ಅತಿಯಾದ ಮಳೆಯಿಂದ ಅತಿವೃಷ್ಟಿ ; ಮುಂಗಾರು ಕೈಕೊಟ್ಟು ಕಂಗಾಲಾದ ಕಲಬುರ್ಗಿ ರೈತ

ಜಿಲ್ಲೆಯಲ್ಲಿ ಅನೇಕರು ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಅನೇಕರು ನಗರ ಬಿಟ್ಟು ಹಳ್ಳಿಗೆ ಹೋಗಿ ಕೃಷಿ ಮಾಡುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಇದೀಗ ಕೈಗೆ ಬಂದ ತುತ್ತಿಗೆ ಬಾಯಿಗೆ ಬಾರದಂತಾಗಿದೆ

news18-kannada
Updated:September 13, 2020, 7:36 PM IST
ಅತಿಯಾದ ಮಳೆಯಿಂದ ಅತಿವೃಷ್ಟಿ ; ಮುಂಗಾರು ಕೈಕೊಟ್ಟು ಕಂಗಾಲಾದ ಕಲಬುರ್ಗಿ ರೈತ
ಮಳೆಯಿಂದ ಹಾನಿಯಾಗಿರುವ ಬೆಳೆ
  • Share this:
ಕಲಬುರ್ಗಿ(ಸೆಪ್ಟೆಂಬರ್​. 13): ಜಿಲ್ಲೆಯಲ್ಲಿ ಈ ವರ್ಷ ವರುಣ ವಿರಾವನ್ನೇ ನೀಡುತ್ತಿಲ್ಲ. ಮುಂಗಾರು ಆರಂಭದಿಂದಲೂ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ  ಕಲಬುರ್ಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರ ಪರಿಣಾಮ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳದಿದ್ದ ಉದ್ದು ಮತ್ತು ಹೆಸರು ಬೆಳೆ ನೆಲದ ಪಾಲಾಗುತ್ತಿದೆ. ಅನೇಕ ಕಡೆ ಜಮೀನಿಗೆ ನುಗ್ಗಿದ ಮಳೆ ನೀರು ಬೆಳೆಗಳನ್ನು ಕೊಳೆಯುವಂತೆ ಮಾಡಿದೆ.ಕಲಬುರ್ಗಿ ಹೇಳಿ ಕೇಳಿ ಬಯಲು ಸೀಮೆ. ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಬರ ಎನ್ನುವ ಪರಿಸ್ಥಿತಿ. ಆದರೆ, ಈ ಬಾರಿ ಮಳೆರಾಯನ ಕೃಪೆ ಸ್ವಲ್ಪ ಹೆಚ್ಚಿಗೆ ಆಗಿದೆ. ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಲೇ ಇದೆ. ಕಳೆದ ರಾತ್ರಿಯೂ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಅಲ್ಪಾವಧಿ ಬೆಳೆಗಳಾದ ಉದ್ದು, ಹೆಸರು, ಎಳ್ಳು ಇತ್ಯಾದಿ ಬೆಳೆಗಳು ಕಟಾವಿಗೆ ಬಂದು ನಿಂತಲ್ಲೇ ಕೊಳೆಯಲಾರಂಭಿಸಿವೆ. ಮತ್ತೊಂದಡೆ ನೀರಲ್ಲಿ ನಿಂತು ಬೆಳೆ ಕೊಳೆಯುವ ಹಂತಕ್ಕೆ ಹೋಗಿದೆ. ಇದರಿಂದಾಗಿ ರೈತ ತೀವ್ರ ಕಂಗಾಲಾಗಿದ್ದಾನೆ.

ಕಲಬುರ್ಗಿ, ಚಿಂಚೋಳಿ, ಕಾಳಗಿ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಇದೇ ಪರಿಸ್ಥಿತಿ ಕಾಣಸಿಗಲಾರಂಭಿಸಿದೆ. ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ಜಿಲ್ಲೆಯ ರೈತರು ಕಂಗಾಲಾಗಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಮಳೆಗಾಹುತಿಯಾಗಿತ್ತು. ಕೆಲವರು ಅದರಲ್ಲಿಯೇ ಅಷ್ಟಿಟ್ಟು ಬೆಳೆಯನ್ನು ಕಟಾವು ಮಾಡಿಕೊಂಡಿದ್ದರು. ಆದರೆ, ಮಳೆರಾಯ ಮತ್ತೆ ಮುಂದುವರೆದಿದ್ದಾನೆ. ಹೀಗಾಗಿ ಕಟಾವಿಗೆ ಬಂದಿರುವ ಹೆಸರು ಮತ್ತು ಉದ್ದನ್ನು ರಾಶಿ ಮಾಡಲಾರದ ಅಸಹಾಯಕತೆಯಲ್ಲಿ ರೈತನಿದ್ದಾನೆ.

ಮಳೆಗೆ ಹೆಸರು ಮತ್ತು ಉದ್ದು ನಿಂತಲ್ಲೇ ಹಾಳಾಗಿ ಹೋಗುತ್ತಿದೆ. ಜಿಲ್ಲೆಯಲ್ಲಿ ಅನೇಕರು ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಅನೇಕರು ನಗರ ಬಿಟ್ಟು ಹಳ್ಳಿಗೆ ಹೋಗಿ ಕೃಷಿ ಮಾಡುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಇದೀಗ ಕೈಗೆ ಬಂದ ತುತ್ತಿಗೆ ಬಾಯಿಗೆ ಬಾರದಂತಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 473 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ  650 ಮಿಲಿ ಮೀಟರ್ ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ರೈತರಿಗೆ ದೊಡ್ಡ ಕುತ್ತಾಗಿ ಪರಿಣಮಿಸಿದೆ. ಮಳೆಯಿಂದಾಗಿ ಜಮೀನಿನಲ್ಲಿಯೇ ಹೆಸರು ಮತ್ತು ಉದ್ದು ಹಾಳಾಗಿ ಹೋಗುತ್ತಿದೆ.

ಇದನ್ನೂ ಓದಿ :  ಹುಬ್ಬಳ್ಳಿಗೂ ವ್ಯಾಪಿಸಿದ ಡ್ರಗ್ಸ್ ಜಾಲದ ನಂಟು : ಸಿಸಿಬಿಯಿಂದ ಕಾಂಗ್ರೆಸ್ ಮುಖಂಡನ ವಿಚಾರಣೆ

ಮಳೆಯಿಂದ ಕಟಾವು ಮಾಡಲು ಆಗುತ್ತಿಲ್ಲಾ. ಮತ್ತೊಂದಡೆ ಮಳೆಯಿಂದಾಗಿ ಬಳ್ಳಿಯಲ್ಲಿಯೇ ಕಾಯಿಗಳು ಹಾಳಾಗಿ ಹೋಗುತ್ತಿವೆ. ಸತತ ಬರಗಾಲಕ್ಕೆ ತುತ್ತಾಗುವ ಕಲಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಾಗಿ ರೈತರಿಗೆ ಹೆಚ್ಚಿನ ಹಾನಿಯನ್ನುಂಟು ಮಾಡಿದೆ. ಅಲ್ಪಾವಧಿ ಬೆಳೆ ಸಂಪೂರ್ಣ ನೆಲ ಕಚ್ಚಿವೆ. ಇದೇ ವೇಳೆ ಅಧಿಕ ಮಳೆಯಿಂದಾಗಿ ತೊಗರಿಯೂ ಹಾನಿಗೆ ತುತ್ತಾಗಲಾರಂಭಿಸಿದೆ.

ಅಧಿಕ ತೇವಾಂಶವಾದರೆ ತೊಗರಿಗೆ ನೆಟೆ ರೋಗ ಸೇರಿ ಹಲವು ರೋಗಗಳು ಬರುವುದು ಗ್ಯಾರಂಟಿ. ನೀರು ಸಂಗ್ರಹಗೊಂಡಿರುವ ತಗ್ಗು ಪ್ರದೇಶದಲ್ಲಿ ತೊಗರಿ ಬೇರು ಕೊಳೆತು ಗಿಡ ಒಣಗಲಾಂಭಿಸಿದೆ. ಜಿಲ್ಲೆಯಲ್ಲಿ 10 ಸಾವಿರ ಎಕರೆಗೆ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಗೆ ತುತ್ತಾಗಿದೆ. ಅತಿಯಾದ ಮಳೆಯಿಂದಾಗಿ ರೈತ ತೀವ್ರ ನಷ್ಟಕ್ಕೆ ಗುರಿಯಾಗಿದ್ದಾನೆ. ಕೂಡಲೇ ಹಾನಿಯ ಸಮೀಕ್ಷೆ ನಡೆಸಿ, ಬೆಳೆ ಪರಿಹಾರ ಕಟ್ಟಿಕೊಡಬೇಕೆಂದು ರೈತ ಆಗ್ರಹಿಸಿದ್ದಾನೆ. ಜೊತೆಗೆ. ಹಿಂಗಾರು ಬಿತ್ತನೆಗೆ ಬೀಜ, ಗೊಬ್ಬರದ ಅನುಕೂಲ ಮಾಡಿಕೊಡುವಂತೆಯೂ ರೈತ ಸಮುದಾಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
Published by: G Hareeshkumar
First published: September 13, 2020, 7:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading