ನಾಯಿಯಂತೆ ಅಲೆದಾಡಿದ್ದೇನೆ, ಕೋಲಾರ ಜಿಲ್ಲಾಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಶಾಸಕಿ ರೂಪಕಲಾ ಶಶಿಧರ್

ರಸ್ತೆ ಕಾಮಗಾರಿ ಸಂಬಂಧ ಒಬ್ಬ ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೇ ಯಾವುದೇ ರೀತಿ ಕ್ರಮ ಜರಿಗಿಸುತ್ತಿಲ್ಲ. ನಾನೋರ್ವ ಜನ ಪ್ರತಿನಿಧಿಯಾಗಿ ಒಂದು ಸಣ್ಣ ರಸ್ತೆ ಕಾಮಗಾರಿ ಮಾಡಿಸೋಕೆ ಆಗಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂಬುದು ಶಾಸಕಿ ರೂಪಕಲಾ ಆರೋಪ.

news18-kannada
Updated:September 19, 2020, 9:07 PM IST
ನಾಯಿಯಂತೆ ಅಲೆದಾಡಿದ್ದೇನೆ, ಕೋಲಾರ ಜಿಲ್ಲಾಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಶಾಸಕಿ ರೂಪಕಲಾ ಶಶಿಧರ್
ಡಿಸಿ ಸತ್ಯಭಾಮ ವಿರುದ್ಧ ಪ್ರತಿಭಟಿಸುತ್ತಿರುವ ಶಾಸಕಿ ರೂಪಕಲಾ.
  • Share this:
ಕೋಲಾರ (ಸೆಪ್ಟೆಂಬರ್​ 19); ಜಿಲ್ಲೆಯ ಕೆಜಿಎಪ್ ನಗರದ ಅಶೋಕನಗರದ ರಸ್ತೆ ತೆರವು ಕಾರ್ಯವನ್ನು ಆರಂಭಿಸುವಂತೆ ಆಗ್ರಹಿಸಿ, ಶಾಸಕಿ ರೂಪಕಲಾ ಅವರು ಮಳೆಯನ್ನು ಲೆಕ್ಕಿಸದೆ ಜಿಲ್ಲಾಧಿಕಾರಿ ಕಚೇರಿ ಎದುರೇ ನಿಂತು ಪ್ರತಿಭಟನೆ ನಡೆಸಿದ ಹಿನ್ನಲೆ  ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನ ಆಲಿಸಿದರು. ಬೆಳಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆ ವರೆಗು ಕೋಲಾರ ಡಿಸಿ ಕಚೇರಿ ಎದುರು ಶಾಸಕರು ಏಕಾಂಗಿಯಾಗಿ ಮಳೆಯಲ್ಲೆ ನಿಂತು ಪ್ರತಿಭಟನೆ ನಡೆಸಿದರು. ಅಲ್ಲದೆ, ಕೆಜಿಎಪ್ ನ ಅಶೋಕನಗರ ರಸ್ತೆ ಕಾಮಗಾರಿ ಆರಂಭಿಸಲು ಯಾವುದೇ ಅಡ್ಡಿಯಿಲ್ಲದಿದ್ದರು ಕಳೆದ 10 ತಿಂಗಳಿಂದ ಯಾವುದೇ ಕಾರಣವಿಲ್ಲದೆ ರಸ್ತೆ ತೆರವು ಕಾರ್ಯವು ಮೂಲೆಗುಂಪಾಗಿದೆ ಹೀಗಾಗಿ ಕೂಡಲೇ ತೆರವು ಕಾರ್ಯಾಚರಣೆ ಹಾಗೂ ರಸ್ತೆ ಕಾಮಗಾರಿ ಆರಂಭಿಸೊ ದಿನಾಂಕವನ್ನ ತಿಳಿಸುವಂತೆ ಶಾಸಕರು ಆಗ್ರಹಿಸಿದ್ದಾರೆ

ರಸ್ತೆ ಕಾಮಗಾರಿ ಸಂಬಂಧ ಒಬ್ಬ ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೇ ಯಾವುದೇ ರೀತಿ ಕ್ರಮ ಜರಿಗಿಸುತ್ತಿಲ್ಲ. ನಾನೋರ್ವ ಜನ ಪ್ರತಿನಿಧಿಯಾಗಿ ಒಂದು ಸಣ್ಣ ರಸ್ತೆ ಕಾಮಗಾರಿ ಮಾಡಿಸೋಕೆ ಆಗಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನ ಸಮಸ್ಯೆ ಎದುರಿಸುತ್ತಿದ್ಧಾರೆ. ಈ ಕಾಮಗಾರಿಗೆ ಬಲಾಡ್ಯರು ಅಡ್ಡಪಡಿಸುತ್ತಿದ್ದಾರೆ. ಈ ಕಾಮಗಾರಿಗಾಗಿ ಜನ ಮನೆ ಕಳೆದುಕೊಂಡು ಸಮಸ್ಯೆಗೀಡಾಗಿದ್ಧಾರೆ. ಈ ಕೂಡಲೇ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಈ ರಸ್ತೆ ಕಾಮಗಾರಿ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದೇ ಹೋದಲ್ಲಿ ವಿಧಾನಸಭಾ ಕಲಾಪ ಬಹಿಷ್ಕರಿಸಿ ಹೋರಾಟ ಮುಂದುವರಿಸುತ್ತೇನೆ ಎಂದು ರೂಪಾ ಶಶಿಧರ್ ಎಚ್ಚರಿಕೆ ನೀಡಿದ್ದಾರೆ.

ಕೆಜಿಎಫ್ ನಗರದ ಸ್ಕೂಲ್ ಮೈನ್ಸ್​ನಿಂದ ಗಾಂಧಿ ಸರ್ಕಲ್​ವರೆಗೆ 1.8 ಕಿಲೋ ಮೀಟರ್ ರಸ್ತೆ ಅಗಲೀಕರಣ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ 2013ರಲ್ಲೇ ಮಾಜಿ ಶಾಸಕ ವೈ ಸಂಪಂಗಿ ಅವಧಿಯಲ್ಲೇ ರಸ್ತೆ ತೆರವು ಕಾರ್ಯಾಚರಣೆ ನಡೆದಿತ್ತು. ಅನುಮತಿ ಪಡೆಯದೇ ತೆರವು ಕಾರ್ಯಾಚರಣೆ ಮಾಡಲಾಗದು ಎಂದು ಪೊಲೀಸರು ಮಧ್ಯಪ್ರವೇಸಿದ್ದರು. ಹೀಗಾಗಿ ರಸ್ತೆ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಬಳಿಕ ರಸ್ತೆ ಅಗಲೀಕರಣ ಕಾಮಗಾರಿ ಆಗಿಲ್ಲ ಎಂದು 11 ಮಂದಿ ವ್ಯಾಪಾರಿಗಳು ಕೋರ್ಟ್ಮೆಟ್ಟಿಲೇರಿದ್ದರು. ನ್ಯಾಯಲಯವೂ ಜಿಲ್ಲಾಡಳಿತ ಹಂತದಲ್ಲೇ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯಲಿ ಎಂದು ಆದೇಶ ನೀಡಿತ್ತು. ಇದೀಗ ಜಿಲ್ಲಾಡಳಿತ ಕಚೇರಿ ನಿರ್ಲಕ್ಷ್ಯದಿಂದ ಇನ್ನೂ ರಸ್ತೆ ಅಗಲೀಕರಣ ಕಾಮಗಾರಿ ಮುಗಿದಿಲ್ಲ ಎಂಬುದು ಶಾಸಕಿ ರೂಪಾ ಶಶಿಧರ್ ಆರೋಪ.

ಪ್ರತಿಭಟನಾ ಸ್ತಳಕ್ಕೆ ಆಗಮಿಸಿ, ಪ್ರತಿಭಟನಾ ನಿರತ ಶಾಸಕರಾದ ರೂಪಕಲಾ ಶಶಿಧರ್ ಅವರೊಂದಿಗೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಮಾತನಾಡುವ ವೇಳೆ ಕೆಲ ಸಮಯ ಪರಸ್ವರ ಮಾತಿನ ಚಕಮಕಿ ಉಂಟಾಯಿತು. ಶಾಸಕರು ಏರು ಧನಿಯಲ್ಲೆ ಜಿಲ್ಲಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೀತು. ಬೇಕಂತಲೇ ರಸ್ತೆ ಕಾಮಗಾರಿ ವಿಚಾರವನ್ನ ಮೂಲೆಗುಂಪು ಮಾಡಲಾಗಿದೆ ಎಂದರು, ಇದಕ್ಕೆ ಉತ್ತರ ನೀಡಿದ ಜಿಲ್ಲಾಧಿಕಾರಿಗಳು ನಂಗೆ ಈ ವಿಚಾರದ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲ ನೀವು ಭಾವೋದ್ವೇಗಕ್ಕೆ ಒಳಗಾಗ ಬೇಡಿ, ಅದು ನನ್ನ ಜವಾಬ್ದಾರಿ ನಾನು ಮಾಡುವೆ ಎನ್ನುತ್ತಿದ್ದಂತೆಯೇ ಕೆರಳಿದ ಶಾಸಕರು, ಜಿಲ್ಲಾಧಿಕಾರಿಯಾಗಿ ನೀವು ಎರಡು ಸಭೆ ನಡೆಸಿದ್ದೀರಾ, ಮತ್ತೆ ಗೊತ್ತಿಲ್ಲ ಎಂದು ಯಾಕೆ ಹೇಳ್ತಿರಿ ಎಂದು ಗುಡುಗಿದರು.

ಅದಲ್ಲದೆ ರಸ್ತೆ ವಿಚಾರ ನ್ಯಾಯಾಲಯ ಅಂಗಳದಲ್ಲಿ ಇದ್ದಾಗ ಕೇಸ್ ಪೈಲ್ ಹಲವು ಬಾರಿ ಕಾಣೆಯಾಗುವಂತ ಸನ್ನಿವೇಶ ಉಂಟಾಗಿತ್ತು. ನಾನು ಆಗ ನಾಯಿಯಂತೆ ಅಲೆದಾಡಿ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ, ನೀವು ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಏಕೆ ಹೇಳಿಲ್ಲವೆಂದು ನಗರ ಸಭೆ ಪಿಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಆಗ ಪ್ರತಿಕ್ರಿಯೆ ನೀಡಿದ ಡಿಸಿ ಅವರು, ಅಧಿಕಾರಿಗಳಾದ ನಾವು ಕೆಲಸ ಮಾಡಲು ತಿಳಿದಿದೆ, ಹೀಗೆ ಒತ್ತಡ ಹೇರೋದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಂತೆ, ಮತ್ತೊಮ್ಮೆ ಇಬ್ಬರ ನಡುವೆಯು ಮಾತಿನ ಚಕಮಕಿ ಉಂಟಾಯಿತು.

ಇದನ್ನೂ ಓದಿ : ರಾಜ್ಯಸಭೆಯಲ್ಲಿ ಕೇಂದ್ರದ ಮೂರು ಕೃಷಿ ಮಸೂದೆ; ಬಿಜೆಪಿಗಿದೆಯೇ ಬಹುಮತ?, ಸಂಖ್ಯೆಗಳ ಆಟದಲ್ಲಿ ಸರ್ಕಾರ!ಎಲ್ಲಾ ಜನಪ್ರತಿನಿಧಿಗಳು ಹೀಗೆ ಬಂದು ಯಾವಾಗ ಮಾಡ್ತೀರಾ ಎಂದು ಕೇಳಿದರೆ , ನಮಗು ಕಾ‌ನೂನು ಚೌಕಟ್ಟು ಇರುತ್ತೆ ಹಾಗೆ ಮಾಡುತ್ತೇವೆ ಎಂದರು, ಇನ್ನು ಪರಸ್ಪರ ಮಾತಿನ ಚಕಮಕಿ ವೇಳೆ ನೀವು ಕೆಲಸ ಮಾಡುವ ಉದ್ದೇಶವನ್ನ ಇರಿಸಿಕೊಂಡಿಲ್ಲ, ಅದು ಮೊದಲೇ ನನಗೆ ಅರ್ಥವಾಗಿತ್ತು, ರಸ್ತೆ ವಿಚಾರ ತಿಳಿದು ಗೊತ್ತಿಲ್ಲ ಎನ್ನುತ್ತಿದ್ದು ವಿಪರ್ಯಾಸ ಎಂದು ಸಮಾಧಾನವಾಗಿಯೇ ಜಿಲ್ಲಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಮಾತಿನ ಚಕಮಕಿ ನಂತರ ಕೊನೆಗೆ ಮುಂಗಾರು ಅಧಿವೇಶನ ಮುಗಿದ ನಂತರ ರಸ್ತೆ ತೆರವು ಕಾರ್ಯ ಹಾಗು ಕಾಮಗಾರಿಯನ್ನ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ನಂತರ ಶಾಸಕರು ಪ್ರತಿಭಟನೆ ಕೈ ಬಿಟ್ಟರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ರಸ್ತೆ ತೆರವು ಮಾಡಿಯೇ ತೀರುತ್ತೇವೆ ಎಂದರು. ಪ್ರತಿಭಟನೆ ಕೈಬಿಟ್ಟ ನಂತರ ಮಾತನಾಡಿದ ಶಾಸಕರು, ರಸ್ತೆ ಕಾಮಗಾರಿಯ ಸಮಸ್ಯೆ ಹಾಗು ಗಂಭೀರತೆಯನ್ನ ಜಿಲ್ಲಾಡಳಿತ ಅರ್ಥಮಾಡಿಕೊಂಡಿದೆ ಎನ್ನುವ ವಿಶ್ವಾಸವಿದೆ. ಜನಪ್ರತಿನಿಧಿಯಾಗಿ ಒಂದು ಸಣ್ಣ ರಸ್ತೆ ಮಾಡೋಕೆ ಆಗಲ್ಲ ಎಂದು ಜನ ಮಾತಾಡಿಕೊಳ್ತಾರೆ, ಈಗ ಜಿಲ್ಲಾಧಿಕಾರಿಗಳು ಒಂದು ಸಮಯ ಹೇಳಿದ್ದಾರೆ ಅಲ್ಲಿವರೆಗು ಕಾದು ನೋಡುವುದಾಗಿ ತಿಳಿಸಿದರು.
Published by: MAshok Kumar
First published: September 19, 2020, 8:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading