ಅಡಿಕೆ ಬೆಳೆಗಾರರಿಗೆ ವರದಾನವಾದ ಲಾಕ್​ಡೌನ್; ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಬೆಲೆ

ಮುಂದಿನ ಒಂದೆರಡು ತಿಂಗಳವರೆಗೆ ಅಡಿಕೆಗೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದ್ದು, ಕ್ಯಾಂಪ್ಕೋ ಸಂಸ್ಥೆ ಇದೇ ಸ್ಥಿರ ಧಾರಣೆ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಒಟ್ಟಿನಲ್ಲಿ ದೇಶಿ ಅಡಿಕೆ ಒಳ್ಳೆಯ ಗುಣಮಟ್ಟದ್ದಾಗಿದ್ದು, ಇಲ್ಲಿಯವರೆಗೂ ವಂಚಿತವಾಗಿದ್ದ ರೈತರಿಗೆ ಈಗ ಉತ್ತಮ ಬೆಲೆ ಸಿಗಲಾರಂಭಿಸಿದೆ.

news18-kannada
Updated:August 1, 2020, 8:23 PM IST
ಅಡಿಕೆ ಬೆಳೆಗಾರರಿಗೆ ವರದಾನವಾದ ಲಾಕ್​ಡೌನ್; ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಬೆಲೆ
ಸಾಂದರ್ಭಿಕ ಚಿತ್ರ
  • Share this:
ದಕ್ಷಿಣ ಕನ್ನಡ; ಲಾಕ್​ಡೌನ್ ನಿಂದ ಭಾಗಶಃ ಎಲ್ಲಾ ಬೆಳೆಗಾರರು ನಷ್ಟ ಅನುಭವಿಸಿದರೆ ಅಡಿಕೆ ಬೆಳೆಗಾರರಿಗೆ ಮಾತ್ರ ಲಾಕ್ ಡೌನ್ ವರದಾನವಾಗಿದೆ. ಲಾಕ್ ಡೌನ್ ನಿಂದಾಗಿ ಹೊರ ದೇಶಗಳಿಂದ ಬರುತ್ತಿದ್ದ ಅಕ್ರಮ ಅಡಿಕೆ ಆಮದಿಗೆ ಕಡಿವಾಣ ಬಿದ್ದಿದ್ದು, ಸ್ಥಳೀಯ ಅಡಿಕೆಗೆ ಭಾರೀ ಬೇಡಿಕೆ ಬಂದಿದೆ. ಅಡಿಕೆಯನ್ನು ಮಾರದೆ, ತಮಲ್ಲಿಯೇ ಉಳಿಸಿಕೊಂಡಿದ್ದ ಅಡಿಕೆ ಬೆಳೆಗಾರರಿಗೆ ಈಗ ಬಂಗಾರದ ಬೆಲೆ ಸಿಕ್ಕಿದೆ. ಅಡಿಕೆ ದರ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗದ ಅಡಿಕೆ ದರ ಈ ಬಾರಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೋನಾ ಕಾಲದಲ್ಲೇ ಅಡಿಕೆಗೆ ಬಂಗಾರದ ಬೆಲೆ ಬಂದಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಇದೀಗ ಈ ವಾಣಿಜ್ಯ ಬೆಳೆ ಅಡಿಕೆಗೆ ಬಂಗಾರದ ಬೆಲೆ ಲಭಿಸುತ್ತಿದೆ. ಕಳೆದ ಐದು ವರುಷಗಳ ಬಳಿಕ ದಾಖಲೆಯ ಬೆಲೆ ಅಡಿಕೆ ಬೆಳೆಗಾರರಿಗೆ ಸಿಗುತ್ತಿದೆ. ಈ ಹಿಂದೆ ಕೆ.ಜಿ.ಗೆ 200ರಿಂದ 250 ರೂ.ಗೆ ಖರೀದಿಯಾಗುತ್ತಿದ್ದ ಅಡಿಕೆಗೆ ಈಗ 400 ರೂ. ಲಭಿಸುತ್ತಿದೆ. ಕ್ಯಾಂಪ್ಕೊ ಶಾಖೆಗಳಲ್ಲಿ ಹೊಸ ಅಡಿಕೆ ದರ 360 ರೂ.ಗೆ ಖರೀದಿ ಆಗಿದೆ. ಇದೇ ವೇಳೆ ಹಳೆ ಅಡಿಕೆಗೆ 390 ರೂ.ವರೆಗೆ ದರ ಏರಿದೆ. ಇತ್ತ ಖಾಸಗಿ ವಲಯದಲ್ಲಿ ಹಳೇ ಅಡಿಕೆಗೆ 400ರಿಂದ 410 ರೂ.ವರೆಗೂ ಖರೀದಿ ಆಗಿದೆ.

ಕೊರೋನಾ ಲಾಕ್‌ಡೌನ್‌ ಬಳಿಕ ದೇಶಿ ಅಡಿಕೆ ಬೆಳೆಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ದೇಶದ ಗಡಿಗಳಲ್ಲಿ ಲೀಗಲ್, ಇಲ್ಲೀಗಲ್ ಅಡಿಕೆ ಆಮದಿಗೆ ಕಡಿವಾಣ ಹಾಕಿರುವುದೇ ದೇಶಿ ಅಡಿಕೆಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಈ ಹಿಂದೆ ಇಂಡೋನೇಷ್ಯಾ, ಬರ್ಮಾ, ನೇಪಾಳ, ಬಾಂಗ್ಲಾದೇಶಗಳಿಂದ ಈಶಾನ್ಯ ರಾಜ್ಯಗಳ ಗಡಿಗಳ ಮೂಲಕ ವ್ಯಾಪಕ ಪ್ರಮಾಣದ ಅಡಿಕೆ ಅಕ್ರಮವಾಗಿ ಆಮದಾಗುತ್ತಿತ್ತು. ಈ ಕಳ್ಳ ಸಾಗಾಟದಿಂದಲೇ ಇದುವರೆಗೆ ದೇಶದ ಅಡಿಕೆ ಬೆಳೆಗೆ ಮಾರುಕಟ್ಟೆಯಲ್ಲಿ ಧಾರಣೆ ಏರುತ್ತಿರಲಿಲ್ಲ. ಆದರೆ ಕೊರೋನಾ ಲಾಕ್‌ಡೌನ್‌ ಕಾರಣಕ್ಕೆ ಎಲ್ಲ ಗಡಿಗಳು ಬಂದ್‌ ಆಗಿದ್ದರಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ.

ಇದನ್ನು ಓದಿ: ಒಂದೇ ಕುಟುಂಬದ 11 ಜನ ಆಸ್ಪತ್ರೆಗೆ ದಾಖಲಾಗದೆ, ಮನೆಯಲ್ಲಿದ್ದೆ ಹಿಮ್ಮೆಟ್ಟಿಸಿದರು ಕೊರೋನಾ ಸೋಂಕು

ಮುಂದಿನ ಒಂದೆರಡು ತಿಂಗಳವರೆಗೆ ಅಡಿಕೆಗೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದ್ದು, ಕ್ಯಾಂಪ್ಕೋ ಸಂಸ್ಥೆ ಇದೇ ಸ್ಥಿರ ಧಾರಣೆ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಒಟ್ಟಿನಲ್ಲಿ ದೇಶಿ ಅಡಿಕೆ ಒಳ್ಳೆಯ ಗುಣಮಟ್ಟದ್ದಾಗಿದ್ದು, ಇಲ್ಲಿಯವರೆಗೂ ವಂಚಿತವಾಗಿದ್ದ ರೈತರಿಗೆ ಈಗ ಉತ್ತಮ ಬೆಲೆ ಸಿಗಲಾರಂಭಿಸಿದೆ.
Published by: HR Ramesh
First published: August 1, 2020, 8:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading