ಕಲ್ಲು ಗಣಿಗಾರಿಕೆಗೆ ನಲುಗಿ ಕುಸಿಯುತಿದೆ ಐತಿಹಾಸಿಕ ಕಾರಿಂಜ ಬೆಟ್ಟ : ಗಣಿಗಾರಿಕೆ ವಿರುದ್ಧ ಹೋರಾಟಕ್ಕೆ ಹಿಂದೂ ಸಂಘಟನೆಗಳ ನಿರ್ಧಾರ

ಬೆಟ್ಟದ ಸುತ್ತ ಭಾರೀ ಸ್ಪೋಟಕಗಳನ್ನು ಸಿಡಿಸಿ ಈ ಭಾಗದಲ್ಲಿ ಕಪ್ಪು ಕಲ್ಲುಗಳನ್ನು ತೆಗೆಯಲಾಗುತ್ತಿದ್ದು, ಈ ರೀತಿಯ ಸ್ಪೋಟಕ್ಕೆ ಬೆಟ್ಟದ ಕಲ್ಲಿನ ಪದರಗಳಲ್ಲಿ ಬಿರುಕು ಬಿಡುತ್ತಿವೆ.

news18-kannada
Updated:October 20, 2020, 7:25 AM IST
ಕಲ್ಲು ಗಣಿಗಾರಿಕೆಗೆ ನಲುಗಿ ಕುಸಿಯುತಿದೆ ಐತಿಹಾಸಿಕ ಕಾರಿಂಜ ಬೆಟ್ಟ : ಗಣಿಗಾರಿಕೆ ವಿರುದ್ಧ ಹೋರಾಟಕ್ಕೆ ಹಿಂದೂ ಸಂಘಟನೆಗಳ ನಿರ್ಧಾರ
ಕುಸಿಯುತಿರುವ ಐತಿಹಾಸಿಕ ಕಾರಿಂಜ ಬೆಟ್ಟ
  • Share this:
ಮಂಗಳೂರು(ಅಕ್ಟೋಬರ್​. 20): ಅತ್ಯಂತ ಪುರಾತನ ಕ್ಷೇತ್ರವೆಂದು ಗುರುತಿಸಿಕೊಂಡಿರುವ ಕ್ಷೇತ್ರವೊಂದು ಇದೀಗ ಕುಸಿದು ಬೀಳುವ ಆತಂಕದಲ್ಲಿದೆ. ಸಮುದ್ರ ಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಈ ಕ್ಷೇತ್ರದ ಬುಡದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದೇ ಈ ಕ್ಷೇತ್ರದ ಅಡಿಪಾಯಕ್ಕೆ ಅಲುಗಾಡಲು ಕಾರಣ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ಹಾಗೂ ಅತ್ಯಂತ ಎತ್ತರದಲ್ಲಿರುವ ಕ್ಷೇತ್ರ ಕಾರಿಂಜೇಶ್ವರ ಪ್ರಸ್ತುತ ಇದು ಆತಂಕದಲ್ಲಿದೆ. ಸಮುದ್ರ ಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಕಾರಿಂಜ ಬೆಟ್ಟದ ಮೇಲೆ ಆರಾಧಿಸಲ್ಪಡುತ್ತಿರುವ ಶಿವನನ್ನು ಇಲ್ಲಿ ಕಾರಿಂಜೇಶ್ವರ ಎನ್ನುವ ಹೆಸರಿನಲ್ಲಿ ಆರಾಧಿಸಲಾಗುತ್ತಿದೆ. ಪ್ರಕೃತಿಯ ರಮ್ಯ ರಮಣೀಯ ತಾಣವಾಗಿರುವ ಈ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಕುಸಿಯುವ ಆತಂಕವನ್ನು ಎದುರಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಸುರಿದ ಮಳೆಗೆ ಈ ದೇವಸ್ಥಾನದ ಆವರಣ ಗೋಡೆಯ ಸಹಿತ ಅಡಿಪಾಯದ ಮಣ್ಣು ಹಾಗೂ ಕಲ್ಲು ಬಂಡೆಗಳು ಕುಸಿದು ಬಿದ್ದಿವೆ.

ಮಳೆಯಿಂದ ಕುಸಿದು ಬಿದ್ದಿದೆ ಎಂದು ಮೇಲ್ನೋಟಕ್ಕೆ ಇದನ್ನು ಹೇಳಬಹುದಾಗಿದ್ದರೂ, ಈ ಕುಸಿತಕ್ಕೆ ಈ ಬೆಟ್ಟದ ಬುಡದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಪ್ಪು ಕಲ್ಲುಗಣಿಗಾರಿಕೆಯೇ ಕಾರಣವಾಗಿದೆ.

ಬೆಟ್ಟದ ಸುತ್ತ ಭಾರೀ ಸ್ಪೋಟಕಗಳನ್ನು ಸಿಡಿಸಿ ಈ ಭಾಗದಲ್ಲಿ ಕಪ್ಪು ಕಲ್ಲುಗಳನ್ನು ತೆಗೆಯಲಾಗುತ್ತಿದ್ದು, ಈ ರೀತಿಯ ಸ್ಪೋಟಕ್ಕೆ ಬೆಟ್ಟದ ಕಲ್ಲಿನ ಪದರಗಳಲ್ಲಿ ಬಿರುಕು ಬಿಡುತ್ತಿವೆ. ಈ ಬಿರುಕು ಮಳೆಗಾಲದ ಸಂದರ್ಭದಲ್ಲಿ ನೀರು ಹರಿದು ಬೆಟ್ಟದ ಸುತ್ತ ಕುಸಿಯಲು ಪ್ರಾರಂಭವಾಗಿದೆ. ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದ ಈ ಭಾಗದ ಜನ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸಾರ್ವಜನಿಕರ ಒತ್ತಡಗಳು ಹೆಚ್ಚಾದಾಗ ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಬಂದು ವಾರದ ಮಟ್ಟಿಗೆ ಗಣಿಗಾರಿಕೆಯನ್ನು ನಿಲ್ಲಿಸುವ ಅಧಿಕಾರಿಗಳು ಮತ್ತ ಈ ಕಡೆಗೆ ಗಮನವನ್ನೇ ಹರಿಸುತ್ತಿಲ್ಲ. ಈ ಕಾರಣಕ್ಕಾಗಿ ಅಕ್ರಮ ಕಲ್ಲು ಗಣಿಗಾರಿಕೆ ಇಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಈ ಗಣಿಗಾರಿಕೆಯ ಪರಿಣಾಮ ಇದೀಗ ಐತಿಹಾಸಿಕ ಕಾರಿಂಜ ಬೆಟ್ಟದ ಮೇಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಚಿನ್ಮಯ್ ರೈ ಹೇಳುತ್ತಾರೆ.

ಇದನ್ನೂ ಓದಿ : ಸರ್ಕಾರಕ್ಕೆ ನಮ್ಮ ಕ್ಷೇತ್ರಗಳೇ ಕಾಣಿಸುತ್ತಿಲ್ಲ ಎಂದು ಗೋಗರೆದ ಕಾಂಗ್ರೆಸ್ ಶಾಸಕರು

ಕಾರಿಂಜ ಬೆಟ್ಟ ಅಕ್ರಮ ಕಲ್ಲು ಗಣಿಗಾರಿಕೆಗಾಗಿ ನಡೆಸಲಾಗುತ್ತಿರುವ ಭಾರೀ ಪ್ರಮಾಣದ ಸ್ಪೋಟಕಗಳಿಂದಾಗಿ ಇಂದು ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ. ರಾಜಕೀಯ ನಾಯಕರು ಹಾಗೂ ಬೆಂಬಲಿಗರೇ ಈ ಆಕ್ರಮ ಕಲ್ಲುಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಕಾರಣ ಅಧಿಕಾರಿಗಳೂ ಯಾವುದೇ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಇದೀಗ ಕಾರಿಂಜ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಗಳೂ ಆರಂಭಗೊಂಡಿದೆ. ಈ ಆಂದೋಲನಕ್ಕೆ ಇದೀಗ ಜಿಲ್ಲೆಯ ಹಿಂದೂಪರ ಸಂಘಟನೆಗಳೂ ಸಾಥ್ ನೀಡಿವೆ. ಕಾರಿಂಜ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸದೇ ಹೋದಲ್ಲಿ ಜಿಲ್ಲೆಯಾದ್ಯಂತ ಹೋರಾಟಕ್ಕೂ ಸಂಘಟನೆಗಳು ಮುಂದೆ ಬಂದಿವೆ.
ಗಣಿಗಾರಿಕೆಯ ಸಂದರ್ಭದಲ್ಲಿ ಭಾರೀ ಪ್ರಮಾಣದ ಸ್ಪೋಟಗಳನ್ನು ಸಿಡಿಸುವ ಕಾರಣ ಅತ್ಯಂತ ಎತ್ತರದಲ್ಲಿರುವ ಬೆಟ್ಟಗಳ ಅಡಿಪಾಯದಲ್ಲಿ ಬಿರುಕು ಬೀಳುವುದು ಸಾಮಾನ್ಯವಾಗಿದೆ. ಇದೀಗ ಇದೇ ರೀತಿಯ ಆತಂಕ ಐತಿಹಾಸಿಕ ಹಿನ್ನಲೆಯುಳ್ಳ ಕಾರಿಂಜ ಬೆಟ್ಟವನ್ನೂ ಕಾಡುತ್ತಿದೆ.
Published by: G Hareeshkumar
First published: October 20, 2020, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading