ಕಲಬುರ್ಗಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಎಇಇ ಶವವಾಗಿ ಪತ್ತೆ; ಮರವೇರಿ ಕುಳಿತ ಓರ್ವನ ರಕ್ಷಣೆ

ನಿನ್ನೆ ಕಾರಿನಲ್ಲಿ ಹೋಗುವಾಗ ಹಳ್ಳದ ನೀರಿಗೆ ಕೊಚ್ಚಿಹೋಗಿದ್ದ ಕಲಬುರ್ಗಿ ಜೆಸ್ಕಾಂನ ಸಹಾಯಕ ಎಂಜಿನಿಯರ್ ಸಿದ್ದರಾಮ ಆವುಟೆ ಅವರ ಶವ ಪತ್ತೆಯಾಗಿದೆ. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮರವೇರಿ ಪ್ರಾಣ ಉಳಿಸಿಕೊಂಡಿದ್ದಾರೆ.

news18-kannada
Updated:September 18, 2020, 11:01 AM IST
ಕಲಬುರ್ಗಿ: ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಎಇಇ ಶವವಾಗಿ ಪತ್ತೆ; ಮರವೇರಿ ಕುಳಿತ ಓರ್ವನ ರಕ್ಷಣೆ
ಕಲಬುರ್ಗಿಯಲ್ಲಿ ಮಳೆ ಮತ್ತು ಪ್ರವಾಹ
  • Share this:
ಕಲಬುರ್ಗಿ(ಸೆ. 18): ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶವವಾಗಿ ಪತ್ತೆಯಾದ ಘಟನೆ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಬೊಮ್ನಳ್ಳಿ ಗ್ರಾಮದ ಬಳಿ ನಡೆದಿದೆ. ಮೃತ ಎಇಇಯನ್ನು ಸಿದ್ದಾರಾಮ್ ಆವುಟೆ(33) ಎಂದು ಗುರುತಿಸಲಾಗಿದೆ. ಬೊಮ್ಮಳ್ಳಿ ಹಳ್ಳದಲ್ಲಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಲಬುರ್ಗಿ ಜೆಸ್ಕಾಂ ಕಚೇರಿಯಲ್ಲಿ ಅಸಿಸ್ಟೆಂಟ್ ಎಂಜನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದಾರಾಮ್ ಅವುಟೆ, ಆಳಂದ ತಾಲೂಕಿನ ಯಳಸಂಗಿ ಗ್ರಾಮದ ನಿವಾಸಿ. ನಿನ್ನೆ ರಾತ್ರಿ ಯಳಸಂಗಿಯಿಂದ ಕಲಬುರ್ಗಿಗೆ ಬರ್ತಾಯಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.

ಕಾರ್​ನಲ್ಲಿ ಬರುವಾಗ ಹಳ್ಳದಲ್ಲಿ ಕಾರು ಕೊಚ್ಚಿಕೊಂಡು ಹೋಗಿತ್ತು. ಕಾರಿನಲ್ಲಿದ್ದ ಇಬ್ಬರು ನೀರಿಗೆ ಜಿಗಿದು ದಡ ಸೇರಲು ಯತ್ನಿಸಿದ್ದರು. ಸಿದ್ಧರಾಮ ಜೊತೆಗಿದ್ದ ರಾಜು ಕುಂಬಾರ್ ಮರ ಏರಿ ಕುಳಿತು ರಕ್ಷಣೆಗಾಗಿ ಕೂಗಿಕೊಂಡಿದ್ದ. ನಿಂಬರ್ಗಾ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ರಾಜು ಕುಂಬಾರ್ ನನ್ನು ನಿನ್ನೆ ರಾತ್ರಿಯೇ ರಕ್ಷಿಸಿದ್ದರು. ಆದರೆ ಸಿದ್ಧರಾಮನ ಸುಳಿವು ಮಾತ್ರ ಸಿಕ್ಕಿರಲಿಲ್ಲ. ನಿನ್ನೆ ರಾತ್ರಿಯಿಂದ ಸಿದ್ದಾರಾಮ್​ಗಾಗಿ ಹುಡುಕಾಟ ನಡೆಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಆಳಂದ ತಹಶೀಲ್ದಾರ ದಯಾನಂದ ಪಾಟೀಲ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ತಡರಾತ್ರಿವರೆಗೂ ಹುಟುಕಾಡಿಸಿದ್ದರು. ಆದರೆ ಕತ್ತಲಾಗಿದ್ದುದರಿಂದ, ಹಳ್ಳದಲ್ಲಿ ನೀರಿನ ರಭಸ ಹೆಚ್ಚಿದ್ದುದರಿಂದ ಸಿದ್ಧರಾಮನ ಹುಡುಕಾಟವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಬೆಳಗಾವಿಯಿಂದ ಎನ್.ಡಿ.ಆರ್.ಎಫ್. ತಂಡಕ್ಕೂ ಕರೆಯಿಸಲು ತೀರ್ಮಾನಿಸಲಾಗಿತ್ತು. ಇಂದು ಬೆಳಿಗ್ಗೆ ಎಇಇ ಸಿದ್ಧರಾಮ ಅವುಟೆ ಶವವಾಗಿ ಪತ್ತೆಯಾಗಿದ್ದಾನೆ. ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿ ಮುಳ್ಳ ಕಂಟಿಯೊಂದರ ಬಳಿ ಶವ ಸಿಲುಕಿಕೊಂಡಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರು ಸಿದ್ದರಾಮನ ಶವವನ್ನು ಹೊರ ತೆಗೆದಿದ್ದಾರೆ.

ಭಾರಿ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಮೊನ್ನೆ ಚಿಂಚೋಳಿ ತಾಲೂಕಿ ಗಣಾಪುರದ ಹಳ್ಳದಲ್ಲಿ ಯಾದಗಿರಿ ತಹಶೀಲ್ದಾರ ಪಂಡಿತ ಬಿರಾದಾರ ಎನ್ನುವವರ ಕಾರು ಕೊಚ್ಚಿ ಹೋಗಿತ್ತು. ಮರವೇರಿ ಕುಳಿತಿದ್ದ ತಹಶೀಲ್ದಾರ ಬಿರಾದಾರರನ್ನು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆಳಂದದ ಬೊಮ್ಮನಳ್ಳಿ ಬಳಿ ಸಿಲುಕಿಕೊಂಡವರ ಪೈಕಿ ಒಬ್ಬರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಳೆ ಪ್ರವಾಹಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸುದ್ದಿ ತಿಳಿದು ಕುಟುಂಬ ರೋದನ ಮುಗಿಲು ಮುಟ್ಟುವಂತೆ ಮಾಡಿದೆ. ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಮಾದರಿ ಶಿಕ್ಷಕ ನಾಗಭೂಷಣ್; ಮನೆ, ದೇವಸ್ಥಾನಗಳಲ್ಲಿ ಮಕ್ಕಳನ್ನ ಸೇರಿಸಿ ಪ್ರಾಯೋಗಿಕ ಪಾಠ

ಮಳಖೇಡ ಸೇತುವೆ ಮೇಲೆ ನೀರು;- ಕಲಬುರ್ಗಿ-ಸೇಡಂ ಸಂಚಾರ ಸ್ಥಗಿತ:

ಇನ್ನು, ಕಲಬುರ್ಗಿ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ. ಧಾರಾಕಾರ ಮಳೆಯಿಂದಾಗಿ ಕಾಗಿಣಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಮಳಖೇಡ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕಲಬುರಗಿ - ಸೇಡಂ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಸತತ 36 ಗಂಟೆಯಿಂದ ಸೇತುವೆ ಮೇಲೆ ನೀರು ಹರಿಯುತ್ತಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಳಖೇಡದಲ್ಲಿರೋ ಉತ್ತರಾದಿ ಮಠಕ್ಕೂ ಮಳೆ ನೀರು ನುಗ್ಗಿದೆ. ಮಠದ ನವ ವೃಂದಾವರ ಮಳೆ ನೀರಿನಲ್ಲಿ ಮುಳುಗಡೆಯಾಗಿದೆ.

ಸೇಡಂ ಪಟ್ಟಣದಲ್ಲಿಯೂ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ಬಟಗೇರಾ ಸೇತುವೆ ಮೇಲೆಯೂ ನೀರು ಹರಿಯುತ್ತಿದೆ. ಕಲಬುರ್ಗಿಯಲ್ಲಿಯೂ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮಳೆಯ ಅಬ್ಬರಕ್ಕೆ ಜನಜೀವನ ತತ್ತರಗೊಂಡಿದೆ. ಇದೇ ವೇಳೆ ಮಳೆಯಿಂದ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡ ಘಟನೆ ಕಾಳಗಿಯಲ್ಲಿ ನಡೆದಿದೆ. ಕಾಳಗಿ ತಾಲೂಕಿನ ನೀಲಕಂಠ ಕಾಳೇಶ್ವರ ದೇವಸ್ಥಾನದ ಒಳಗಡೆ ಮಳೆ ನೀರು ನುಗ್ಗಿದೆ. ಉಕ್ಕಿ ಹರಿಯುತ್ತಿರೋ ಕಾಗಿಣಾ, ಬೆಣ್ಣೆತೊರಾ ನದಿಗಳು, ಗಂಡೋರಿ ನಾಲಾ ಜಲಾಶಯವೂ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರ ಬಿಡಲಾಗುತ್ತಿದೆ.ವರದಿ: ಶಿವರಾಮ ಅಸುಂಡಿ
Published by: Vijayasarthy SN
First published: September 18, 2020, 11:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading