲು ಬಂದಿದ್ದರು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಲದೆ ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಾದಾಪುರ ಗ್ರಾಮದಲ್ಲಿ ಸರಿಯಾದ ಸ್ಥಳವಿರಲಿಲ್ಲ ಹಾಗಾಗಿ ಮಕ್ಕಳು ಇಲ್ಲಿಗೆ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಾಮರಾಜನಗರ ಡಿಡಿಪಿಐ ಜವರೇಗೌಡ, ತರಗತಿಗಳನ್ನು ಆರಂಭಿಸುವಂತೆ ಯಾವುದೇ ಅದೇಶವನ್ನು ಶಿಕ್ಷಣ ಇಲಾಖೆ ನೀಡಿಲ್ಲ. ಮಾದಾಪುರದ ಸಂತ ತೆರೇಸಾ ಖಾಸಗಿ ಶಾಲೆ ತರಗತಿಗಳನ್ನು ಆರಂಭಿಸಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿರಲಿಲ್ಲ. ಶಾಲೆಗಳನ್ನು ತೆರದು ದಾಖಲಾತಿ ಪ್ರಕ್ರಿಯೆ ನಡೆಸಬೇಕು, ತರಗತಿಗಳನ್ನು ಆರಂಭಿಸಬಾರದು ತಿಳಿಸಲಾಗಿತ್ತು. ತಕ್ಷಣವೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಲಾಗಿದೆ. ನಮ್ಮ ಎಚ್ಚರಿಕೆಯನ್ನೂ ಮೀರಿ ನಾಳೆಯಿಂದ ಮತ್ತೆ ತರಗತಿ ಆರಂಭಿಸಿದರೆ ಈ ಶಾಲೆಯ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಸೆಪ್ಟೆಂಬರ್ 21 ರಿಂದ ಕೇವಲ  ಶಾಲೆಗಳು ತೆರೆಯಲಿವೆ. ಆದರೆ, ತರಗತಿಗಳು ಪ್ರಾರಂಭ ವಾಗುವುದಿಲ್ಲ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು. ಖಾಸಗಿ ಶಾಲೆಗಳು ಕೇವಲ ಒಂದು ಅವಧಿಯ ಶುಲ್ಕವನ್ನು​ ಮಾತ್ರ ಪೋಷಕರಿಂದ ಪಡೆಯಬೇಕು. ಆಗೊಮ್ಮೆ ಸಮಸ್ಯೆಯಾದರೆ ಡಿಡಿಪಿಐ, ಬಿಇಓ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ, ಅವರಿಗೆ ಈಗಾಗಳೆ ಸರ್ಕಾರದಿಂದ ಸೂಚನೆ ಕೊಟ್ಟಿದ್ದೇವೆ. ಯಾವುದೇ ಪೋಷಕರಿಗೆ ಇದರಿಂದ ಸಮಸ್ಯೆಯಾದರೆ ಕೂಡಲೇ ಬಿಇಓ ಅವರನ್ನು ಸಂಪರ್ಕಿಸಿ ಎಂದು ಸಚಿವ ಸುರೇಶ್ ಕುಮಾರ್​ ತಿಳಿಸಿದ್ದರು.

ಇದನ್ನೂ ಓದಿ :  ಸಿಎಂ ಬಿ ಎಸ್ ಯಡಿಯೂರಪ್ಪ ಓರ್ವ ಸರ್ವಾಧಿಕಾರಿ ; ವಾಟಾಳ್ ನಾಗರಾಜ್ ಗಂಭೀರ ಆರೋಪ

ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಎಷ್ಟೇ ಮಕ್ಕಳು ಬಂದರೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ದರೆ, ಬಿಇಓಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ. ಇನ್ನು, ಹೋದಲ್ಲೆಲ್ಲಾ ಶಾಲೆ ಯಾವಾಗ ಶುರುವಾಗುತ್ತೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಆದರೆ ಪೋಷಕರು ಮಾತ್ರ ಇನ್ನೂ ಸಾಕಷ್ಟು ಆತಂಕದಲ್ಲಿ ಇದ್ದಾರೆ. ಇದನ್ನು ನಿವಾರಿಸುವ ಕೆಲಸ ನಮ್ಮ‌ ಇಲಾಖೆ ಮಾಡಲಿದೆ ಎಂದು ಹೇಳಿದ್ದರು.ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಸರ್ಕಾರವೇ ತರಗತಿಗಳನ್ನು ಹೇಗೆ ಆರಂಭಿಸಬೇಕು ಎಂಬ ಗೊಂದಲದಲ್ಲಿದ್ದರೆ ಈ ಖಾಸಗಿ ಶಾಲೆ ಯಾವುದಕ್ಕು ತಲೆಕೆಡಿಸಿಕೊಳ್ಳದೆ ತರಗತಿಗಳನ್ನು ನಡೆಸ ತೊಡಗಿದೆ. ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಯ ಭೀತರಾಗಿರುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ ಬೇಡವೇ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.

Published by: G Hareeshkumar
First published: September 21, 2020, 6:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading