ಬ್ಯಾಂಕ್ ಎಡವಟ್ಟಿನಿಂದ ಬೇರೆಯವರ ಖಾತೆಗೆ ಪಿಂಚಣಿ ಜಮಾ ; ತಹಶೀಲ್ದಾರ್ ಮಧ್ಯಸ್ತಿಕೆಯಿಂದ ಕೊನೆಗೂ ವಿಕಲಚೇತನನಿಗೆ ಸಿಕ್ಕ ನ್ಯಾಯ

ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಬ್ಯಾಂಕಿಗೆ ನೀಡಿದ ಪತ್ರದ ಹಿನ್ನೆಲೆಯಲ್ಲಿ ಬ್ಯಾಂಕ್ ಮುಖ್ಯಸ್ಥರ ಸಮ್ಮುಖದಲ್ಲಿ ಕುಸುಮಾಧರ ಗೌಡರು ಚೆಕ್ಕು ಮುಖಾಂತರ ಫಲಾನುಭವಿಯ ಖಾತೆಗೆ 6 ಸಾವಿರ ರೂಪಾಯಿಯನ್ನು ಜಮೆ ಮಾಡಿದ್ದಾರೆ.

news18-kannada
Updated:September 21, 2020, 3:06 PM IST
ಬ್ಯಾಂಕ್ ಎಡವಟ್ಟಿನಿಂದ ಬೇರೆಯವರ ಖಾತೆಗೆ ಪಿಂಚಣಿ ಜಮಾ ; ತಹಶೀಲ್ದಾರ್ ಮಧ್ಯಸ್ತಿಕೆಯಿಂದ ಕೊನೆಗೂ ವಿಕಲಚೇತನನಿಗೆ ಸಿಕ್ಕ ನ್ಯಾಯ
ಫಲಾನುಭವಿ ಲಕ್ಷ್ಮಣ ಗೌಡ
  • Share this:
ಮಂಗಳೂರು(ಸೆಪ್ಟೆಂಬರ್​. 21): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಪಂಚಾಯತ್ ಸಿಬ್ಬಂದಿಗಳು ಮಾಡಿದ್ದ ಎಡವಟ್ಟಿನಿಂದಾಗಿ ಇನ್ನೊಂದು ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದ ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣ ಗೌಡ ಎಂಬುವವರ ಕಳೆದ ಹತ್ತು ತಿಂಗಳ ಅಂಗವಿಕಲ ವೇತನ ಶನಿವಾರ ಫಲಾನುಭವಿಯ ಖಾತೆಗೆ ಜಮೆಯಾಗಿದೆ. ಅರ್ಜಿಯ ಜೊತೆ ನೀಡಲಾದ ವಿಜಯ ಬ್ಯಾಂಕ್ ಕಾಣಿಯೂರು ಶಾಖೆಯ ತನ್ನ ಖಾತೆಯ ವಿವರವನ್ನು(ಖಾತೆ ಸಂಖ್ಯೆ- 130901011001087) ಸಿಬ್ಬಂದಿ ಕಂಪ್ಯೂಟರ್​​ಗೆ ದಾಖಲಿಸುವ ಸಂದರ್ಭ ಕೊನೆಯ ಸಂಖ್ಯೆ 7 ರ ಬದಲಾಗಿ 1 ಎಂದು ನಮೂದಿಸಿದ ಪರಿಣಾಮ ಲಕ್ಷ್ಮಣ ಗೌಡರಿಗೆ ಜಮೆ ಆಗಬೇಕಾದ ಪ್ರತಿ ತಿಂಗಳ ರೂಪಾಯಿ 600 ವೇತನ ಹಣ ಅದೇ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಕಾಣಿಯೂರು ಗ್ರಾಮದ ಬೀರ್ನೆಲು ನಿವಾಸಿ ಕುಸುಮಾಧರ ಗೌಡ ಎಂಬುವವರ ಖಾತೆಗೆ ಜಮೆಯಾಗಿತ್ತು. ಈ ಬಗ್ಗೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಬ್ಯಾಂಕಿಗೆ ನೀಡಿದ ಪತ್ರದ ಹಿನ್ನೆಲೆಯಲ್ಲಿ ಬ್ಯಾಂಕ್ ಮುಖ್ಯಸ್ಥರ ಸಮ್ಮುಖದಲ್ಲಿ ಕುಸುಮಾಧರ ಗೌಡರು ಚೆಕ್ಕು ಮುಖಾಂತರ ಫಲಾನುಭವಿಯ ಖಾತೆಗೆ 6 ಸಾವಿರ ರೂಪಾಯಿಯನ್ನು ಜಮೆ ಮಾಡಿದ್ದಾರೆ.

ವೇತನ ಜಮೆಯಾಗುತ್ತಿದ್ದ ಖಾತೆದಾರರ ವಿಳಾಸವನ್ನು ಬ್ಯಾಂಕಿನಿಂದ  ಪಡೆದು ಲಕ್ಷ್ಮಣ ಗೌಡರು ಖಾತೆದಾರ ಕುಸುಮಾಧರ ಗೌಡರನ್ನು ಸಂಪರ್ಕಿಸಿದ್ದರು. ಅಲ್ಲದೆ ಅವರ ಸಂಪರ್ಕ ಸಂಖ್ಯೆಯನ್ನು ಕಡಬ ತಾಲೂಕು ಕಛೇರಿಗೂ ನೀಡಿದ್ದರು. ಆದರೂ ಕಛೇರಿಯಿಂದ  ಯಾವುದೇ ಸ್ಪಂದನೆ ದೊರೆಯಲಿಲ್ಲ.

ಈ ಬಗ್ಗೆ ಮಾಧ್ಯಮಗಳ ವರದಿ ಮಾಡಿದ ಬಳಿಕ ಎಚ್ಚೆತ್ತ ಅಧಿಕಾರಿಗಳು ಬ್ಯಾಂಕಿಗೆ ಪತ್ರ ಬರೆದು ಜಮೆಯಾದ ಹಣ ವಾಪಸ್ಸು ನೀಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಬ್ಯಾಂಕು ಅಧಿಕಾರಿಗಳಿಗೆ ತಿಳಿಸಿತ್ತು. ಅಂತೆಯೇ ಫಲಾನುಭವಿ ಲಕ್ಷ್ಮಣ ಗೌಡ ಬೊಮ್ಮಳಿಕೆ ಅಂಗವಿಕಲ ವೇತನ ಫಲಾನುಭವಿ ಖಾತೆಗೆ ಹಣ ವಾಪಸ್ಸಾಗಿದೆ.

ಅಂಗವಿಕಲ ವೇತನಕ್ಕೆ ಅರ್ಜಿ ಹಾಕಿದ ಬಳಿಕ 2019ರ ಜುಲೈ 1 ರಂದು ವೇತನಕ್ಕೆ ಅರ್ಹರೆಂದು ಮಂಜೂರಾತಿ ಪತ್ರ ದೊರಕಿತ್ತಾದರೂ ಖಾತೆಗೆ ಹಣ ಜಮಾ ಆಗದಿರುವುದರಿಂದ ಕಡಬ ತಾಲೂಕು ಕಛೇರಿಯಲ್ಲಿ ಪರಿಶೀಲಿಸಿದಾಗ ಕಂಪ್ಯೂಟರಿನಲ್ಲಿ ದಾಖಲಿಸಿರುವ ತನ್ನ ಖಾತೆ ನಂಬರ್​ ಅಲ್ಲ ‌ಎಂದು ಖಾತರಿಯಾಗಿತ್ತು. ಇದೀಗ ಖಾತೆಯ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಫಲಾನುಭವಿ ಲಕ್ಷ್ಮಣ ಗೌಡ ನಿಟ್ಟುಸಿರು ಬಿಟ್ಟಿದ್ದಾರೆ.

 ಘಟನೆ ಏನು ?

ಅನಾರೋಗ್ಯದಿಂದ ಬಳಲುತ್ತಿರುವ ಲಕ್ಷ್ಮಣ ಗೌಡರದ್ದು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ. ಮನೆಯಲ್ಲಿ ಅಷ್ಟೇನು ಆದಾಯವಿಲ್ಲ. ಲಕ್ಷ್ಮಣ ಗೌಡರಿಗೆ ದೃಷ್ಟಿ ದೋಷದ ಹಿನ್ನೆಲೆ ಅಂಗವಿಕಲ ವೇತನಕ್ಕೆ ಅರ್ಜಿ ಹಾಕಿದ್ದರು. ಎರಡು ವರ್ಷಗಳ ಹಿಂದೆ ಬೆನ್ನು ಮೂಲೆಯ ಶಸ್ತ್ರ ಚಿಕಿತ್ಸೆ ನಡೆದು ಲಕ್ಷಾಂತರ ರೂಪಾಯಿ ಸಾಲದಲ್ಲಿದ್ದಾರೆ. ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದರೂ, ದುಡಿಯುವ ಚೈತನ್ಯವನ್ನು ಮಾತ್ರ ಕಳೆದುಕೊಂಡಿದ್ದಾರೆ. ಈಗಲೂ ಚಿಕಿತ್ಸೆ ಮುಂದುವರಿಸುತ್ತಿದ್ದು ತಿಂಗಳಿಗೆ 2.500 ರೂಪಾಯಿ ವೆಚ್ಚ ತಗಲುತ್ತದೆ. ಲಕ್ಷ್ಮಣ ಗೌಡರ ಹೆಂಡತಿ ಮನೆಯ ಖರ್ಚು ಸಾಗಿಸಲು ರಾತ್ರಿ ಹಗಲೆನ್ನದೆ ಬೀಡಿ ಕಟ್ಟುತ್ತಾ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇದನ್ನೂ ಓದಿ : Karnataka Farmers Protest: ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿಂದು ರೈತರ ಪ್ರತಿಭಟನೆಲಕ್ಷ್ಮಣ ಗೌಡರಿಗೆ ಇಬ್ಬರು ಮಕ್ಕಳ ಪೈಕಿ ಒಬ್ಬಾತ ದೀಕ್ಷಿತ್ ಸುಳ್ಯದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ರಜಾ ದಿನಗಳಲ್ಲಿ ಅಡಕೆ ಸುಳಿಯುವ ಕೂಲಿ ಕೆಲಸ ಮಾಡಿಕೊಂಡು ತಮ್ಮ ವಿದ್ಯಾಭ್ಯಾಸದ ಖರ್ಚಿಗೆ ಸ್ವಲ್ಪ ಮಟ್ಟಿನ ಆದಾಯವನ್ನು ಭರಿಸಿಕೊಳ್ಳುತ್ತಿದ್ದಾನೆ. ಎರಡನೆಯವ ಗೌತಮ್ ಕಾಣಿಯೂರು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 10 ನೇ ತರಗತಿ ಅಭ್ಯಸುತ್ತಿದ್ದ ಸಂದರ್ಭ 2019 ರ ಸೆಪ್ಟೆಂಬರ್​ 5 ರಂದು ಶಾಲಾ ಆಟದ ಮೈದಾನದ ಪಕ್ಕದ ಜಾಗದಲ್ಲಿರುವ ಇಂಗು ಗುಂಡಿಗೆ ಬಿದ್ದು ಮೃತಪಟ್ಟಿದ್ದ.

ಆರ್ಥಿಕ ಸಂಕಷ್ಟ , ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಣ ಗೌಡರಿಗೆ ಗೌತಮ್ ಸಾವು ಇನ್ನಷ್ಟು ಜರ್ಜರಿತವಾಗಿಸಿದೆ. ಈ ಮದ್ಯೆ ಅಂಗವಿಕಲ ವೇತನ ಹಣ ಜಮೆ ಬಗ್ಗೆ ಗೊಂದಲ ಏರ್ಪಟ್ಟಿರುವುದು ಇನ್ನಷ್ಟು ಸಂಕಷ್ಟಕ್ಕೀಡುಮಾಡಿತ್ತು.
Published by: G Hareeshkumar
First published: September 21, 2020, 3:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading