ಚಿತ್ರದುರ್ಗದ ಐಐಎಸ್​ಸಿಯಿಂದ ಹೊಸ ಶೈಲಿ ಇಟ್ಟಿಗೆ; ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ

ಚಳ್ಳಕೆರೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಹಲವು ತಂತ್ರಜ್ಞಾನ ಆವಿಷ್ಕಾರಗಳಿಗೆ ಹೆಸರಾಗಿದೆ. ಇದೀಗ ಕಡಿಮೆ ಖರ್ಚಿನಲ್ಲಿ ಕಟ್ಟಡ ನಿರ್ಮಿಸುವ ಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿ ಹಲವು ಕಡೆ ಪ್ರಯೋಗವನ್ನೂ ಮಾಡಿದೆ.

news18-kannada
Updated:September 22, 2020, 9:36 AM IST
ಚಿತ್ರದುರ್ಗದ ಐಐಎಸ್​ಸಿಯಿಂದ ಹೊಸ ಶೈಲಿ ಇಟ್ಟಿಗೆ; ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
ಚಳ್ಳಕೆರೆಯ ಐಐಎಸ್​ಸಿ ವಿಜ್ಞಾನಿಗಳು ಆವಿಷ್ಕರಿಸಿದ ತಂತ್ರಜ್ಞಾನದಿಂದ ನಿರ್ಮಾಣವಾದ ಕಟ್ಟಡ
  • Share this:
ಚಿತ್ರದುರ್ಗ(ಸೆ. 22): ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಸಮೀಪದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಜಿಲ್ಲೆಗೇ ವಿಶೇಷ. ಇಲ್ಲಿನ ಸೆಂಟರ್ ಫಾರ್ ಸೆಸ್ಟೈನಬಲ್ ಟೆಕ್ನಾಲಜೀಸ್ (ಸಿಎಸ್​ಟಿ) ವಿಭಾಗವೂ, ದೇಶದ ಜನತೆಗೆ ಒಂದಲ್ಲ ಒಂದು ಹೊಸ ತಂತ್ರಜ್ಞಾನಗಳನ್ನ ಪರಿಚಯಿಸುವ ಪ್ರಯತ್ನ ಮಾಡುತ್ತಾ ಬಂದಿದೆ. ಏಳು ವರ್ಷಗಳ ಹಿಂದೆ ಆರಂಭಗೊಂಡಿದ್ದ ಈ ವಿಜ್ಞಾನ ಸಂಸ್ಥೆಯಲ್ಲಿ, ಈಗಾಗಲೇ ದೇಶದೆಲ್ಲೆಡೆ ನೂರಾರು ನೂತನ ಶೈಲಿಯ ಟೆಕ್ನಾಲಜಿಗಳನ್ನ ಪರಿಚಯಿಸಿಕೊಟ್ಟಿದೆ. ಇದೀಗ ಕಟ್ಟಡ ಕಟ್ಟುವ ಹೊಸ ತಂತ್ರಜ್ಞಾನ ಮೂಲಕ ಈ ಸಂಸ್ಥೆಯ ಇಂಜಿನಿಯರ್​ಗಳು ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿ ಕಡಿಮೆ ಖರ್ಚಿನಲ್ಲಿ ನೂತನ ವಿನ್ಯಾಸದ ಇಟ್ಟಿಗೆಗಳನ್ನ ತಯಾರು ಮಾಡಲಾಗುತ್ತಿದ್ದು, ಅತ್ಯಂತ ವೇಗವಾಗಿ ಭದ್ರವಾದ ಕಟ್ಟಡ ಕಟ್ಟುವ ವಿಧಾನವನ್ನ ಭಾರತೀಯ ವಿಜ್ಞಾನ ಸಂಸ್ಥೆ ತೋರಿಸಿ ಕೊಟ್ಟಿದೆ. ಅಷ್ಟೇ ಅಲ್ಲದೆ ಕ್ಯಾಂಪಸ್ ಒಳ ಭಾಗದಲ್ಲಿಯೇ ಮಣ್ಣು ಮತ್ತು ಸಿಮೆಂಟ್ ಮಿಶ್ರಿತವಾಗಿ ಬಳಸಿ, ಯಂತ್ರಗಳ ಸಹಾಯದಿಂದ ಇಟ್ಟಿಗೆಗಳನ್ನ ತಯಾರು ಮಾಡಲಾಗಿದೆ. ಸ್ಥಳೀಯವಾಗಿ ಸಿಗುತ್ತಿರುವ ಮಣ್ಣಿನಿಂದಲೇ ಭದ್ರವಾದ ಇಟ್ಟಿಗೆಗಳನ್ನ ತಯಾರು ಮಾಡುತ್ತಿರುವುದು ಸ್ಥಳೀಯರ ಗಮನ ಸೆಳೆದಿದೆ.

ಇಲ್ಲಿನ ಸೆಂಟರ್ ಫಾರ್ ಸಸ್ಟೈನಬಲ್ ಟೆಕ್ನಾಲಜಿಸ್ ವಿಭಾಗವು ಕ್ಯಾಂಪಸ್ ಒಳಭಾಗದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಈ ನೂತನ ಶೈಲಿಯ ಇಟ್ಟಿಗೆಗಳ ಕಟ್ಟಡಗಳನ್ನ ಪರಿಚಯಿಸಿದ್ದಾರೆ. ಎನ್. ಗೌರಿಪುರ, ನಾಯಕನಹಟ್ಟಿ ಗ್ರಾಮಗಳಲ್ಲಿ ಸಮುದಾಯ ಭವನಗಳನ್ನ ಇದೇ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಿದ್ದಾರೆ. ಅಲ್ಲದೆ, ಜನಸಾಮಾನ್ಯರಿಗಾಗಿ ಕಡಿಮೆ ವೆಚ್ಚದಲ್ಲಿ 50ಕ್ಕೂ ಹೆಚ್ಚು ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಅಷ್ಠೇ ಅಲ್ಲದೆ ಭಾರತೀಯ ವಿಜ್ಞಾನ ಸಂಸ್ಥೆಯೂ, ಅಸ್ತ್ರ ಒಲೆ, ಸಾಯಿಲ್ ಬಾಕ್ಸ್, ಬಯೋ ಗ್ಯಾಸ್, ಬಿಲ್ಡಿಂಗ್ ಟೆಕ್ನಾಲಜಿ ಸೇರಿ ವಿವಿಧ ಹೊಸ ಹೊಸ ತಂತ್ರಜ್ಞಾನಗಳನ್ನ ಕಂಡು ಹಿಡಿದಿದ್ದು, ಕಂಟ್ರಾಕ್ಟರ್​ಗಳು, ಇಂಜಿನಿಯರ್​ಗಳು, ಆರ್ಕಿಟೆಕ್ಟ್​ಗಗಳಿಗೂ ಕೂಡಾ ತರಬೇತಿ ನೀಡುವ ಮೂಲಕ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಕೆರೆಗಳಿಗೆ ವರದಾನವಾದ ಲಾಕ್​​ಡೌನ್ ಸಮಯ; ಉದ್ಯೋಗ ಖಾತ್ರಿಯಿಂದ ಹಸಿರುಮಯವಾದ ಬರದ ಗ್ರಾಮಗಳು

ಒಟ್ಟಾರೆ, ಬರದ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಸ್ವದೇಶಿ ಪರಿಕಲ್ಪನೆಯ ಮೇಲೆ ಹೊಸ ಹೊಸ ಶೈಲಿಯ ತಂತ್ರಜ್ಞಾನಗಳನ್ನು ದೇಶಕ್ಕೆ ಪರಿಚಯಿಸುತ್ತಿದೆ. ಇದೀಗ ನೂತನ ಶೈಲಿಯ ಇಟ್ಟಿಗೆಗಳನ್ನ ಸರಳ ವಿಧಾನದ ಮೂಲಕ ತಯಾರಿಸುವುದನ್ನ ಎಲ್ಲೆಡೆ ಪರಿಚಯಿಸಿ ಕೊಟ್ಟಿದೆ. ಅಲ್ಲದೆ, ಕಡಿಮೆ ಖರ್ಚಿನಲ್ಲಿ ಬೃಹತ್ ಗಾತ್ರದ ಸದೃಢ ಕಟ್ಟಡಗಳನ್ನ ಕಟ್ಟುವ ಹೊಸ ವಿಧಾನವನ್ನ ತೋರಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ವರದಿ: ವಿನಾಯಕ ತೊಡರನಾಳ್
Published by: Vijayasarthy SN
First published: September 22, 2020, 9:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading