news18-kannada Updated:April 19, 2021, 4:01 PM IST
ಡಿ.ಕೆ. ಶಿವಕುಮಾರ್.
ರಾಮನಗರ: ಕನಕಪುರ ಬಂಡೆ, ಕಾಂಗ್ರೆಸ್ ಪಕ್ಷದ ಹೈಪವರ್ ಲೀಡರ್, ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದ ಖದರ್ ರಾಜಕಾರಣಿ ಎಂದೇ ಡಿಕೆ ಶಿವಕುಮಾರ್ ಕರೆಸಿಕೊಳ್ತಾರೆ. ಅದರಲ್ಲೂ ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾದ ಬಳಿಕ ಡಿ.ಕೆ. ಶಿವಕುಮಾರ್ ಪ್ರಭಾವ ಇಡೀ ರಾಜ್ಯದ ಜೊತೆಗೆ ಸ್ವಕ್ಷೇತ್ರ ರಾಮನಗರ ಜಿಲ್ಲೆಯಲ್ಲಿಯೂ ಸಹ ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ರಾಮನಗರ ಜಿಲ್ಲೆಯ ಜೆಡಿಎಸ್ನ ಪ್ರಮುಖ ಮುಖಂಡರನ್ನ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ಗೆ ಕರೆತರುವ ಮೂಲಕ ಪಕ್ಷದ ಬಲವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಇನ್ನು ರಾಮನಗರದ ಜೊತೆಗೆ ಮಾಗಡಿ, ಕನಕಪುರದಲ್ಲಿಯೂ ಸಹ ಕೆಲ ಜೆಡಿಎಸ್ನ ಪ್ರಮುಖ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರಲು ಮುಂದಾಗಿದ್ದಾರೆ. ಡಿ.ಕೆ. ಶಿವಕುಮಾರ್ ಜೊತೆಗೆ ಸಂಸದ ಡಿ.ಕೆ. ಸುರೇಶ್ ಸಹ ಅಪರೇಷನ್ ಸ್ಟಾರ್ಟ್ ಮಾಡಿದ್ದಾರೆ.
ಮಾಜಿ ಜೆಡಿಎಸ್ ಶಾಸಕ ಕೆ. ರಾಜು ಕಾಂಗ್ರೆಸ್ ಸೇರ್ಪಡೆ:ಈಗ ರಾಮನಗರ-ಚನ್ನಪಟ್ಟಣದಲ್ಲಿ ನಗರಸಭೆ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ರಾಮನಗರದ ಮಾಜಿ ಜೆಡಿಎಸ್ ಶಾಸಕ ಕೆ. ರಾಜು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರಿದ್ದಾರೆ. ಇನ್ನು ಪಕ್ಷಕ್ಕೆ ಸೇರುವ ಮೊದಲು ನನಗೆ ಯಾವುದೇ ರಾಜಕೀಯ ಹುದ್ದೆ ಬೇಡ, ಅಧಿಕಾರ ಬೇಡ. ಪಕ್ಷದಲ್ಲಿ ಪ್ರಾಮಾಣಿಕತೆಯಿಂದ ದುಡಿಯುತ್ತೇನೆಂದು ಕೆ. ರಾಜು ತಿಳಿಸಿದ್ದಾರೆ ಎಂದು ಸ್ವತಃ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಈ ಬಗ್ಗೆ ಕೆ. ರಾಜು ಸಹ ಮಾತನಾಡಿ, ನಾನು ಜೆಡಿಎಸ್ನಲ್ಲಿಯೂ ಪ್ರಾಮಾಣಿಕನಾಗಿ ಕೆಲಸ ಮಾಡಿದ್ದೆ. ಆದರೆ ಕೆಲ ವಾತಾವರಣಗಳು ಇಷ್ಟವಾಗದ ಕಾರಣ ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ರಾಮನಗರದಲ್ಲಿ ಕಾಂಗ್ರೆಸ್ಗೆ ಬಲತುಂಬುವ ಜೊತೆಗೆ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರ ಪರವಾಗಿ ದುಡಿಯುತ್ತೇನೆ ಎಂದು ತಿಳಿಸಿದ್ದಾರೆ. ಕೆ. ರಾಜು ಈಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವುದು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.
ಇದನ್ನೂ ಓದಿ: Helpline - ಸಂಸದ ತೇಜಸ್ವಿ ಸೂರ್ಯರಿಂದ ಬೆಂಗಳೂರಿಗರಿಗೆ ಕೊರೋನಾ ಸಹಾಯವಾಣಿ; ಇಲ್ಲಿವೆ ನಂಬರ್ಸ್
ರಾಮನಗರ ಜಿಲ್ಲೆಯಲ್ಲಿ ಡಿ.ಕೆ. ಸುರೇಶ್ ಪ್ರಭಾವ ಹೆಚ್ಚು:
ಡಿಕೆ ಸುರೇಶ್ ಅವರು ಕರ್ನಾಟಕ ರಾಜ್ಯದಲ್ಲಿ ಈಗ ಏಕೈಕ ಕಾಂಗ್ರೆಸ್ ಸಂಸದರಾಗಿದ್ದಾರೆ. ಸುರೇಶ್ ಅವರಿಗೆ ಈಗ ರಾಮನಗರ ಜಿಲ್ಲೆಯಲ್ಲಿ ರಾಜಕೀಯವಾಗಿ ಈಗ ಶಕ್ತಿ ಹೆಚ್ಚಾಗಿದೆ. ಯಾಕೆಂದರೆ ರಾಮನಗರ - ಚನ್ನಪಟ್ಟಣ ನಗರಸಭೆ ಚುನಾವಣೆ ಬೆನ್ನಲ್ಲೇ ರಾಮನಗರದಲ್ಲಿ ಜೆಡಿಎಸ್ ಮುಖಂಡರೇ ಸಾಲುಸಾಲಾಗಿ ಕಾಂಗ್ರೆಸ್ ಗೆ ಸೇರಿದ್ದಾರೆ. ಇದು ಮುಂದಿನ ದಿನಗಳಲ್ಲಿ ಡಿ.ಕೆ. ಸುರೇಶ್ ಅವರ ಬಲ ಹೆಚ್ಚಿಸಲು ಸಹಕಾರಿಯಾಗಲಿದೆ.ಈ ಹಿನ್ನೆಲೆ ಜೆಡಿಎಸ್ ಪಕ್ಷ ರಾಮನಗರ ಜಿಲ್ಲೆಯಲ್ಲಿ ಭದ್ರವಾಗಿದ್ದರೂ ಸಹ ಪಕ್ಷದ ಸ್ಥಳೀಯ ಮುಖಂಡರು ಉನ್ನತ ನಾಯಕರ ನಡೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ಡಿ.ಕೆ. ಸುರೇಶ್ ಅವರಿಗೆ ಇದು ವರದಾನವಾಗಲಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಜೊತೆಗೆ ಜೆಡಿಎಸ್ ನಿಂದ ಬರುತ್ತಿರುವ ಮುಖಂಡರು ಸುರೇಶ್ ಪರವಾಗಿ ಕೆಲಸ ಮಾಡಲಿದ್ದು, ಇದು ರಾಜಕೀಯವಾಗಿ ಡಿ.ಕೆ. ಸುರೇಶ್ ಅವರಿಗೆ ಪ್ಲಸ್ ಆಗಲಿದೆ.
ಒಟ್ಟಾರೆ ಸದ್ಯ ರಾಮನಗರ ಜಿಲ್ಲೆಯಲ್ಲಿ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಪ್ರಭಾವದ ಮುಂದೆ ಹೆಚ್.ಡಿ. ಕುಮಾರಸ್ವಾಮಿ ಹವಾ ಕೊಂಚ ಕಡಿಮೆಯಾದ ರೀತಿ ಕಾಣುತ್ತಿದ್ದರೂ ಸಹ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ವರದಿ: ಎ.ಟಿ.ವೆಂಕಟೇಶ್
Published by:
Vijayasarthy SN
First published:
April 19, 2021, 4:01 PM IST