ಖಾಸಗಿ ಆಸ್ಪತ್ರೆ, ವೈದ್ಯರ ಅಸಹಕಾರ - ಸೋಂಕು ನಿಯಂತ್ರಿಸುವುದಾರೂ ಹೇಗೆ : ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬೇಸರ

ಒಂದು ಆಸ್ಪತ್ರೆಯನ್ನು ಕೋವಿಡ್ ಗಾಗಿ ಮೀಸಲಿಟ್ಟು, ಉಳಿದ ಆಸ್ಪತ್ರೆಗಳನ್ನು ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಈ ರೀತಿ ಮಾಡಲು ಯಾವುದೇ ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

news18-kannada
Updated:July 26, 2020, 8:56 AM IST
ಖಾಸಗಿ ಆಸ್ಪತ್ರೆ, ವೈದ್ಯರ ಅಸಹಕಾರ - ಸೋಂಕು ನಿಯಂತ್ರಿಸುವುದಾರೂ ಹೇಗೆ : ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬೇಸರ
ಕಲಬುರ್ಗಿ ಜಿಲ್ಲಾಧಿಕಾರಿ ಶರತ್​.ಬಿ
  • Share this:
ಕಲಬುರ್ಗಿ(ಜುಲೈ. 26): ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯಲ್ಲಿ ಈಗ ಸೋಂಕಿತರ ಸಂಖ್ಯೆ ತೀವ್ರ ಏರಿಕೆಯಾಗಿದೆ. ಅದರಲ್ಲಿಯೂ ಸಾವಿನ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಲಾರಂಭಿಸಿದೆ. ನಿನ್ನೆಯೊಂದೇ ಜಿಲ್ಲೆಯಲ್ಲಿ 183 ಜನರಿಗೆ ಸೋಂಕು ದೃಢಪಟ್ಟಿದ್ದು, ಒಂದೇ ದಿನ 4 ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸುತ್ತಲೇ ಇದೆ. ಸೋಂಕಿತರ ಸಂಖ್ಯೆ 3712 ಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 1588 ಆ್ಯಕ್ಟಿವ್ ಕೇಸ್ ಗಳಿವೆ. ಇದರಿಂದಾಗಿ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಗಳು ಸೋಂಕಿತರಿಂದ ತುಂಬಿ ತುಳುಕಲಾರಂಭಿಸಿವೆ. ಈ ವೇಳೆ ಜಿಲ್ಲಾಡಳಿತಕ್ಕೆ ಬೆಂಬಲವಾಗಿ ನಿಲ್ಲಬೇಕಿದ್ದ ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಿಗ ವೈದ್ಯರು ಅಸಹಕಾರ ತೋರುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳ್ಳುವಂತೆ ಮಾಡಿದೆ. 

ಕೊರೋನಾ ಹಾಟ್ ಸ್ಪಾಟ್ ಆಗಿರುವ ಕಲಬುರ್ಗಿಯಲ್ಲಿ ಸೋಂಕಿನ ನಿಯಂತ್ರಣಕ್ಕೆ ಖಾಸಗಿ ವೈದ್ಯರು ಸಹಕರಿಸುತ್ತಿಲ್ಲ ಎಂಬ ಮಾತು ಸ್ವತಃ ಜಿಲ್ಲಾಧಿಕಾರಿ ಶರತ್ ಬಿ. ಅವರ ಬಾಯಿಯಿಂದ ಬಂದಿದೆ. ಕಲಬುರ್ಗಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ವ್ಯಾಪಕಗೊಳ್ಳುತ್ತಿದೆ. ಒಂದಂಕಿಯಲ್ಲಿದ್ದ ಸೋಂಕಿತರ ಎರಡಂಕಿ ದಾಟಿ, ಈಗ ಮೂರಂಕಿಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬಹುತೇಕ ಐಸಿಯು ಕೇಂದ್ರ ಬೆಡ್ ಗಳು ಭರ್ತಿಯಾಗಿವೆ ಎಂದರು.

ಜಿಮ್ಸ್ ನಲ್ಲಿ 28, ಇ.ಎಸ್.ಐ.ಯಲ್ಲಿ 30, ಬಸವೇಶ್ವರಲ್ಲಿ 24 ಐಸಿಯು ಬೆಡ್ ಗಳಿದ್ದು ಬಹುತೇಕ ಭರ್ತಿಯಾಗಿವೆ. ಹೆಚ್ಚುವರಿಯಾಗಿ ಟ್ರಾಮಾ ಕೇರ್ಸ ಸೆಂಟರ್ ನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಲ್ಲಿಯೂ ಐಸಿಯು ವ್ಯವಸ್ಥೆ ಮಾಡಿ 30 ಬೆಡ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 30 ಬೆಡ್ ಗೂ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇರುವುದರಿಂದ, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಒಂದಷ್ಟು ತೊಂದರೆಯಾಗುತ್ತಿದೆ. ಅದರಲ್ಲಿಯೂ ಖಾಸಗಿ ವೈದ್ಯರ ಅಸಹಕಾರದಿಂದ ದೊಡ್ಡ ಸಮಸ್ಯೆ ಎದುರಿಸುವಂತಾಗಿದೆ.

ಐಸಿಯು ವ್ಯವಸ್ಥೆ, ಬೆಡ್ ಗಳ ವ್ಯವಸ್ಥೆಯನ್ನು ಹೇಗೋ ಮಾಡಬಹುದು. ಆದರೆ ಸೇವೆ ಮಾಡುವ ವೈದ್ಯರೇ ಲಭ್ಯವಿಲ್ಲವೆಂದರೆ ಹೇಗೆ ಮಾಡುವುದು. ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಸಹಕಾರ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ಸ್ಥಾಪಿಸಲು ಹೇಳಿದ್ದರೂ ಯಾರೂ ಅದನ್ನು ಗಂಭೀರವಾಗಿ ತೆಗದೆುಕೊಂಡಿಲ್ಲ. ಎರಡು-ಮೂರು ಆಸ್ಪತ್ರೆಯವರು ಸೇರಿ, ಒಂದು ಆಸ್ಪತ್ರೆಯನ್ನು ಕೋವಿಡ್ ಗಾಗಿ ಮೀಸಲಿಟ್ಟು, ಉಳಿದ ಆಸ್ಪತ್ರೆಗಳನ್ನು ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಈ ರೀತಿ ಮಾಡಲು ಯಾವುದೇ ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಹಲೋ ಸರ್ ನಿಮಗೆ ಪಾಸಿಟಿವ್ ಇದೆ ಎಲ್ಲಿದ್ದೀರಿ ? ಹೀಗಂತ ಡಿಸಿಗೆ ಫೋನ್ ಮಾಡಿದ ಸಿಬ್ಬಂದಿ; ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕಿತಾಪತಿ ಮಾಡಿದ ಸೋಂಕಿತ

ಇನ್ನು ಕೋವಿಡ್ ವಾರ್ಡ್ ಗಳಲ್ಲಿ ಕೆಲಸ ಮಾಡಲು ಖಾಸಗಿ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಐ.ಎಂ.ಎ ಪ್ರತಿನಿಧಿಗಳ ಜೊತೆ ಚರ್ಚಿಸಿದ್ದೇನೆ. ಖಾಸಗಿ ವೈದ್ಯರ ಜೊತೆ ಮಾತನಾಡಲು ಹೇಳಿದ್ದೇನೆ. ಕೊವಿಡ್ ಕರ್ತವ್ಯ ಮಾಡಲು ಖಾಸಗಿ ವೈದ್ಯರ ಮನವೊಲಿಕೆಗೆ ಕೇಳಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗಬಹುದು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯರ ಸಹಕಾರ ಅತ್ಯಗತ್ಯ ಎಂದು ಕಲಬುರ್ಗಿ ಡಿಸಿ ಶರತ್ ಅಸಹಾಯತೆ ತೋಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಿರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಕಲಬುರ್ಗಿ ಜಿಲ್ಲೆಯಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿರೋದನ್ನು ಸ್ವತಹ ಡಿಸಿ ಅವರೇ ಒಪ್ಪಿಕೊಂಡಿದ್ದಾರೆ. ಈಗಲಾದರೂ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯರು ತಮ್ಮ ವೃತ್ತಿ ಧರ್ಮವನ್ನು ಮೆರೆದು, ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತಕ್ಕೆ ಸಾಥ್ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
Published by: G Hareeshkumar
First published: July 26, 2020, 8:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading