ಕಾರವಾರ ನಗರಸಭೆ: ಬಿಜೆಪಿ-ಜೆಡಿಎಸ್ ಮೈತ್ರಿ - ಅಚ್ಚರಿ ಮೂಡಿಸಿದ ಆನಂದ್ ಅಸ್ನೋಟಿಕರ್ ನಡೆ

ನವೆಂಬರ್ 1ರಂದು ನಡೆಯಲಿರುವ ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದೆ. ಇದರೊಂದಿಗೆ ಕಾರವಾರದಲ್ಲಿ ಬಿಜೆಪಿ ಆಡಳಿತ ಬರುವು ನಿಶ್ಚಿತವೆನಿಸಿದೆ.

news18-kannada
Updated:October 30, 2020, 7:31 PM IST
ಕಾರವಾರ ನಗರಸಭೆ: ಬಿಜೆಪಿ-ಜೆಡಿಎಸ್ ಮೈತ್ರಿ - ಅಚ್ಚರಿ ಮೂಡಿಸಿದ ಆನಂದ್ ಅಸ್ನೋಟಿಕರ್ ನಡೆ
ಕಾರವಾರ ನಗರಸಭೆ
  • Share this:
ಕಾರವಾರ: ಕಾರವಾರ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಆಡಳಿತ ನಡೆಸಲು ಬಿಜೆಪಿಗೆ ಜೆಡಿಎಸ್ ಬೇಷರತ್ ಬೆಂಬಲ ನೀಡಲಿದ್ದು ಊಹೆಗೂ ಮೀರಿ ಬೆಳವಣಿಗೆ ನಡೆದಿದೆ... 31 ಸದಸ್ಯ ಬಲದ ಕಾರವಾರ ನಗರಸಭೆಯಲ್ಲಿ ತಲಾ 11 ಸ್ಥಾನವನ್ನ ಕಾಂಗ್ರೆಸ್ ಹಾಗೂ ಬಿಜೆಪಿ ಗೆದ್ದಿದ್ದರೆ, ಜೆಡಿಎಸ್ 4 ಹಾಗೂ ಪಕ್ಷೇತರರು ಎರಡು ಸ್ಥಾನದಲ್ಲಿ ಗೆದ್ದಿದ್ದರು. ಇನ್ನು ಗೆದ್ದಂತಹ ಇಬ್ಬರು ಪಕ್ಷೇತರರು ಆನಂದ್ ಅಸ್ನೋಟಿಕರ್ ಜೊತೆ ಗುರುತಿಸಿಕೊಂಡಿದ್ದು, ಆರು ಜನ ಸದಸ್ಯರು ಆನಂದ್ ಒಟ್ಟಿಗೆ ಇದ್ದ ಹಿನ್ನಲೆಯಲ್ಲಿ ಅಧಿಕಾರಕ್ಕೆ ಯಾರೇ ಬರಲು ಜೆಡಿಎಸ್ ಬೆಂಬಲ ಅನಿವಾರ್ಯವಾಗಿತ್ತು. ನವೆಂಬರ್ 1ರಂದು ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಜೆಡಿಎಸ್ ಪಕ್ಷದ ನಾಲ್ವರು ಹಾಗೂ ಇಬ್ಬರು ಪಕ್ಷೇತರರು ಬಿಜೆಪಿಗೆ ಬೇಷರತ್ ಬೆಂಬಲ ಕೊಡಲಿದ್ದಾರೆ. ನಗರಸಭೆಯ ಸಂಪೂರ್ಣ ಆಡಳಿತವನ್ನ ಬಿಜೆಪಿಗರೇ ಮಾಡಲಿದ್ದು, ನಾವು ಬಾಹ್ಯ ಬೆಂಬಲವನ್ನ ಕೊಡಲಿದ್ದೇವೆ ಎಂದು ಆನಂದ್ ಅಸ್ನೋಟಿಕರ್ ಘೋಷಿಸಿದ್ದಾರೆ.

“ನಗರಸಭೆ ಚುನಾವಣೆಯಾಗಿ ಎರಡು ವರ್ಷವಾದರೂ ಸದಸ್ಯರಿಗೆ ಅಧಿಕಾರ ಸಿಗದೇ ಇದ್ದದ್ದು ಬೇಸರ ತಂದಿದೆ. ಈಗ ಚುನಾವಣೆ ನಡೆಸಲು ನಿರ್ಧರಿಸಿದ್ದು, ಕಾರವಾರದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲ ಕೊಡಲು ನಿರ್ಧರಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಹೆಚ್ಚಿನ ಅನುದಾನ ತರಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಬೇಡಿಕೆ ಇಲ್ಲದೇ ಬೆಂಬಲ ಕೊಡಲು ನಿರ್ಧರಿಸಿದ್ದೇವೆ” ಎಂದು ಆನಂದ್ ಅಸ್ನೋಟಿಕರ್ ಸ್ಪಷ್ಟಪಡಿಸಿದ್ಧಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ನಗರಸಭೆ ಬಿಜೆಪಿ ತೆಕ್ಕೆಗೆ : ಬಹುಮತ ಇದ್ದರೂ ಸೋತು ಮುಖಭಂಗ ಅನುಭವಿಸಿದ ಕಾಂಗ್ರೆಸ್

ಇನ್ನು, ಒಂದು ವರ್ಷ ಕಾಲ ನಾವು ಬಿಜೆಪಿಗೆ ಬಾಹ್ಯ ಬೆಂಬಲ ನೀಡಲಿದ್ದೇವೆ. ಈ ಅವಧಿಯಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಯಾಗಬೇಕು. ಕೋಣೆನಾಲ ಸಮಸ್ಯೆ ಪರಿಹರಿಸಬೇಕು. ಮಾಲಾದೇವಿ ಮೈದಾನ ಅಭಿವೃದ್ಧಿಪಡಿಸಬೇಕು. ಒಂದು ವರ್ಷದ ಅವಧಿಯಲ್ಲಿ ಈ ಬೇಡಿಕೆಗಳಲ್ಲಿ ಯಾವುದಾದರೂ ಎರಡನ್ನು ಮಾಡಿದರೆ ನಗರಸಭೆಯ ಸಂಪೂರ್ಣ ಆಡಳಿತದ ಅವಧಿಯವರೆಗೆ ಅವರಿಗೆ ಬೆಂಬಲ ನೀಡಲು ಸಿದ್ಧರಿದ್ದೇವೆ. ನನ್ನ ಜೊತೆ ಗುರುತಿಸಿಕೊಂಡ ಆರು ಸದಸ್ಯರು ಚರ್ಚೆ ನಡೆಸಿ ಕಾರವಾರದ ಅಭಿವೃದ್ಧಿ ಎಂಬ ಒಂದೇ ಉದ್ದೇಶದಿಂದ ಆಸೆಗಳನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ಡಾ. ನಿತಿನ್ ಪಿಕಳೆಯವರನ್ನ ಆಯ್ಕೆಗೊಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಹಿರಿಯರಾದ ಪಿಕಳೆಯವರಿಗೆ ಸಾಕಷ್ಟು ಅನುಭವವಿದ್ದು, ಉತ್ತಮ ಆಡಳಿತವನ್ನ ಕೊಡುವ ನಿರೀಕ್ಷೆ ಇದೆ ಎಂದು ಮಾಜಿ ಕಾಂಗ್ರೆಸ್ಸಿಗರೂ ಆದ ಅಸ್ನೋಟಿಕರ್ ಹೇಳಿದ್ದಾರೆ.

ಇದನ್ನೂ ಓದಿ: Karnataka Bypolls 2020: ರಂಗೇರಿದ ಚುನಾವಣಾ ಕಣದಲ್ಲಿ ಜಾಗ್ವಾರ್ ಮಿಂಚಿನ ಪ್ರಚಾರ

ಜೆಡಿಎಸ್ ಬೆಂಬಲ ನೀಡಿರುವುದು ಸ್ವಾಗತಾರ್ಹ: ರೂಪಾಲಿ ನಾಯ್ಕ

ಕಾರವಾರ ನಗರಸಭೆಯಲ್ಲಿ ಬಿಜೆಪಿ ಆಡಳಿತ ನಡೆಸಲು ಜೆಡಿಎಸ್ ಬೆಂಬಲ ನೀಡಿರುವುದು ಸ್ವಾಗತಾರ್ಹ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ. ನಗರಸಭೆಯಲ್ಲಿ ಉತ್ತಮ ಆಡಳಿತ ಮುಂದಿನ ದಿನದಲ್ಲಿ ಕೊಡಲಿದೆ. ಬೆಂಬಲ ನೀಡಿದ ಎಲ್ಲಾ ಸದಸ್ಯರನ್ನ ಒಟ್ಟಿಗೆ ಕರೆದುಕೊಂಡು ಹೋಗಿ ಆಡಳಿತವನ್ನ ನಡೆಸಲಿದ್ದೇವೆ. ಎಲ್ಲರೂ ಕುಳಿತು ಚರ್ಚೆ ನಡೆಸಿಯೇ ತಿರ್ಮಾನಗಳನ್ನ ತೆಗೆದುಕೊಳ್ಳಲಿದ್ದೇವೆ. ಮುಂದಿನ ದಿನದಲ್ಲಿ ಕಾರವಾರ ನಗರಸಭೆ ಮಾದರಿ ನಗರಸಭೆ ಎನ್ನುವ ಹೆಗ್ಗಳಿಕೆ ಪಡೆಯಬೇಕೆಂಬುದು ನಮ್ಮ ಉದ್ದೇಶ ಎಂದಿದ್ದಾರೆ.ಊಹೆಗೂ ಮೀರಿ ನಡೆದ ಆನಂದ್:

ಬಿಜೆಪಿ ಅಂದ್ರೆ ಸಿಡಿಮಿಡಿಗೊಳ್ಳುವ ಆನಂದ್ ಅಸ್ನೋಟಿಕರ್ ಈಗ ಬಿಜೆಪಿ ಜೊತೆ ಕೈ ಜೋಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ರಾಜ್ಯದಲ್ಲಿ ಹಾವು ಮುಂಗುಸಿ ಅಂತಿರುವ ಬಿಜೆಪಿ ಮತ್ತು ಜೆಡಿಎಸ್ ಕಾರವಾರ ನಗರಸಭೆಯ ಅಧಿಕಾರಕ್ಕಾಗಿ ಒಂದಾಗಿರೋದು ಆನಂದ್ ನಡೆ ಬಗ್ಗೆ ಜನ ಅಚ್ಚರಿ ಪಡುತ್ತಿದ್ದಾರೆ.

ವರದಿ: ದರ್ಶನ್ ನಾಯ್ಕ್
Published by: Vijayasarthy SN
First published: October 30, 2020, 7:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading