HOME » NEWS » District » MINISTER PRABHU CHAUHAN HELPS IN RESCUING A KIDNAPPED PERSON IN UKRAINE SSBDR

ಉಕ್ರೇನ್​ನಲ್ಲಿ ಕಿಡ್ನಾಪ್ ಆಗಿದ್ದ ಕನ್ನಡಿಗ; ರಕ್ಷಣೆಗೆ ಸಚಿವ ಪ್ರಭು ಚವ್ಹಾಣ್ ನೆರವು

ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ ಬೀದರ್​ನ ಅಜಯ್ ಕುಮಾರ್ ಎಂಬಾತನನ್ನು ಜ. 16ರಂದು ಅಪಹರಣಗೊಂಡಿದ್ದ. ಈ ವಿಚಾರ ತಿಳಿದ ಬಳಿಕ ಪ್ರಭು ಚವ್ಹಾಣ ತತ್​ಕ್ಷಣವೇ ಸ್ಪಂದಿಸಿ ವಿದೇಶಾಂಗ ಇಲಾಖೆ ಮೂಲಕ ಆ ಯುವಕನ ರಕ್ಷಣೆ ಮಾಡಿಸಿದ್ದಾರೆ.

news18-kannada
Updated:January 20, 2021, 8:14 AM IST
ಉಕ್ರೇನ್​ನಲ್ಲಿ ಕಿಡ್ನಾಪ್ ಆಗಿದ್ದ ಕನ್ನಡಿಗ; ರಕ್ಷಣೆಗೆ ಸಚಿವ ಪ್ರಭು ಚವ್ಹಾಣ್ ನೆರವು
ಸಚಿವ ಪ್ರಭು ಚವ್ಹಾಣ
  • Share this:
ಬೀದರ್: ಉಕ್ರೇನ್ ದೇಶದಲ್ಲಿ ಅಪಹರಣವಾಗಿದ್ದ ಔರಾದ ತಾಲೂಕಿನ ಹುಲ್ಯಾಳ ಗ್ರಾಮದ ವಿದ್ಯಾರ್ಥಿಯನ್ನು ಮನೆಗೆ ವಾಪಸ್ಸು ಕರೆತರುವಲ್ಲಿ ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಯಶಸ್ವಿಯಾಗಿದ್ದಾರೆ. ಅಜಯಕುಮಾರ ಆರ್ ರಾಠೋಡ್ ಎಂಬ ವಿದ್ಯಾರ್ಥಿಯು ಮೆಡಿಕಲ್ ವ್ಯಾಸಂಗಕ್ಕಾಗಿ 2020ರ ಡಿಸೆಂಬರ್ 13ರಂದು ಉಕ್ರೇನ್ ದೇಶಕ್ಕೆ ತೆರಳಿದ್ದ. 2021ರ ಜನವರಿ 16ರಂದು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿಯನ್ನು ಅಪಹರಣ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ವಿಷಯ ತಿಳಿದ ಕೂಡಲೇ ಸಚಿವರು, ಸಾಕಷ್ಟು ಆತಂಕಕ್ಕೆ ಒಳಗಾಗಿದ್ದ ವಿದ್ಯಾರ್ಥಿಯ ಕುಟುಂಬಸ್ಥರನ್ನು ಸಂಪರ್ಕಿಸಿ, ತಮ್ಮ ಮಗುವನ್ನು ಮರಳಿ ತರುತ್ತೇನೆ. ಯಾವುದೇ ಕಾರಣಕ್ಕೂ ಎದೆಗುಂದದಿರಿ ಎಂದು ಧೈರ್ಯ ತುಂಬಿದರು.

ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಗಮನಕ್ಕೆ ತಂದು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್. ಜೈಶಂಕರ್ ಅವರ ಮೂಲಕ ಉಕ್ರೇನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ, ವಿದ್ಯಾರ್ಥಿಯು ಕಿರ್ಗಿಸ್ತಾನ್‍ ದೇಶದಲ್ಲಿರುವ ಮಾಹಿತಿ ಲಭ್ಯವಾಯಿತು. ತದನಂತರ ಕಿರ್ಗಿಸ್ತಾನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ವಿದ್ಯಾರ್ಥಿಯನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಲಾಯಿತು. ಕಿರ್ಗಿಸ್ತಾನ್‍ದಿಂದ ಅಜಯಕುಮಾರ ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಗುರುವಾರ ಖಾತೆ ಹಂಚಿಕೆ ಪಟ್ಟಿ ಪ್ರಕಟ; ಅತೃಪ್ತ ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಕಸರತ್ತು

ಅಪಹರಣವಾಗಿದ್ದ ವಿದ್ಯಾರ್ಥಿಯನ್ನು ಕೇವಲ ಮೂರು ದಿನಗಳಲ್ಲಿ ಪತ್ತೆ ಮಾಡಿ, ಮನೆಗೆ ಕರೆತರುವಲ್ಲಿ ಲೋಕಸಭೆ ಸದಸ್ಯರಾದ ಭಗವಂತ ಖೂಬಾ ಅವರು ಸಾಕಷ್ಟು ಸಹಕಾರ ನೀಡಿರುವುದು ತಿಳಿದುಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ ಅವರು ವೈಯಕ್ತಿಕ ಕಾಳಜಿ ವಹಿಸಿ ವಿದ್ಯಾರ್ಥಿಗೆ ನೆರವಾಗಿದ್ದಾರೆ. ಈ ವಿದ್ಯಾರ್ಥಿಯನ್ನು ಮನೆಗೆ ವಾಪಸ್ಸು ಕರೆತರಲು ಸಹಕರಿಸಿದ ಎಲ್ಲರಿಗೂ ಯುವಕನ ಪಾಲಕರ ಪರವಾಗಿ ಮತ್ತು ಔರಾದ ತಾಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ದೇಶದಲ್ಲಿರುವ ಕಾಲೇಜುಗಳು ಯಾರಿಗೂ ಕಮ್ಮಿಯಿಲ್ಲದಂತೆ ಶಿಕ್ಷಣ ನೀಡುತ್ತಿವೆ. ಹಲವು ಖಾಸಗಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಬೇರೆ ದೇಶಗಳ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಹಾಗಾಗಿ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸ್ಮಶಾನ ಜಾಗ ಒತ್ತುವರಿ: ಚಟ್ಟದೊಂದಿಗೆ ಪ್ರತಿಭಟನೆ ನಡೆಸಿದ ಕಾರೇಕುರ ಗ್ರಾಮಸ್ಥರು

ಒಂದು ವೇಳೆ ವಿದೇಶಕ್ಕೆ ಹೋಗುವ ಅನಿವಾರ್ಯತೆ ಇದ್ದಲ್ಲಿ ಮೊದಲಿಗೆ ಆ ದೇಶದ ವಿದೇಶಾಂಗ ನೀತಿಗಳು, ಸುರಕ್ಷತೆ ಮತ್ತು ಪ್ರವೇಶ ಬಯಸುವ ಕಾಲೇಜಿನ ಹಿನ್ನೆಲೆ ಮತ್ತು ಅಲ್ಲಿನ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ವಿಶೇಷವಾಗಿ ಸುರಕ್ಷತೆಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅಪರಿಚಿತ ವ್ಯಕ್ತಿಗಳು ಅಥವಾ ಏಜೆನ್ಸಿಗಳ ಆಕರ್ಷಕ ಸೌಲಭ್ಯಗಳಿಗೆ ಮಾರುಹೋಗಿ ವಿದೇಶಗಳಿಗೆ ಹೋಗದಿರಿ ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಕಳೆದ ಕೆಲ ತಿಂಗಳ ಹಿಂದೆ ಭಾಲ್ಕಿ ತಾಲೂಕಿನ ವಿದ್ಯಾರ್ಥಿಯೊಬ್ಬ ಉಕ್ರೇನ್​ಗೆ ಮೆಡಿಕಲ್ ಓದಲು ಹೋದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದರು. ನಂತರ ಭಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಾಳಜಿ ವಹಿಸಿ ಮೃತ ಮೃತ ದೇಹವನ್ನು ಭಾರತಕ್ಕೆ ತರಲು ಶ್ರಮಿಸಿದ್ಸನ್ನು ಇಲ್ಲಿ ಸ್ಮರಿಸಬಹುದು.

ವರದಿ: ಸಿದ್ದಪ್ಪ ಸತ್ಯಣ್ಣನವರ್
Published by: Vijayasarthy SN
First published: January 20, 2021, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories