ವಿಜಯಪುರ : ದ್ರಾಕ್ಷಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದ ಎಲೆ ಉದುರುವಿಕೆ ರೋಗ

ಪ್ರತಿ ಹೆಕ್ಟೇರ್ ಗೆ 14,500 ರೂಪಾಯಿ ಬೆಳೆ ವಿಮೆ ತುಂಬಿದ್ದರೂ ಪರಿಹಾರದ ಹಣವೂ ಜಮೆಯಾಗದಿರುವುದು ಇವರ ಗಾಯದ ಮೇಲೆ ಬರೆ ಎಳೆದಂತಾಗಿದೆ.

news18-kannada
Updated:September 14, 2020, 7:27 AM IST
ವಿಜಯಪುರ : ದ್ರಾಕ್ಷಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದ ಎಲೆ ಉದುರುವಿಕೆ ರೋಗ
ಎಲೆ ಉದುರುವಿಕೆ ರೋಗಕ್ಕೆ ತುತ್ತಾದ ದ್ರಾಕ್ಷಿ ಬೆಳೆ
  • Share this:
ವಿಜಯಪುರ(ಸೆಪ್ಟೆಂಬರ್​. 14): ದೇಶದಲ್ಲಿಯೇ ಉತೃಷ್ಠ ಗುಣಮಟ್ಟದ ಬೆಳೆ ಬೆಳೆಯುವ ದ್ರಾಕ್ಷಿ ಕಣಜ ವಿಜಯಪುರ ಜಿಲ್ಲೆಯಲ್ಲಿ ಲಾಕ್​ ಡೌನ್ ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದೆ ಕಂಗಾಲಾದ ರೈತರಿಗೆ ಈ ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೊಂದು ಸಮಸ್ಯೆ ಎದುರಾಗಿದೆ. ದ್ರಾಕ್ಷಿ ಬೆಳೆ ಹೂವು ಬಿಡುವ ಮುಂಚೆಯೇ ಕಾಣಿಸಿಕೊಂಡಿರುವ ಎಲೆಗಳ ಉದುರುವಿಕೆ ರೋಗ ದ್ರಾಕ್ಷಿ ಬೆಳೆಗಾರರ ಪಾಲಿಗೆ ಅಕ್ಷರಶಃ ಹುಳಿಯಾಗುತ್ತಿದೆ. ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 14, 800 ಹೆಕ್ಟೇರ್ ನಲ್ಲಿ ರೈತರು ಇದೇ ಬೆಳೆಯನ್ನು ಕೃಷಿ ಮಾಡಿದ್ದಾರೆ. ಆದರೆ, ಈಗ ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಳೆಯ ಎಲೆಗಳು ಉದುರಿ ಬೀಳುತ್ತಿದ್ದು, ರೈತರು ಕಂಗಾಲಾಗುವಂತೆ ಮಾಡಿದೆ. ಪ್ರತಿ ವರ್ಷ ಎಪ್ರೀಲ್ ಮೊದಲ ವಾರದಲ್ಲಿ ದ್ರಾಕ್ಷಿ ಬೆಳೆದ ರೈತರು ಕಟಿಂಗ್ ಮಾಡಿದ್ದಾರೆ. ಒಂದೆಡೆ ವಾತಾವರಣದ ಏರುಪೇರು ಇನ್ನೊಂದೆಡೆ ಕೊರೋನಾ ಹೊಡೆತದಿಂದಾಗಿ ದ್ರಾಕ್ಷಿಗೆ ಸಿಂಪಡಿಸಬೇಕಾದ ಔಷಧಿ ಸಿಗದ ಪರಿಣಾಮ ಇಂದು ದ್ರಾಕ್ಷಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ಹೋಗುತ್ತಿವೆ. 

ಅಕ್ಟೋಬರ್ ತಿಂಗಳಲ್ಲಿ ಎರಡನೇ ಹಂತದ ಕಟಿಂಗ್ ಮಾಡಬೇಕಿದ್ದು, ಈಗ ಕಾಣಿಸಿಕೊಂಡಿರುವ ಎಲೆ ಉದುರುವಿಕೆಯ ರೋಗ ತತ್ತರಿಸುವಂತೆ ಮಾಡಿದೆ ಎಂದು ತಾಜಪುರ ಗ್ರಾಮದ ರೈತ ಬೆಳೆಗಾರರರಾದ ಪರಮೇಶ್ವರ ಕಲಬೀಳಗಿ ಮತ್ತು ಗುರು ಮುಚ್ಚಂಡಿ ಅಳಲು ತೋಡಿಕೊಂಡಿದ್ದಾರೆ.

ಪ್ರತಿ ಹೆಕ್ಟೇರ್ ಗೆ 14,500 ರೂಪಾಯಿ ಬೆಳೆ ವಿಮೆ ತುಂಬಿದ್ದರೂ ಪರಿಹಾರದ ಹಣವೂ ಜಮೆಯಾಗದಿರುವುದು ಇವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೋನಾ ಲಾಕ್ ಡೌನ್ ನಿಂದಾಗಿ ಅಂದು ಸರಿಯಾದ ಸಮಯಕ್ಕೆ ಕೀಟನಾಶಕ ಸಿಗದೆ ರೈತರು ಕಂಗಾಲಾಗಿ ಹೋಗಿದ್ದರು. ಆದರೆ, ಇಂದು ಎಲೆ ಉದುರುವ ರೋಗದಿಂದಾಗಿ ದ್ರಾಕ್ಷಿ ಬೆಳೆ ತತ್ತರಿಸಿ ಹೋಗುವಂತಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 3,500 ಜನ ದ್ರಾಕ್ಷಿ ಬೆಳೆಗಾರರು ಬೆಳೆವಿಮೆ ಮಾಡಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ್ ಇನಾಮದಾರ್, ಈಗಾಗಲೇ ಈ ಸಮಸ್ಯೆಯ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಳೆದ ಎರಡು ವರ್ಷ ಬೆಳೆ ವಿಮೆ ಮಾಡಿಸಿದ ದ್ರಾಕ್ಷಿ ಬೆಳೆಗಾರರಿಗೆ ಒಂದು ತಿಂಗಳಲ್ಲಿ ಸೂಕ್ತ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

ಈ ಸಮಸ್ಯೆ ಮಧ್ಯೆಯೇ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯ ನಾಂದ್ರೇಕರ ಹೇಳುವಂತೆ ಈಗಾಗಲೇ ಬೆಳಗಾವಿ ಕೃಷಿ ವಿಜ್ಞಾನಿಗಳು ಸಮೀಕ್ಷೆಯೊಂದನ್ನು ಮಾಡಿದ್ದು, ಈ ಬಾರಿ ರಾಜ್ಯ ದ್ರಾಕ್ಷಿ ಬೆಳೆಗಾರರ ಪಾಲಿಗೆ ಮರ್ಮಾಘಾತ ಎದುರಾಗಲಿದೆ. ರಾಜ್ಯದಲ್ಲಿ 31000 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಅದರಲ್ಲಿ ಶೇ. 80 ರಷ್ಟು ದ್ರಾಕ್ಷಿ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತಿದೆ. ಶೇ. 80ರಲ್ಲಿ ಶೇ. 70ಕ್ಕಿಂತಲೂ ಹೆಚ್ಚು ದ್ರಾಕ್ಷಿ ಬೆಳೆಯುವುದು ದ್ರಾಕ್ಷಿ ಕಣಜ ವಿಜಯಪುರ ಜಿಲ್ಲೆಯಲ್ಲಿ. ಈ ತೋಟಗಾರಿಕೆ ಬೆಳೆಯನ್ನೇ ನಂಬಿರುವ ದ್ರಾಕ್ಷಿ ಬೆಳೆಗಾರರು ಈ ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.

ಇದನ್ನೂ ಓದಿ : ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನು ತ್ಯಾಗ ಮಾಡಿದವರಿಗೆ ಇನ್ನೂ ಸಿಕ್ಕಿಲ್ಲ ಬೆಳಕು

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್​ ರಿಸರ್ಜ್ ಸದಸ್ಯ ಭೀಮಸೇನ ಎಂ. ಕೋಕರೆ ಅವರು ಹೇಳುವಂತೆ, ಕಳೆದ ವರ್ಷ ಬಾಧಿಸಿದ್ದ ಎಲೆ ಉದುರಿಕೆಯ ರೋಗ ಈಗಲೂ ಮುಂದುವರೆದಿದೆ. ಸಪ್ಟೆಂಬರ್ ಮಾಸಾಂತ್ಯ ಮತ್ತು ಅಕ್ಟೋಬರ್ ಎರಡನೇ ವಾರದ ವರೆಗೆ ನಡೆಯುವ ದ್ರಾಕ್ಷಿ ಬೆಳೆ ಚಾಟ್ನಿ ಸಮಯದಲ್ಲಿ ಹಳೆಯ ರೋಗ ಮತ್ತೆ ವಕ್ಕರಿಸುವ ಸಾಧ್ಯತೆಗಳೂ ಹೆಚ್ಚಾಗಿವೆ. ರೈತರು ಈ ಬೆಳೆ ರಕ್ಷಣೆಗೆ ಸತತ ಔಷಧಿಯನ್ನು ಸಿಂಪಡಿಸಬೇಕಿದೆ. ಆದರೆ, ಸೂರ್ಯನ ದರ್ಶನಕ್ಕೂ ಅವಕಾಶ ನೀಡದ ಮಳೆ ಸಿಂಪಡಿಸಿದ ಔಷಧಿಯನ್ನು ಹೊಳೆಯಲ್ಲಿ ಹುಣಸೆ ಹಣ್ಣ ತೊಳೆಂದಂತೆ ಮಾಡುತ್ತಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ದ್ರಾಕ್ಷಿ ಬೆಳೆಗಾರರು ಕಳೆದ ಎರಡು ವರ್ಷಗಳಿಂದ ತುಂಬಿರುವ ಬೆಳೆವಿಮೆ ಪರಿಹಾರ ಹಣವೂ ಈ ರೈತರ ಪಾಲಿಗೆ ಸಿಗದಿರುವುು ಇವರ ಸಮಸ್ಯೆ ಮತ್ತಷ್ಟು ಉಲ್ಬಣವಾಗುವಂತೆ ಮಾಡಿದೆ. ಒಟ್ಟಾರೆ, ಮಳೆಯ ಕೊರತೆ, ಕೊರೋನಾ ಲಾಕ್ ಡೌನ್, ಅಕಾಲಿಕ ಮಳೆ, ಮೋಡ ಮುಸುಕಿದ ವಾತಾವರಣದಿಂದಾಗಿ ಈ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಮಾತ್ರ ಮುಂದುವರೆಯುತ್ತಲೇ ಇದೆ. ಪರಿಣಾಮ ಈ ದ್ರಾಕ್ಷಿ ಬೆಳೆಗಾರರಿಗೆ ದ್ರಾಕ್ಷಿ ಈ ಬಾರಿಯೂ ಅತೀ ಹುಳಿಯಾಗುವುದರಲ್ಲಿ ಸಂಶಯವಿಲ್ಲ.
Published by: G Hareeshkumar
First published: September 14, 2020, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading