ವಿದ್ಯುತ್ ಕಂಬಗಳಿಗೆ ಅಡ್ಡಿಯಾಗುವ ಅಕೇಶಿಯಾ ಮರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಿ ; ಸಚಿವ ಕೆ.ಎಸ್.ಈಶ್ವರಪ್ಪ

ಒಂದು ಅಕೇಶಿಯಾ ಮರ ಬಿದ್ದರೆ 10 ರಿಂದ 15 ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗುತ್ತಿದೆ. ಅರಣ್ಯ ಇಲಾಖೆ ಅಂತಹ ಮರಗಳನ್ನು ಮೊದಲೇ ಗುರುತಿಸಿ ತೆರವುಗೊಳಿಸಬೇಕು.

news18-kannada
Updated:August 10, 2020, 8:56 PM IST
ವಿದ್ಯುತ್ ಕಂಬಗಳಿಗೆ ಅಡ್ಡಿಯಾಗುವ ಅಕೇಶಿಯಾ ಮರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳಿ ; ಸಚಿವ ಕೆ.ಎಸ್.ಈಶ್ವರಪ್ಪ
ಸಚವ ಕೆ ಎಸ್ ಈಶ್ವರಪ್ಪ
  • Share this:
ಶಿವಮೊಗ್ಗ(ಆಗಸ್ಟ್​. 10): ಮಲೆನಾಡು ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಗಾಳಿ ಮಳೆಯಾಗುತ್ತಿದೆ. ಮಳೆ, ಗಾಳಿಯಿಂದಾಗಿ ಹಲವು ಭಾಗಗಳಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು,  ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಮನೆಗಳಿಗೆ  ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಮಾಡಲು ಅಡಚಣೆಯಾಗುತ್ತಿದೆ.

ವಿದ್ಯುತ್ ಕಂಬಗಳ ಸಮೀಪ ಅಕೇಶಿಯಾ ಮರಗಳನ್ನು ನೆಟ್ಟಿರುವುದರಿಂದ ಗಾಳಿಗೆ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ವ್ಯಾಪಕ ಹಾನಿಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕಡೆಗಳಲ್ಲಿ ಮರಗಳನ್ನು ತಕ್ಷಣ ತೆರವುಗೊಳಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಅಧಿಕಾರಿಗಳ ಜಂಟಿ ಸಭೆಯನ್ನು ಇಂದು ಸಚಿವರು ನಡೆಸಿದರು. ಎರಡು ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸದರೆ ಮಾತ್ರ ಶಿವಮೊಗ್ಗ ಜಿಲ್ಲೆಯ ಭಾಗದ ಜನರ ವಿದ್ಯುತ್ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಈ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಹಲವು ಸಮಸ್ಯೆಗಳು ಉಂಟಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಅಕೇಶಿಯಾ ಮರ ಬಿದ್ದರೆ 10 ರಿಂದ 15 ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗುತ್ತಿದೆ. ಅರಣ್ಯ ಇಲಾಖೆ ಅಂತಹ ಮರಗಳನ್ನು ಮೊದಲೇ ಗುರುತಿಸಿ ತೆರವುಗೊಳಿಸಬೇಕು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅಕೇಶಿಯಾ ಹಾಗೂ ನೀಲಗಿರಿ ಸಸಿಗಳನ್ನು ನೆಡಬಾರದು. ಅಕೇಶಿಯಾ ಮರಗಳ ತೆರವುಗೊಳಿಸಲು ಕೋರಿ ಮೆಸ್ಕಾಂ ಸಲ್ಲಿಸುವ ಪ್ರಸ್ತಾವನೆಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಸ್ಪಷ್ಟಪಡಿಸಿದರು.

ತೀರ್ಥಹಳ್ಳಿ ಭಾಗದಲ್ಲಿ ಮಳೆ ಗಾಳಿಯಿಂದಾಗಿ 314 ವಿದ್ಯುತ್ ಕಂಬಗಳು ಬಿದ್ದಿದ್ದು, 116 ಹೊಸ ಕಂಬಗಳನ್ನು ಅಳವಡಿಸಲಾಗಿದೆ. ಇನ್ನುಳಿದ ಕಂಬಗಳನ್ನು ಮೂರು ದಿನಗಳ ಒಳಗಾಗಿ ಅಳವಡಿಸಲಾಗುವುದು. ಈ ಭಾಗದಲ್ಲಿ ವಿದ್ಯುತ್ ಕಂಬಗಳಿಗೆ ಅಪಾಯಕಾರಿಯಾಗಿರುವ 940 ಅಕೇಶಿಯಾ ಮರಗಳನ್ನು ತೆರವುಗೊಳಿಸುವ ಕುರಿತು ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆ ; ಶಾಸಕಿಯ ಸಹೋದರನಿಂದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ.!

ಅರಣ್ಯ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳಿಗೆ ಅಡ್ಡಿ ಉಂಟು ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅರಣ್ಯದ ಪ್ರಾಣಿ ಪಕ್ಷಿಗಳಿಗೆ ಅನುಕೂಲಕರವಾಗಿರುವ ಇಂತಹ ಯೋಜನೆಗಳ ಜಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಬಾರದು ಎಂದು ಈಶ್ವರಪ್ಪ ಅಧಿಕಾರಿಗಳಿಗೆ ಸ್ಪಷ್ಪಪಡಿಸಿದರು.

ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಮಳೆ ಗಾಳಿಯಿಂದಾಗಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸಚಿವರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಲಾಗಿತ್ತು.
Published by: G Hareeshkumar
First published: August 10, 2020, 8:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading